Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 21ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ರಾಮು, ನಂತರ ಕೋಟಿ ರಾಮು ಆಗಿದ್ದರ ಹಿಂದಿದೆ ಅಚ್ಚರಿಯ ಕಥೆ

ರಾಮು ಒಡೆತನದ ರಾಮು ಎಂಟರ್ಪ್ರೈಸಸ್ ಬ್ಯಾನರ್ ಎಂದರೆ ಅದು ಕನ್ನಡ ಚಿತ್ರರಂಗದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಎಂದು ಹೆಸರಾಗುವ ಮಟ್ಟಕ್ಕೆ ತಮ್ಮದೇ ಆದಂತಹ ಸ್ವಂತ ಬ್ರ್ಯಾಂಡ್ ಕಟ್ಟಿ ಬೆಳೆಸಿದ್ದ ಸಾಹಸಿ ಈ ರಾಮು.

ಕೇವಲ 21ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ರಾಮು, ನಂತರ ಕೋಟಿ ರಾಮು ಆಗಿದ್ದರ ಹಿಂದಿದೆ ಅಚ್ಚರಿಯ ಕಥೆ
ನಿರ್ಮಾಪಕ ರಾಮು
Follow us
ಮದನ್​ ಕುಮಾರ್​
|

Updated on: Apr 27, 2021 | 7:38 AM

ಕೊರೊನಾ ವೈರಸ್​ನಿಂದಾಗಿ ನಿರ್ಮಾಪಕ ರಾಮು ಅವರು ನಿಧನರಾಗಿರುವುದು ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ರಾಮು ಅವರ ಸಾಧನೆ ಸಣ್ಣದೇನಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬ ರೀತಿಯಲ್ಲಿ ಸಿನಿಮಾದಿಂದ ಬಂದ ಹಣವನ್ನೆಲ್ಲ ಮತ್ತೆ ಸಿನಿಮಾಗಾಗಿಗೇ ಸುರಿಯುತ್ತಿದ್ದ ಉತ್ಸಾಹಿ ನಿರ್ಮಾಪಕ ರಾಮು. ಅವರ ಬಗ್ಗೆ ಇಡೀ ಸ್ಯಾಂಡಲ್​ವುಡ್​ ಹೆಮ್ಮೆಯ ಮಾತುಗಳನ್ನು ಆಡುತ್ತದೆ. ಅಂದಹಾಗೆ, ರಾಮು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಕೇವಲ 21ನೇ ವಯಸ್ಸಿನಲ್ಲಿ ಎಂಬುದು ವಿಶೇಷ.

ಚಿಕ್ಕ ವಯಸ್ಸಿಗೆ ದೊಡ್ಡ ಯಶಸ್ಸು ಕಂಡಿದ್ದ ರಾಮು

1993ರಲ್ಲಿ ರಾಮು ನಿರ್ಮಾಪಕನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದರು. ಆ ಸಿನಿಮಾ ಸೆಟ್ಟೇರಿದಾಗ ಅವರ ವಯಸ್ಸು ಅಂದಾಜು 21 ವರ್ಷ. ಅಷ್ಟು ಚಿಕ್ಕ ವಯಸ್ಸಿಗೆ ಗಾಂಧಿನಗರಕ್ಕೆ ಕಾಲಿಟ್ಟ ಆ ತರುಣ ಮೊದಲು ನಿರ್ಮಿಸಿದ್ದು ‘ಗೋಲಿ ಬಾರ್​’ ಚಿತ್ರ. ಚೊಚ್ಚಲ ಪ್ರಯತ್ನದಲ್ಲೇ ಅವರು ಭರ್ಜರಿ ಗೆಲುವು ಕಂಡರು. ಆ ಚಿತ್ರಕ್ಕೆ ದೇವರಾಜ್​ ನಾಯಕನಾಗಿದ್ದರು. ಮಾಸ್​ ಶೈಲಿಯಲ್ಲಿ ಮೂಡಿಬಂದ ಆ ಸಿನಿಮಾದ ಗೆಲುವಿನ ಬಳಿಕ ಮರುವರ್ಷವೇ ರಾಮು ‘ಲಾಕಪ್​ ಡೆತ್​’ ಚಿತ್ರ ನಿರ್ಮಿಸಿದರು. ಅದು ಕೂಡ ಸೂಪರ್​ ಹಿಟ್​ ಎನಿಸಿಕೊಂಡಿತು.

