ವಿವಿಧ ನಗರಗಳಲ್ಲಿ ಬಿಡುಗಡೆ ಆಗಲಿದೆ ರವಿಚಂದ್ರನ್​ ನಟನೆಯ ‘ದ ಜಡ್ಜ್​ಮೆಂಟ್​’ ಸಿನಿಮಾ

|

Updated on: May 17, 2024 | 7:52 PM

‘ದ ಜಡ್ಜ್​ಮೆಂಟ್​’ ಟ್ರೇಲರ್​ ರಿಲೀಸ್​ ಆಗಿದೆ. ರವಿಚಂದ್ರನ್​ ಅವರ ವೃತ್ತಿ ಜೀವನದಲ್ಲಿ ಇದು ಒಂದು ಭಿನ್ನ ಸಿನಿಮಾ. ‘ಸಾಮಾನ್ಯವಾಗಿ ನನ್ನ ಸಿನಿಮಾ‌ಗಳು ಹಾಡುಗಳಿಗೆ ಫೇಮಸ್​. ಆದರೆ ಈ ಸಿನಿಮಾದಲ್ಲಿ ನನಗೆ ಒಂದೂ ಸಾಂಗ್​ ಇಲ್ಲ. ಸಿನಿಮಾದ ಶೀರ್ಷಿಕೆ ‘ದ ಜಡ್ಜ್​ಮೆಂಟ್’. ಆದರೆ ಪ್ರೇಕ್ಷಕರು ನೀಡುವ ಜಡ್ಜ್​ಮೆಂಟ್ ಅಂತಿಮ’ ಎಂದು ರವಿಚಂದ್ರನ್ ಹೇಳಿದ್ದಾರೆ.

ವಿವಿಧ ನಗರಗಳಲ್ಲಿ ಬಿಡುಗಡೆ ಆಗಲಿದೆ ರವಿಚಂದ್ರನ್​ ನಟನೆಯ ‘ದ ಜಡ್ಜ್​ಮೆಂಟ್​’ ಸಿನಿಮಾ
ಲಕ್ಷ್ಮಿ ಗೋಪಾಲಸ್ವಾಮಿ, ರವಿಚಂದ್ರನ್​, ಮೇಘನಾ ಗಾಂವ್ಕರ್
Follow us on

ಲೋಕಸಭಾ ಚುನಾವಣೆ ಕಾವು ಕಡಿಮೆ ಆಗುತ್ತಿದ್ದಂತೆಯೇ ಸಿನಿಮಾರಂಗದ ಚಟುವಟಿಕೆಗಳು ಗರಿಗೆದರಲಿವೆ. ಅನೇಕ ಸಿನಿಮಾಗಳು (Kannada Cinema) ಬಿಡುಗಡೆಗೆ ಸಜ್ಜಾಗಿವೆ. ‘ಜಿ9 ಕಮ್ಯುನಿಕೇಷನ್​ ಮೀಡಿಯಾ ಆ್ಯಂಡ್​ ಎಂಟರ್​ಟೇನ್ಮೆಂಟ್​’ ಸಂಸ್ಥೆಯ ಮೂಲಕ ನಿರ್ಮಾಣ ಆಗಿರುವ ಕನ್ನಡದ ‘ದ ಜಡ್ಜ್​ಮೆಂಟ್’ ಸಿನಿಮಾ (The Judgement Movie) ಕೂಡ ಬಿಡುಗಡೆ ದಿನಾಂಕ ಘೋಷಿಸಿಕೊಂಡಿದೆ. ಮೇ 24ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ‘ಕ್ರೇಜಿ ಸ್ಟಾರ್​’ ರವಿಚಂದ್ರನ್ (Ravichandran) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ‘ದ ಜಡ್ಜ್​ಮೆಂಟ್​’ ಸಿನಿಮಾ ಟ್ರೇಲರ್​ ಅನಾವರಣ ಮಾಡಲಾಯಿತು. ಖ್ಯಾತ ನಿರ್ಮಾಪಕ ಉದಯ್ ಕೆ. ಮಹ್ತಾ ಅವರು ಟ್ರೇಲರ್ ಬಿಡುಗಡೆ ಮಾಡಿದರು. ಈ ಸಿನಿಮಾದಲ್ಲಿ ರವಿಚಂದ್ರನ್ ಅವರು ಲಾಯರ್​ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ.

