ವಂಚನೆ ಆರೋಪ: ನಿರ್ದೇಶಕಿ ವಿಸ್ಮಯ ಗೌಡ ವಿರುದ್ಧ ಎಫ್ಐಆರ್
Vismaya Gowda: ಸಿನಿಮಾ ನಿರ್ದೇಶಕಿ, ಮೋಟಿವೇಷನಲ್ ಸ್ಪೀಕರ್, ಮ್ಯಾನಿಫೆಸ್ಟೇಷನ್ ಕೋಚ್ ಎಂದೆಲ್ಲ ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದ ವಿಸ್ಮಯ ಗೌಡ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಹಿಮಾನ್ವಿ ಎಂಬುವರು ನ್ಯಾಯಾಲಯದಲ್ಲಿ ದಾಖಲಿಸಿದ್ದ ಖಾಸಗಿ ದೂರಿನ ಮೇರೆಗೆ ನಟಿಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.

ನಿರ್ದೇಶಕಿ, ಮೋಟಿವೇಷನಲ್ ಸ್ಪೀಕರ್, ಮ್ಯಾನಿಫೆಸ್ಟೇಷನ್ ಕೋಚ್, ಲೈಫ್ ಕೋಚ್ ಎಂದೆಲ್ಲ ತಮ್ಮನ್ನು ಪರಿಚಯಿಸಿಕೊಳ್ಳುವ ವಿಸ್ಮಯ ಗೌಡ (Vismaya Gowda) ವಿರುದ್ಧ ಎಫ್ಐಆರ್ ದಾಖಲಾಗಿದೆ. ವಿಸ್ಮಯಾ ಗೌಡ ವಿರುದ್ಧ ಹಿಮಾನ್ವಿ ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ₹6.5 ಲಕ್ಷ ಸಾಲ ಪಡೆದು ಹಿಂದಿರುಗಿಸದೇ ವಂಚನೆ (Cheating) ಮಾಡಿದ್ದಾರೆ, ಸಾಲ ಮರಳಿಸುವಂತೆ ಕೇಳಿದಾಗ ಬೆದರಿಕೆ ಹಾಕಿದ್ದಾರೆ ಎಂದು ಹಿಮಾನ್ವಿ ದೂರು ದಾಖಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ವಿಸ್ಮಯ ವಿರುದ್ಧ ಎಫ್ಐಆರ್ (FIR) ದಾಖಲಿಸುವಂತೆ ಆದೇಶಿಸಿದೆ. ಅದರಂತೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ವಿಸ್ಮಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದೂರಿನ ಸಾರಾಂಶದಂತೆ, 2019 ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಹಿಮಾನ್ವಿಗೆ, ವಿಸ್ಮಯ ಗೌಡ ಪರಿಚಯವಾಗಿದ್ದರು. ತಾನು ಸಿನಿಮಾ ನಿರ್ದೇಶಕಿ ಹಾಗೂ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ಲೈಫ್ ಕೋಚರ್ ಆಗಿರುವುದಾಗಿ ಹೇಳಿಕೊಂಡಿದ್ದರು. ಪಿರ್ಯಾದುದಾರರು ಈಕೆಯ ಬಗ್ಗೆ ತಿಳಿದುಕೊಂಡು ಆರೋಪಿತೆಯ ಬಳಿ ಕೆಲವು ಬಾರಿ ಮ್ಯಾನಿಫೆಸ್ಟೇಶನ್ ಕ್ಲಾಸಸ್ ತೆಗೆದುಕೊಂಡಿದ್ದು ಆರೋಪಿತೆ ಕೆಲವು ಬಾರಿ ನಮ್ಮ ಕ್ಲಿನಿಕ್ಕೆ ಭೇಟಿ ನೀಡುತ್ತಿದ್ದು ಫೆಬ್ರವರಿ 2024 ರಲ್ಲಿ ವಿಸ್ಮಯಗೌಡ, ಹಿಮಾನ್ವಿ ಮನೆಗೆ ಭೇಟಿ ನೀಡಿದಾಗ ತನಗೆ ಹಣಕಾಸಿನ ತೊಂದರೆ ಇದ್ದು ಹಣ ನೀಡುವಂತೆ ಕೇಳಿಕೊಂಡಿದ್ದರು. ಆಗ ಹಿಮಾನ್ವಿ ಆರೋಪಿತೆಗೆ ತಮ್ಮ ತಾಯಿಯ ಖಾತೆಯಿಂದ ಪಡೆದ 5,00,000 ರೂ ಹಣವನ್ನು ಮತ್ತು ತನ್ನ ಉಳಿತಾಯ ಖಾತೆಯಲ್ಲಿದ್ದ 1,50,000 ರೂಗಳನ್ನು ಸೇರಿ ಒಟ್ಟು 6,50,000 ರೂ ಗಳನ್ನು ನೀಡಿದ್ದರು. ಆ ನಂತರ ಆರೋಪಿತೆ ಶ್ರೀಮತಿ ವಿಸ್ಮಯಗೌಡ ರವರು ಪೋಸ್ಟ್ ಡೆಟೆಡ್ ಚೆಕ್ ನಂ-080118 ರ ಮೂಲಕ 6,50,000 ರೂ ಗಳನ್ನು ವಿಸ್ಮಯ ಗೌಡ, ಹಿಮಾನ್ವಿಗೆ ನೀಡಿದ್ದರು.
