ಶಿವಣ್ಣ ಮನೆಯಲ್ಲೇ ನಡೆಯಿತು ತೆಲುಗು ಸಿನಿಮಾಕ್ಕೆ ಲುಕ್ ಟೆಸ್ಟ್, ಶೂಟಿಂಗ್ ಯಾವಾಗ?
Shiva Rajkumar: ಅಮೆರಿಕದಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮರಳಿದ್ದ ಶಿವರಾಜ್ ಕುಮಾರ್ ಕಳೆದ ಕೆಲ ವಾರದಿಂದ ವಿಶ್ರಾಂತಿಯಲ್ಲಿದ್ದರು. ಇದೀಗ ಶಿವಣ್ಣ ಚಿತ್ರೀಕರಣಕ್ಕೆ ಮರಳಿದ್ದಾರೆ. ತಮ್ಮ 131ನೇ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ. ಅದರ ಬೆನ್ನಲ್ಲೆ ಹೊಸ ತೆಲುಗು ಸಿನಿಮಾಕ್ಕಾಗಿ ಲುಕ್ ಟೆಸ್ಟ್ ಅನ್ನು ಸಹ ಮುಗಿಸಿದ್ದು, ಶೀಘ್ರವೇ ಆ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ.

ಅನಾರೋಗ್ಯದಿಂದ ಬಳಲಿದ್ದ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ, ವಿಶ್ರಾಂತಿ ಎಲ್ಲವನ್ನೂ ಮುಗಿಸಿ ಇದೀಗ ಮತ್ತೆ ಶೂಟಿಂಗ್ಗೆ ಮರಳಿದ್ದಾರೆ. ಶೂಟಿಂಗ್ಗೆ ಮರಳಿರುವ ವಿಡಿಯೋ ಹಂಚಿಕೊಂಡಿದ್ದ ಶಿವರಾಜ್ ಕುಮಾರ್, ‘ನನ್ನ ದೇವಸ್ಥಾನಕ್ಕೆ ಮರಳಿದ್ದೇನೆ’ ಎಂದಿದ್ದರು. ಶಿವರಾಜ್ ಕುಮಾರ್ ವಿಶ್ರಾಂತಿ ಮುಗಿಸಿ ಶೂಟಿಂಗ್ಗೆ ಮರಳಿದ್ದಾರೆ ಎಂದ ಕೂಡಲೇ ಅವರಿಗಾಗಿ ಕಾಯುತ್ತಿದ್ದ ಇತರೆ ಸಿನಿಮಾ ತಂಡಗಳು ಶಿವಣ್ಣನಿಗಾಗಿ ಅವರ ಮನೆಗೆ ಬಂದಿವೆ. ಇದೀಗ ತೆಲುಗು ಸಿನಿಮಾ ತಂಡವೊಂದು, ಶಿವಣ್ಣನ ಮನೆಯಲ್ಲಿಯೇ ಅವರ ಲುಕ್ ಟೆಸ್ಟ್ ಮಾಡಿದ್ದಾರೆ.
ಶಿವರಾಜ್ ಕುಮಾರ್ ಅವರು ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುವ ಮುಂಚೆಯೇ ಅವರು ತೆಲುಗಿನ ರಾಮ್ ಚರಣ್ ನಟನೆಯ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಶಿವಣ್ಣ ಅಮೆರಿಕಕ್ಕೆ ತೆರಳುವ ಮುಂಚೆಯೇ ಸಿನಿಮಾದ ಶೂಟಿಂಗ್ ಸಹ ಆರಂಭವಾಗಿತ್ತು. ಆದರೆ ಶಿವಣ್ಣ ಅಮೆರಿಕಕ್ಕೆ ತೆರಳಿದ್ದರಿಂದ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿರಲಿಲ್ಲ. ಚಿತ್ರತಂಡವೂ ಸಹ ಶಿವಣ್ಣ ಗುಣಮುಖರಾಗಲೆಂದು ಕಾಯುತ್ತಿತ್ತು. ಇದೀಗ ಶಿವಣ್ಣ, ಚಿತ್ರೀಕರಣಕ್ಕೆ ಮರಳಲು ಫಿಟ್ ಆದ ಬೆನ್ನಲ್ಲೆ ಶಿವಣ್ಣನ ಲುಕ್ ಟೆಸ್ಟ್ ಮಾಡಲಾಗಿದೆ.
ಸಿನಿಮಾದ ನಿರ್ದೇಶಕ ಬುಚ್ಚಿಬಾಬು ಸನಾ ಅವರು ಇನ್ನೂ ಕೆಲವು ಕಲಾವಿದರೊಟ್ಟಿಗೆ ಶಿವಣ್ಣನ ಮನೆಗೆ ಬಂದು ಅಲ್ಲಿಯೇ ಲುಕ್ ಟೆಸ್ಟ್ ಮಾಡಿದ್ದಾರೆ. ಶಿವಣ್ಣನಿಗೆ ಒಪ್ಪುವ ಲುಕ್ ಅನ್ನು ಚೂಸ್ ಮಾಡಿ ಫೈನಲ್ ಸಹ ಮಾಡಿ ಹೋಗಿದ್ದಾರೆ. ಸಿನಿಮಾದಲ್ಲಿ ರಾಮ್ ಚರಣ್ ಅವರ ಲುಕ್ ಅನ್ನು ಖ್ಯಾತ ಕಲಾವಿದ ಹಕೀಮ್ ಮಾಡಿದ್ದರು. ಈಗ ಶಿವಣ್ಣನ ಲುಕ್ ಅನ್ನು ಸಹ ಇವರೇ ಸೆಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಲುಕ್ ಟೆಸ್ಟ್ ಓಕೆ ಆಗಿದ್ದು ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣಲ್ಲಿ ಶಿವಣ್ಣ ಭಾಗಿ ಆಗಲಿದ್ದಾರೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ
ಶಿವರಾಜ್ ಕುಮಾರ್ ಇದೀಗ ತಮ್ಮ 131ನೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೊಂದು ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭ ಆಗಿದೆ. ಚಿಕಿತ್ಸೆಗೆ ತೆರಳುವ ಮುಂಚೆ ’45” ಸಿನಿಮಾದ ಚಿತ್ರೀಕರಣವನ್ನು ಶಿವಣ್ಣ ಮುಗಿಸಿದ್ದರು. ಈಗ 131ನೇ ಸಿನಿಮಾ ಅದರ ಜೊತೆಗೆ ಆರ್ಸಿ 16 ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ ‘ಭೈರವನ ಕೊನೆ ಪಾಠ’ ಸಿನಿಮಾದಲ್ಲಿ ಶಿವಣ್ಣ ನಟಿಸಲಿದ್ದಾರೆ. ಈ ಸಿನಿಮಾವನ್ನು ‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