ಗುರುರಾಜ ಕುಲಕರ್ಣಿ ಅವರು ‘ದ ಜಡ್ಜ್​ಮೆಂಟ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ರವಿಚಂದ್ರನ್ ಅವರಿಗಾಗಿಯೇ ಮಾಡಿರುವ ಕಥೆ ಇದು’ ಎಂದು ಅವರು ಹೇಳಿದ್ದಾರೆ. ಆ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ‘ಲೀಗಲ್ ಥ್ರಿಲ್ಲರ್ ಜಾನರ್​ನ ಸಿನಿಮಾ ಇದು. ‘ಯುದ್ಧಕಾಂಡ’ ಸಿನಿಮಾದಲ್ಲಿ ಲಾಯರ್​ ಪಾತ್ರ ಮಾಡಿದ ರವಿಚಂದ್ರನ್ ಅವರ ನಟನೆ ಇಂದಿಗೂ ಜನಪ್ರಿಯವಾಗಿದೆ. ಹಲವು ವರ್ಷಗಳ ಬಳಿಕ ಈ‌ ಸಿನಿಮಾದಲ್ಲಿ ಮತ್ತೆ ಲಾಯರ್​ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ’ ಎಂದು ಗುರುರಾಜ ಕುಲಕರ್ಣಿ ಹೇಳಿದರು.

ಇದನ್ನೂ ಓದಿ: ‘ಚುನಾವಣೆ ಪ್ರಚಾರಕ್ಕೆ ನನ್ನ ಜಾತಿ ಅಡ್ಡ ಬರುತ್ತೆ ಅನ್ಸುತ್ತೆ’: ರವಿಚಂದ್ರನ್​

ಕರ್ನಾಟಕ ಮಾತ್ರವಲ್ಲದೆ ದೆಹಲಿ, ಮುಂಬೈ, ಗೋವಾ, ಲಕ್ನೋ, ಆಂಧ್ರ ಪ್ರದೇಶ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಈ ಸಿನಿಮಾವನ್ನು ‘ರಿಲಯನ್ಸ್ ಎಂಟರ್​ಟೇನ್ಮೆಂಟ್’ ಸಂಸ್ಥೆಯು ಬಿಡುಗಡೆ ಮಾಡಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಗುರುರಾಜ್ ಕುಲಕರ್ಣಿ (ನಾಡಗೌಡ), ಶರದ್ ನಾಡಗೌಡ, ರಾಮು ರಾಯಚೂರು, ವಿಶ್ವನಾಥ್ ಗುಪ್ತ, ರಾಜಶೇಖರ ಪಾಟೀಲ್, ಪ್ರತಿಮಾ ಬಿರಾದಾರ್ ಅವರು ಟ್ರೇಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

‘ದ ಜಡ್ಜ್​ಮೆಂಟ್​’ ಸಿನಿಮಾ ಟ್ರೇಲರ್​:

ಈ ಸಿನಿಮಾದಲ್ಲಿ ರವಿಚಂದ್ರನ್​ ಜೊತೆ ಲಕ್ಷ್ಮೀ ಗೋಪಾಲಸ್ವಾಮಿ, ಧನ್ಯಾ ರಾಮ್​ಕುಮರ್​, ದಿಗಂತ್ ಮಂಚಾಲೆ, ಮೇಘನಾ ಗಾಂವ್ಕರ್, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ, ಕೃಷ್ಣ ಹೆಬ್ಬಾಳೆ, ರಾಜೇಂದ್ರ ಕಾರಂತ್, ರೇಖಾ ಕೂಡ್ಲಗಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಅನೂಪ್ ಸೀಳಿನ್ ಅವರು ‘ದ ಜಡ್ಜ್​ಮೆಂಟ್​’ ಸಿನಿಮಾಗೆ ಸಂಗೀತ ನೀಡಿದ್ದು, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಎಂ.ಎಸ್. ರಮೇಶ್ ಸಂಭಾಷಣೆ ಬರೆದಿದ್ದಾರೆ. ಪಿ.ಕೆ.ಹೆಚ್. ದಾಸ್ ಚಾಯಾಗ್ರಹಣ ಮಾಡಿದ್ದಾರೆ. ಕೆಂಪರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ. ವಾಸುದೇವ ಮೂರ್ತಿ ಅವರು ಚಿತ್ರಕಥೆ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.