
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆಗಿರುವ ನಟ ದರ್ಶನ್ ತೂಗುದೀಪ ಅವರಿಗೆ ಕಾನೂನು ಸಂಕಷ್ಟಗಳು ಒಂದರ ಮೇಲೊಂದರಂತೆ ಮುಂದುವರಿದಿವೆ. ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್ ರಾವ್ ಅವರು ‘ಮಾಫಿ ಸಾಕ್ಷಿ’ ಆಗಿ ಬದಲಾಗುವುದನ್ನು ವಿರೋಧಿಸಿ ದರ್ಶನ್ ಸಲ್ಲಿಸಿದ್ದ ಮೆಮೋವನ್ನು ಬೆಂಗಳೂರಿನ 59ನೇ ಸಿಸಿಹೆಚ್ ಸೆಷನ್ಸ್ ನ್ಯಾಯಾಲಯದ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ವಜಾಗೊಳಿಸಿದ್ದಾರೆ.
ವಿಚಾರಣಾ ನ್ಯಾಯಾಲಯ (59ನೇ ಸಿಸಿಹೆಚ್ ಕೋರ್ಟ್) ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಅಂಗೀಕರಿಸಿತ್ತು. ಇದನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ದರ್ಶನ್ ಅರ್ಜಿಯನ್ನು ವಜಾಗೊಳಿಸಿ ಸಿಸಿಹೆಚ್ ಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. ತದನಂತರ, ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಮಯಾವಕಾಶ ಬೇಕು ಹಾಗೂ ಅಲ್ಲಿಯವರೆಗೆ ಪ್ರದೋಷ್ ಸಾಕ್ಷ್ಯ ವಿಚಾರಣೆಗೆ ತಡೆ ನೀಡಬೇಕು ಎಂದು ದರ್ಶನ್ ವಕೀಲರು 59ನೇ ಸಿಸಿಹೆಚ್ ಕೋರ್ಟ್‌ಗೆ ಮೆಮೋ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು, ‘ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಆರೋಪಿಗಳಿಗೆ ಸಂಪೂರ್ಣ ಹಕ್ಕಿದೆ. ಪ್ರದೋಷ್ ಸಾಕ್ಷ್ಯ ವಿಚಾರಣೆಯು ಸುಪ್ರೀಂಕೋರ್ಟ್ ನೀಡುವ ಮುಂದಿನ ಆದೇಶಕ್ಕೆ ಒಳಪಡುತ್ತದೆ’ ಎಂದು ಸ್ಪಷ್ಟಪಡಿಸಿ ದರ್ಶನ್ ವಕೀಲರ ಮೆಮೋವನ್ನು ವಜಾಗೊಳಿಸಿದರು. ಅಂದರೆ, ಸುಪ್ರೀಂಕೋರ್ಟ್ ಮುಂದಿನ ದಿನಗಳಲ್ಲಿ ಪ್ರದೋಷ್ನ ಮಾಫಿ ಸಾಕ್ಷಿ ಮಾಡಬಾರದು ಎಂದು ಆದೇಶಿಸಿದರೆ, ಆಗ ಪ್ರದೋಷ್ ಹೇಳಿಕೆಯನ್ನು ಕೈ ಬಿಡಲಾಗುವುದು ಎಂಬರ್ಥದಲ್ಲಿ ಹೇಳಿದೆ.
ಇದನ್ನೂ ಓದಿ: ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ, ದರ್ಶನ್ಗೂ ಶಾಕ್
ಮೆಮೋ ವಜಾಗೊಳ್ಳುತ್ತಿದ್ದಂತೆಯೇ, ಸಿಸಿಹೆಚ್ ಕೋರ್ಟ್‌ನಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದ ವಕೀಲರನ್ನು ಹೊರತುಪಡಿಸಿ ಉಳಿದೆಲ್ಲರನ್ನು ಕೋರ್ಟ್ ಸಿಬ್ಬಂದಿ ಹೊರಗೆ ಕಳುಹಿಸಿದ್ದು, ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.