ನಟಿ ರಮ್ಯಾ ಈಗ ಸ್ಯಾಂಡಲ್ವುಡ್ನಲ್ಲೂ ಇಲ್ಲ, ರಾಜಕೀಯದಲ್ಲೂ ಇಲ್ಲ. ಹಾಗಿದ್ದರೂ ಕೂಡ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಸದಾ ಕಾಲ ಆ್ಯಕ್ಟೀವ್ ಆಗಿರುತ್ತಾರೆ. ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿನ ತಮ್ಮ ಆತ್ಮೀಯರ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾರೆ. ಇಂದು (ಜೂ.19) ರಾಹುಲ್ ಗಾಂಧಿ ಜನ್ಮದಿನಕ್ಕೆ ರಮ್ಯಾ ಶುಭ ಕೋರಿದ್ದಾರೆ. ಅದು ಅನೇಕರ ಗಮನ ಸೆಳೆಯುತ್ತಿದೆ.
ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ರಾಹುಲ್ ಗಾಂಧಿಗೆ ರಮ್ಯಾ ವಿಶ್ ಮಾಡಿದ್ದಾರೆ. ರಾಹುಲ್ ಗಾಂಧಿಯ ಒಂದು ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆ ಅವರು ಬರೆದಿರುವ ವಾಕ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ‘ಜಗತ್ತನ್ನು ಉತ್ತಮವಾಗಿಸುವ ಅದ್ಭುತ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ರೀತಿ ಬೇರೆ ಯಾರೂ ಇಲ್ಲ’ ಎಂದು ರಮ್ಯಾ ಕ್ಯಾಪ್ಷನ್ ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುತ್ತಾರೆ. ಅವರ ಮಾತು ಮತ್ತು ವರ್ತನೆಗಳನ್ನು ಇಟ್ಟುಕೊಂಡು ಅನೇಕ ಮೀಮ್ಗಳನ್ನು ಮಾಡಿ ಹರಿಬಿಡಲಾಗುತ್ತದೆ. ಆದರೆ ಅವರ ಬಗ್ಗೆ ರಮ್ಯಾ ಅಪಾರ ಗೌರವ ಹೊಂದಿದ್ದಾರೆ. ಹಾಗಾಗಿ ಅವರು ರಾಹುಲ್ ಗಾಂಧಿಯನ್ನು ಈ ಪರಿ ಬಣ್ಣಿಸಿದ್ದಾರೆ. ಸಿನಿಮಾದಿಂದ ದೂರ ಆದ ಬಳಿಕ ರಮ್ಯಾ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದರು. ರಾಹುಲ್ ಗಾಂಧಿ ಆಪ್ತ ವಯಲದಲ್ಲಿ ಅವರು ಗುರುತಿಸಿಕೊಂಡಿದ್ದರು.
ಕೆಲವು ದಿನಗಳ ಹಿಂದೆ ರಮ್ಯಾ ಅವರು ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದ್ದರು. ಆಗ ಅವರಿಗೆ ಹಲವು ಬಗೆಯ ಪ್ರಶ್ನೆಗಳು ಎದುರಾಗಿದ್ದರು. ಮದುವೆ, ಸಿನಿಮಾ ಮತ್ತು ರಾಜಕೀಯದ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳಿದ್ದರು. ಚಿತ್ರರಂಗಕ್ಕೆ ಯಾವಾಗ ಮರಳುತ್ತೀರಿ ಎಂದು ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ್ದ ರಮ್ಯಾ, ‘ನಿಮ್ಮನ್ನು ನಿರಾಸೆಗೊಳಿಸುತ್ತಿರುವುದಕ್ಕೆ ಕ್ಷಮೆ ಇರಲಿ. ನಾನು ಆಸಕ್ತಿ ಕಳೆದುಕೊಂಡಿದ್ದೇನೆ. ಸಿನಿಮಾ ಮತ್ತು ರಾಜಕೀಯದಲ್ಲಿ ನನ್ನ ಕಾಲ ಯಾವಾಗಲೋ ಮುಗಿಯಿತು’ ಎಂದು ಅವರು ಉತ್ತರಿಸಿದ್ದರು.
ಇದನ್ನೂ ಓದಿ:
ಅಭಿ ಚಿತ್ರ ರಿಲೀಸ್ ಆದ ದಿನಾಂಕದಲ್ಲೇ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ ರಮ್ಯಾ