ಇದನ್ನೂ ಓದಿ:ಪ್ರೆಗ್ನೆಂಟ್ ಆದ ಬಳಿಕ ಮಹತ್ವದ ಸಿನಿಮಾದಿಂದ ಹೊರಬಿದ್ದ ಟಾಕ್ಸಿಕ್ ನಟಿ ಕಿಯಾರಾ?
ಆದರೆ ಆ ಚೆಕ್, ಸಹಿ ಸರಿ ಇಲ್ಲ ಎಂಬ ಕಾರಣಕ್ಕೆ ಬ್ಯಾಂಕ್ನಲ್ಲಿ ನಗದು ಆಗಿರಲಿಲ್ಲ. ಅದಾದ ಬಳಿಕ ಹಿಮಾನ್ವಿ, ವಿಸ್ಮಯ ಬಳಿ ಸಾಲ ಮರುಪಾವತಿ ಮಾಡುವಂತೆ ಕೇಳಿದಾಗ ವಿಸ್ಮಯ ಗೌಡ, ಅವಾಚ್ಯ ಶದ್ಬಗಳಿಂದ ನಿಂದಿಸಿ, ಬೆದರಿಕೆ ಹಾಕಿರುವುದಲ್ಲದೆ, ಬೇಕೆಂದೇ ಚೆಕ್ಗೆ ತಪ್ಪಾಗಿ ಸಹಿ ಹಾಕಿರುವುದಾಗಿ ಹೇಳಿದ್ದಾರೆ. ಇದೀಗ ಹಿಮಾನ್ವಿ, ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು, ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರು ವಿಸ್ಮಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ವಿಸ್ಮಯ ಗೌಡ, ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದವರು. ಈ ಹಿಂದೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದರು. ‘ಡಿಯರ್ ಕಣ್ಮಣಿ’ ಸಿನಿಮಾ ಮಾಡಲು ಮುಂದಾಗಿದ್ದರು. ಕಿಶನ್ ಬೆಳಗಲಿ, ಸಾತ್ವಿಕಾ, ಪ್ರವೀಣ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ಮುಂದಾಗಿದ್ದರು. ಸಿನಿಮಾದ ಮುಹೂರ್ತಕ್ಕೆ ನಟ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸಿದ್ದರು. ಇನ್ಸ್ಟಾಗ್ರಾಂನಲ್ಲಿ ತಮ್ಮ ಐಶಾರಾಮಿ ಜೀವನದ ಚಿತ್ರ, ವಿಡಿಯೋಗಳನ್ನು ಆಗಾಗ್ಗೆ ಅಪ್ಲೋಡ್ ಮಾಡುತ್ತಲೇ ಇರುತ್ತಿದ್ದರು ವಿಸ್ಮಯ. ಜೊತೆಗೆ ಮ್ಯಾನಿಫೆಸ್ಟೇಷನ್ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ವಂಚನೆ ಪ್ರಕರಣದ ಆರೋಪಿ ಆಗಿದ್ದಾರೆ.
ಇದೇ ಸಮಯದಲ್ಲಿ ಇನ್ಸ್ಟಾಗ್ರಾಂ ನಲ್ಲಿ ಹಿಮಾನ್ವಿ ವಿರುದ್ಧ ಪೋಸ್ಟ್ ಹಂಚಿಕೊಂಡಿರುವ ವಿಸ್ಮಯ ಗೌಡ, ಹಿಮಾನ್ವಿ ಒಬ್ಬ ವಂಚಕಿ, ಆಕೆಯ ವಿರುದ್ಧ ನಾನು ಕೇಸು ದಾಖಲಿಸಿದ್ದೆ. ಕೇಸಿನಲ್ಲಿ ನನಗೆ ಜಯ ದೊರೆತಿದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಹಿಮಾನ್ವಿ ನಡೆಸುತ್ತಿದ್ದ ಕಾಸ್ಮೆಟಿಕ್ ಕ್ಲೀನಿಕ್ ವಿರುದ್ಧ ತಾವು ಕೇಸು ದಾಖಲಿಸಿದ್ದಾಗಿ ಹೇಳಿರುವ ವಿಸ್ಮಯ ಗೌಡ, ಇಲಾಖೆಯು ಹಿಮಾನ್ವಿಗೆ ನೊಟೀಸ್ ನೀಡಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Thu, 6 March 25