ಚಿನ್ನ ಕಳ್ಳಸಾಗಣೆ ಪ್ರಕರಣ: ವಿಚಾರಣೆ ವೇಳೆ ಮಹತ್ವದ ಅಂಶ ಬಹಿರಂಗಪಡಿಸಿದ ನಟಿ ರನ್ಯಾ

Actress Ranya case: ಚಿನ್ನ ಕಳ್ಳಸಾಗಣೆ ಮಾಡಿ ಬಂಧನಕ್ಕೆ ಒಳಗಾಗಿರುವ ರನ್ಯಾ, ಡಿಆರ್​ಐ ಅಧಿಕಾರಿಗಳ ವಿಚಾರಣೆ ವೇಳೆ ಕೆಲವು ಮಹತ್ವದ ಅಂಶಗಳನ್ನು ಹೊರಗೆ ಹಾಕಿದ್ದಾರೆ. ತಾನು ಇದೇ ಮೊದಲ ಬಾರಿಗೆ ಚಿನ್ನ ತಂದಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. ಅಲ್ಲದೆ ಚಿನ್ನವನ್ನು ಕಳ್ಳಸಾಗಣೆ ಮಾಡುವಂತೆ ನನಗೆ ಬೆದರಿಕೆ ಹಾಕಲಾಗಿತ್ತು ಎಂದು ಸಹ ರನ್ಯಾ ಹೇಳಿದ್ದಾರೆ.

ಚಿನ್ನ ಕಳ್ಳಸಾಗಣೆ ಪ್ರಕರಣ: ವಿಚಾರಣೆ ವೇಳೆ ಮಹತ್ವದ ಅಂಶ ಬಹಿರಂಗಪಡಿಸಿದ ನಟಿ ರನ್ಯಾ
Ranya Rao

Updated on: Mar 06, 2025 | 3:54 PM

ಅಕ್ರಮ ಚಿನ್ನಸಾಗಣೆ (Gold Smuggling) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ (Ranya Rao) ಇದೀಗ ನ್ಯಾಯಾಂಗ ವಶದಲ್ಲಿದ್ದಾರೆ. ನಟಿಯನ್ನು ಬಂಧಿಸಿ, ಪ್ರಕರಣದ ತನಿಖೆ ನಡೆಸುತ್ತಿರುವ ಡಿಆರ್​ಐ ಅಧಿಕಾರಿಗಳಿಗೆ ಪ್ರಕರಣದ ತನಿಖೆ ನಡೆಸಿದಷ್ಟು ಕೆಲ ಹೊಸ ವಿಷಯಗಳು ತಿಳಿದು ಬರುತ್ತಿವೆ. ಈ ಪ್ರಕರಣದಲ್ಲಿ ನಟಿಯ ಮಲತಂದೆ ರಾಮಚಂದ್ರರಾವ್ ಅವರ ಪಾತ್ರವೂ ಇದೆಯಾ ಎಂಬ ವಿಷಯದ ಬಗ್ಗೆ ಡಿಆರ್​ಐ ಅಧಿಕಾರಿಗಳು ಕೂಲಂಕುಶ ತನಿಖೆ ನಡೆಸುತ್ತಿದ್ದಾರೆ. ನಟಿಯ ವಿಚಾರಣೆ ವೇಳೆ ಕೆಲ ಮಹತ್ವದ ವಿಷಯಗಳನ್ನು ನಟಿ ಹೇಳಿದ್ದಾಗಿ ವರದಿ ಆಗಿದೆ.

ತಾನು ಇದೇ ಮೊದಲ ಬಾರಿಗೆ ಚಿನ್ನವನ್ನು ತಂದಿದ್ದಾಗಿ ನಟಿ ರನ್ಯಾ ವಿಚಾರಣಾ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೆ ತನ್ನನ್ನು ಬೆದರಿಸಿ ಈ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಸಹ ನಟಿ ಹೇಳಿದ್ದಾರೆ ಎನ್ನಲಾಗುತ್ತಿದೆ. ರನ್ಯಾ ಯಾರಿಂದ ಚಿನ್ನ ಪಡೆದುಕೊಂಡು ಇಲ್ಲಿಗೆ ತರುತ್ತಿದ್ದರು? ರನ್ಯಾ ತಂದ ಚಿನ್ನವನ್ನು ಇಲ್ಲಿ ಯಾರು ಪಡೆದುಕೊಳ್ಳುತ್ತಿದ್ದರು ಎಂಬಿತ್ಯಾದಿ ಮಾಹಿತಿಗಳ ಹುಡುಕಾಟದಲ್ಲಿದೆ ಡಿಆರ್​ಐ.

ಇದನ್ನೂ ಓದಿ:ಅಪ್ಪ ಪೋಲಿಸ್.. ಮಗಳು ಕಳ್ಳಿ.. ನಟಿ ರನ್ಯಾ ಚಿನ್ನದ ರಹಸ್ಯ!

ಇದೀಗ ರನ್ಯಾರ ಮಲತಂದೆ ರಾಮಚಂದ್ರರಾವ್ ಅವರ ಮೇಲೂ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಭದ್ರತೆಯಿಂದ ವಿನಾಯಿತಿ ಸಿಗಲು ರಾಮಚಂದ್ರ ರಾವ್ ಕಾರಣ ಇರಬಹುದೇ ಎಂಬ ಬಗ್ಗೆ ತನಿಖೆಗಳು ನಡೆಯುತ್ತಿವೆ. ರನ್ಯಾ ಪ್ರತಿಬಾರಿ ವಿಮಾನ ನಿಲ್ದಾಣಕ್ಕೆ ಹೋದಾಗಲೂ ಸರ್ಕಾರದ ಉನ್ನತ ಅಧಿಕಾರಿಗಳು ಬಳಸುವ ಪ್ರೋಟೊಕಾಲ್ ಬಳಸಿ ಪರಿಶೀಲನೆಯಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ಹಾಗಾಗಿ ಅವರು ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನದ ಪತ್ತೆ ಆಗಿರಲಿಲ್ಲ.

ನಟಿ ರನ್ಯಾರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಹಲವು ಅನುಮಾನಗಳು ಎದ್ದಿದ್ದು ತನಿಖಾಧಿಕಾರಿಗಳು ಎಲ್ಲದಕ್ಕೂ ಉತ್ತರ ಹುಡುಕುತ್ತಿದ್ದಾರೆ. ನಟಿ ರನ್ಯಾ ಕೇವಲ 15 ದಿನದಲ್ಲಿ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿರುವುದು ಮೊದಲಿಗೆ ಅನುಮಾನಕ್ಕೆ ಕಾರಣವಾಗಿದೆ. ಅದೂ, ರನ್ಯಾ, ದುಬೈಗೆ ಹೋದ ಮರುದಿನವೇ ಭಾರತಕ್ಕೆ ವಾಪಸ್ಸಾಗುತ್ತಿದ್ದರಂತೆ. ರನ್ಯಾ, ದುಬೈನಲ್ಲಿ ಯಾರನ್ನು ಭೇಟಿ ಮಾಡುತ್ತಿದ್ದರು. ಅವರ ಹಿಂದಿರುವ ವ್ಯಕ್ತಿಗಳು ಯಾರು? ಎಂಬಿತ್ಯಾದಿ ವಿಷಯಗಳು ಮುಂದಿನ ದಿನಗಳಲ್ಲಿ ಹೊರಬರಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