ದರ್ಶನ್​ ಸಹಚರ ಅನು ಬಂಧನದ ಬಳಿಕ ಹೃದಯಾಘಾತದಿಂದ ತಂದೆ ಚಂದ್ರಣ್ಣ ನಿಧನ

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಅನು ಅಲಿಯಾಸ್​ ಅನುಕುಮಾರ್ ಆರೋಪಿ ಆಗಿದ್ದಾನೆ. ಆತನ ತಂದೆ ಚಂದ್ರಣ್ಣ ಅವರಿಗೆ 60 ವರ್ಷ ವಯಸ್ಸಾಗಿತ್ತು. ಇಂದು (ಜೂನ್​ 14) ಮಗನ ಬಂಧನದ ನಂತರ ಅವರು ತೀವ್ರವಾಗಿ ನೊಂದಿದ್ದರು. ಮಾನಸಿಕವಾಗಿ ನೊಂದಿದ್ದ ಅವರಿಗೆ ಹೃದಯಾಘಾತ ಆಗಿದೆ. ಚಿತ್ರದುರ್ಗದ ಸಿಹಿನೀರು ಹೊಂಡ ಬಳಿಯಿರುವ ನಿವಾಸದಲ್ಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ದರ್ಶನ್​ ಸಹಚರ ಅನು ಬಂಧನದ ಬಳಿಕ ಹೃದಯಾಘಾತದಿಂದ ತಂದೆ ಚಂದ್ರಣ್ಣ ನಿಧನ
ಅನು, ಚಂದ್ರಣ್ಣ, ದರ್ಶನ್​
Edited By:

Updated on: Jun 14, 2024 | 8:03 PM

ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಅನು ಅಲಿಯಾಸ್​ ಅನುಕುಮಾರ್​ ಮನೆಯಲ್ಲಿ ಇನ್ನೊಂದು ದುರಂತ ನಡೆದಿದೆ. ಮಗನ ಬಂಧನದ ಬಳಿಕ ಚಿಂತೆಗೆ ಒಳಾಗಿದ್ದ ಅನುಕುಮಾರ್​ ತಂದೆ ಚಂದ್ರಣ್ಣ ಅವರು ಹೃದಯಾಘಾತದಿಂದ (Heart Attack) ಮೃತರಾಗಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್​ (Darshan), ಪವಿತ್ರಾ ಗೌಡ ಮುಂತಾದವರ ಜೊತೆ 7ನೇ ಆರೋಪಿಗಾಗಿ ಅನು ಅರೆಸ್ಟ್​ ಆಗಿದ್ದಾನೆ. ಇದರಿಂದಾಗಿ ಅವರ ಕುಟುಂಬಕ್ಕೆ ಆಘಾತ ಆಗಿದೆ. ಅದರ ಬೆನ್ನಲ್ಲೇ ಅನು ತಂದೆ ಚಂದ್ರಣ್ಣ ಸಾವು ಸಂಭವಿಸಿದೆ.

ಅನುಕುಮಾರ್ ತಂದೆ ಚಂದ್ರಣ್ಣ ಅವರಿಗೆ 60 ವರ್ಷ ವಯಸ್ಸಾಗಿತ್ತು. ಇಂದು (ಜೂನ್​ 14) ರೇಣುಕಾ ಸ್ವಾಮಿ ಕೊಲೆ ಕೇಸ್​​ನಲ್ಲಿ ಅನು ಬಂಧನ ಆಗಿತ್ತು. ಮಗನ ಬಂಧನದ ಬಳಿಕ ಚಂದ್ರಣ್ಣ ಆಘಾತಕ್ಕೆ ಒಳಗಾಗಿದ್ದರು. ಹೀನಾಯ ಕೃತ್ಯದಲ್ಲಿ ಮಗ ಭಾಗಿ ಆಗಿದ್ದಾನೆ ಎಂಬ ಆರೋಪ ಎದುರಾಗಿದ್ದರಿಂದ ಚಂದ್ರಣ್ಣ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಚಿತ್ರದುರ್ಗದ ಸಿಹಿನೀರು ಹೊಂಡ ಬಳಿಯಿರುವ ಮನೆಯಲ್ಲಿ ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಾಗ ಕೇವಲ 13 ಜನರನ್ನು ಮಾತ್ರ ಅರೆಸ್ಟ್​ ಮಾಡಲಾಗಿತ್ತು. ದರ್ಶನ್​, ಪವಿತ್ರಾ ಗೌಡ, ಪವನ್​, ವಿನಯ್​, ದೀಪಕ್​ ಕುಮಾರ್​ ಮುಂತಾದವರು ಬಂಧನ ಆಗಿತ್ತು. ನಂತರದಲ್ಲಿ ಇನ್ನೂ ನಾಲ್ಕು ಮಂದಿಯ ಹೆಸರು ಹೊರಬಿತ್ತು. ಆಗ ಅನು ಅಲಿಯಾಸ್​ ಅನುಕುಮಾರ್​ ಕೂಡ ಈ ಕೃತ್ಯದಲ್ಲಿ ಭಾಗಿ ಆಗಿರುವುದು ಬೆಳಕಿಗೆ ಬಂತು.

ಇದನ್ನೂ ಓದಿ: ‘ಅಪ್ಪ-ಅಮ್ಮನಿಗೆ ಬೆಂಬಲ ಬೇಕಿರುವ ಈ ಸಮಯದಲ್ಲಿ..’: ದರ್ಶನ್​ ಪುತ್ರನ ಅಳಲು

ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲವಾಗಿ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕಾಗಿ ಶುರುವಾದ ಅಪಹರಣ ಕೃತ್ಯವು ಕೊಲೆಯಲ್ಲಿ ಅಂತ್ಯವಾಗಿದೆ. ಅಪಹರಣ ಮಾಡುವುದರಿಂದ ಹಿಡಿದು ಕೊಲೆ ಮಾಡಿ ಶವ ಎಸೆಯುವ ತನಕ ಈ ಕೃತ್ಯದಲ್ಲಿ ಭಾಗಿ ಆಗಿದ್ದಾರೆ ಎನ್ನಲಾದ ಎಲ್ಲರೂ ಈಗ ಪೊಲೀಸರ ಅತಿಥಿ ಆಗಿದ್ದಾರೆ. ಪ್ರಮುಖ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ತನಿಖೆ ಚುರುಕುಗೊಂಡಿದೆ. ಅಪರಾಧಿಗಳಿಗೆ ಸೂಕ್ತ ಶಿಕ್ಷೆ ಆಗಬೇಕು ಎಂಬ ಒತ್ತಾಯ ಜನರಿಂದ ಕೇಳಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:01 pm, Fri, 14 June 24

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us