ಕೋಟಿ ರೂ. ಬಂಡವಾಳ ಹೂಡಿ ಅಚ್ಚರಿ ಹುಟ್ಟಿಸಿದ್ದ ನಿರ್ಮಾಪಕ

1990ರ ದಶಕದಲ್ಲಿ ಎಂಥ ದೊಡ್ಡ ಸ್ಟಾರ್​ ಸಿನಿಮಾವಾದರೂ ಒಂದು ಕೋಟಿ ರೂ. ಬಜೆಟ್​ ಮೀರುತ್ತಿರಲಿಲ್ಲ. ಆ ಸಮಯದಲ್ಲಿ ರಾಮು ಒಂದು ಹೊಸ ಹೆಜ್ಜೆಯನ್ನಿಟ್ಟರು. ರಾಮು ನಿರ್ಮಾಣ ಮಾಡುತ್ತಿದ್ದ ಸಿನಿಮಾಗಳೆಲ್ಲ ಅದ್ದೂರಿಯಾಗಿ ಇರುತ್ತಿದ್ದವು. ಒಂದು ಕೋಟಿ ರೂ. ಹಣ ಹೂಡಿ ಚಿತ್ರ ನಿರ್ಮಾಣ ಮಾಡುವ ಮೂಲಕ ಅವರು ಗಾಂಧಿನಗರದಲ್ಲಿ ಒಂದು ಬಗೆಯ ಸಂಚಲನವನ್ನೇ ಸೃಷ್ಟಿ ಮಾಡಿದರು. ಕೋಟಿ ಬಜೆಟ್​ ಹಾಕುವ ಕಾರಣದಿಂದ ರಾಮು ಎಂಬ ಅವರ ಹೆಸರಿನ ಜೊತೆಗೆ ‘ಕೋಟಿ’ ಎನ್ನುವ ವಿಶೇಷಣ ಕೂಡ ಸೇರಿಕೊಂಡಿತು. ಆ ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯುವಲ್ಲಿ ರಾಮು ಕೊಡುಗೆ ಗಮನಾರ್ಹ.

ಸ್ವಭಾವ ಸೌಮ್ಯವಾದರೂ ಸಿನಿಮಾದಲ್ಲಿ ಸಖತ್​ ಸೌಂಡು

ರಾಮು ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಕೈ ಹಿಡಿದಿದ್ದೇ ಮಾಸ್​ ಕಮರ್ಷಿಯಲ್​ ಚಿತ್ರಗಳು. ಅವರ ಜೊತೆಗೆ ಒಡನಾಡಿದ ಎಲ್ಲರೂ ಹೇಳುವುದೇನೆಂದರೆ ರಾಮು ತುಂಬ ಸೌಮ್ಯ ಸ್ವಭಾವದ ವ್ಯಕ್ತಿ. ತಾವು ಎಷ್ಟೇ ದೊಡ್ಡ ನಿರ್ಮಾಪಕನಾದರೂ ಯಾರ ಎದುರಿನಲ್ಲಿಯೂ ಅವರು ಜೋರು ಧ್ವನಿಯಲ್ಲಿ ಕೂಗಾಡಿದ್ದಿಲ್ಲ. ಆದರೆ ಅವರು ಸಿನಿಮಾಗಳೆಲ್ಲ ಅಬ್ಬರಿಸುತ್ತಿದ್ದವು. ಮಾಸ್​ ಅಂಶಗಳಿಂದ ಕೂಡಿರುತ್ತಿದ್ದವು. ಗೋಲಿಬಾರ್​, ಲಾಕಪ್​ ಡೆತ್​, ಸರ್ಕಲ್​ ಇನ್ಸ್​ ಪೆಕ್ಟರ್​, ಎಕೆ 47 ಮುಂತಾದ ಸಿನಿಮಾಗಳೇ ಈ ಮಾತಿಗೆ ಸಾಕ್ಷಿ. ಈ ಎಲ್ಲ ಮಾಸ್​ ಕಮರ್ಷಿಯಲ್​ ಚಿತ್ರಗಳು ರಾಮು ಅವರ ಕೈ ಹಿಡಿದವು. ಇವುಗಳನ್ನು ಹೊರತುಪಡಿಸಿ ಕೆಲವು ಫ್ಯಾಮಿಲಿ ಸೆಂಟಿಮೆಂಟ್​ ಚಿತ್ರಗಳನ್ನು ರಾಮು ನಿರ್ಮಿಸಿದ್ದರೂ ಕೂಡ ಅವು ಅವರಿಗೆ ಗೆಲುವು ತಂದುಕೊಡಲಿಲ್ಲ.

