ಸಿಂಪಲ್ ಸುನಿ ನಿರ್ದೇಶನದ ಹೊಸ ಸಿನಿಮಾಗೆ ಶುಭ ಕೋರಿದ ರಶ್ಮಿಕಾ ಮಂದಣ್ಣ

‘ಮೋಡ ಕವಿದ ವಾತಾವರಣ’ ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ಅವರು ಶುಭ ಹಾರೈಸಿದ್ದಾರೆ. ಸಿಂಪಲ್ ಸುನಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಶೀಲಮ್, ಮೋಕ್ಷಾ ಕುಶಾಲ್, ಸಾತ್ವಿಕಾ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಜೂನ್ 26ಕ್ಕೆ ಈ ಸಿನಿಮಾ ತೆರೆಕಾಣಲಿದೆ.

ಸಿಂಪಲ್ ಸುನಿ ನಿರ್ದೇಶನದ ಹೊಸ ಸಿನಿಮಾಗೆ ಶುಭ ಕೋರಿದ ರಶ್ಮಿಕಾ ಮಂದಣ್ಣ
Rashmika Mandanna

Updated on: Apr 03, 2026 | 10:52 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಕನ್ನಡ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ಹಲವು ವರ್ಷಗಳಿಂದ ಅವರು ಯಾವುದೇ ಹೊಸ ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಅವರು ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡದ ಸೆಲೆಬ್ರಿಟಿಗಳ ಜೊತೆಗೂ ಅವರು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಈಗ ಅವರು ಸಿಂಪಲ್ ಸುನಿ (Simple Suni) ನಿರ್ದೇಶನದ ಹೊಸ ಸಿನಿಮಾಗೆ ಶುಭ ಕೋರಿದ್ದಾರೆ. ‘ಮೋಡ ಕವಿದ ವಾತಾವರಣ’ (Moda Kavida Vaatavarana) ಸಿನಿಮಾಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ ಅವರ ‘ಚಮಕ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದರು. ಹಾಗಾಗಿ ಅವರಿಬ್ಬರ ನಡುವೆ ಬಾಂಧವ್ಯ ಇದೆ. ಈಗ ಸುನಿ ಅವರು ‘ಮೋಡ ಕವಿದ ವಾತಾವರಣ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಹೊಸ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿದೆ. ಅದನ್ನು ರಶ್ಮಿಕಾ ಮಂದಣ್ಣ ಅವರು ಶೇರ್ ಮಾಡಿದ್ದಾರೆ.

ಸುನಿ ಅವರ ‘ಎಕ್ಸ್’ (ಟ್ವಿಟರ್) ಖಾತೆಯ ಪೋಸ್ಟ್ ಅನ್ನು ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು, ‘ಸುನಿ ಸರ್ ನಿಮಗೆ ಮತ್ತು ನಿಮ್ಮ ಸಿನಿಮಾ ತಂಡಕ್ಕೆ ಶುಭ ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ‘ತುಂಬು ಹೃದಯದ ಧನ್ಯವಾದಗಳು. ಸದಾ ಖುಷಿಯಾಗಿರಿ’ ಎಂದು ಸುನಿ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡದ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರು ವಿಶ್ ಮಾಡಿದ್ದು ನೋಡಿ ಹಲವರಿಗೆ ಅಚ್ಚರಿ ಆಗಿದೆ. ನೆಟ್ಟಿಗರು ಕಮೆಂಟ್​ಗಳ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿ ಯುವ ನಟ ಶೀಲಮ್ ಅವರು ಹೀರೋ ಆಗಿ ಅಭಿನಯಿಸಿದ್ದಾರೆ. ಶೀರ್ಷಿಕೆ ಮೂಲಕ ಈ ಸಿನಿಮಾ ಕುತೂಹಲ ಹೆಚ್ಚಿಸಿದೆ. ಜೂನ್ 26ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸುನಿ ಅವರ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ‘ರಾಮ್‌ ಮೂವೀಸ್’ ಸಂಸ್ಥೆಯೇ ಈಗ ‘ಮೋಡ ಕವಿದ ವಾತಾವರಣ’ ಚಿತ್ರಕ್ಕೆ ಬಂಡವಾಳ ಹೂಡಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹನಿಮೂನ್ ಫೋಟೋ ವೈರಲ್

ಈ ಸಿನಿಮಾಗೆ ಸಂತೋಷ್ ರೈ ಪಾತಾಜೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಜೂಡಾ ಸ್ಯಾಂಡಿ ಅವರು ಸಂಗೀತ ನೀಡಿದ್ದಾರೆ. ಆದಿತ್ಯ ಕಶ್ಯಪ್ ಅವರ ಸಂಕಲನ‌ ಈ ಚಿತ್ರಕ್ಕಿದೆ. ಸೈಂಟಿಫಿಕ್‌ ಫಿಕ್ಷನ್‌ ಲವ್ ಸ್ಟೋರಿ ಈ ಸಿನಿಮಾದಲ್ಲಿ ಇರಲಿದೆ. ಶೀಲಮ್ ಅವರ ಜೊತೆ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us