ಸ್ಟಾರ್​ ನಟರ ಜೊತೆ ರಾಮು ಜುಗಲ್​ಬಂದಿ

ರಾಮು ಒಡೆತನದ ರಾಮು ಎಂಟರ್​ಪ್ರೈಸಸ್​ ಬ್ಯಾನರ್​ ಎಂದರೆ ಅದು ಕನ್ನಡ ಚಿತ್ರರಂಗದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಎಂದು ಹೆಸರಾಗುವ ಮಟ್ಟಕ್ಕೆ ತಮ್ಮದೇ ಆದಂತಹ ಸ್ವಂತ ಬ್ರ್ಯಾಂಡ್​ ಕಟ್ಟಿಕೊಂಡ ಸಾಹಸಿ ಈ ರಾಮು. ಈ ಬ್ಯಾನರ್​ನಲ್ಲಿ ಕನ್ನಡ ಚಿತ್ರರಂಗದ ಅನೇಕ ಸ್ಟಾರ್​ ಕಲಾವಿದರು ಕೆಲಸ ಮಾಡಿದ್ದಾರೆ. ದೇವರಾಜ್​ ಅವರು ಲಾಕಪ್​ ಡೆತ್​, ಸರ್ಕಲ್​ ಇನ್ಸ್​ಪೆಕ್ಟರ್​, ಗೋಲಿಬಾರ್​ ಮುಂತಾದ ಸಿನಿಮಾಗಳಿಗೆ ಹೀರೋ. ನಂಜುಂಡಿ, ಎಕೆ 47, ರಾಕ್ಷಸ, ತವರಿನ ಸಿರಿ ಚಿತ್ರಗಳಲ್ಲಿ ರಾಮು ಜೊತೆ ಶಿವರಾಜ್​ಕುಮಾರ್ ಕೆಲಸ ಮಾಡಿದರು. ಸುದೀಪ್​, ದರ್ಶನ್​, ಡಾರ್ಲಿಂಗ್​ ಕೃಷ್ಣ, ಸಾಯಿ ಕುಮಾರ್​, ಉಪೇಂದ್ರ, ರವಿಚಂದ್ರನ್​ ಮುಂತಾದವರ ಸಿನಿಮಾಗಳಿಗೆ ರಾಮು ಹಣ ಹೂಡಿದ್ದರು.

ಮಾಲಾಶ್ರೀಗೆ ಬೇರೆ ಇಮೇಜ್​ ನೀಡಿದ ಸಿನಿಮಾಗಳು

ಪತ್ನಿ ಮಾಲಾಶ್ರೀಗಾಗಿ ರಾಮು ನಿರ್ಮಿಸಿದ ಸಿನಿಮಾಗಳೆಲ್ಲವೂ ವಿಶೇಷವಾಗಿದ್ದವು ಎನ್ನಲೇಬೇಕು. ನಾಯಕಿ ಪ್ರಧಾನ ಚಿತ್ರಗಳಿಗೆ ಅಷ್ಟೇನೂ ಪ್ರೋತ್ಸಾಹ ಇಲ್ಲದ ಕಾಲದಲ್ಲಿ ನಟಿ ಮಾಲಾಶ್ರೀ ಅವರ ಅಭಿನಯದ ಮಾಸ್​ ಕಮರ್ಷಿಯಲ್​ ಚಿತ್ರಗಳಿಗೆ ರಾಮು ಬಂಡವಾಳ ಹೂಡಿದರು. ಸಿಬಿಐ ದುರ್ಗಾ, ಲೇಡಿ ಕಮಿಷನರ್​, ಚಾಮುಂಡಿ, ದುರ್ಗಿ, ಗಂಗಾ ಮುಂತಾದ ಸಿನಿಮಾಗಳನ್ನು ರಾಮು ನಿರ್ಮಿಸಿದರು. ಈ ಎಲ್ಲ ಚಿತ್ರಗಳಲ್ಲಿ ಮಾಲಾಶ್ರೀ ಆ್ಯಕ್ಷನ್​ ಅವತಾರ ತಾಳಿದ್ದರು. ವೃತ್ತಿಜೀವನದ ಆರಂಭದಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದ ಅವರಿಗೆ ಈ ಬಗೆಯ ಮಾಸ್​ ಸಿನಿಮಾಗಳು ಬೇರೆಯದೇ ಇಮೇಜ್​ ನೀಡಿದವು.

ಇಷ್ಟೆಲ್ಲ ವಿಶೇಷ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ರಾಮು ಕೊರೊನಾ ವೈರಸ್​ ಸೋಂಕಿನಿಂದ ಸೋಮವಾರ (ಏ.26) ನಿಧನರಾಗಿದ್ದು ನೋವಿನ ಸಂಗತಿ. ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ನನಗಾಗಿ ರಾಜಕುಮಾರ ಸಿನಿಮಾ ಟೈಟಲ್ ಬಿಟ್ಟುಕೊಟ್ಟಿದ್ರು; ನಿರ್ಮಾಪಕ ರಾಮು ನಿಧನ ಸುದ್ದಿ ಕೇಳಿ ಭಾವುಕರಾದ ಪುನೀತ್​  

Producer Ramu Death: ಕೊರೊನಾ ಸೋಂಕಿನಿಂದ ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ರಾಮು ನಿಧನ