ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ‘ವಾರಹ ರೂಪಂ..’ ಹಾಡು (Varaharoopam Song) ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ‘ನಮ್ಮ ಟ್ಯೂನ್ ಕದಿಯಾಗಿದೆ’ ಎಂದು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್’ನವರು ಆರೋಪ ಮಾಡಿದ್ದರು. ಈ ವಿಚಾರ ಕೋರ್ಟ್ನಲ್ಲಿದೆ. ಈಗ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಹಾಗೂ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಕೇರಳ ಹೈಕೋರ್ಟ್ನ ನ್ಯಾಯಮೂರ್ತಿ ಎ. ಬದ್ರುದೀನ್ ಅವರು ರಿಷಬ್ ಹಾಗೂ ವಿಜಯ್ಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ. ಜತೆಗೆ ಅರ್ಜಿದಾರರಿಗೆ ಷರತ್ತುಗಳನ್ನು ಹಾಕಿದ್ದಾರೆ. ‘ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್ನಿಂದ ಮಧ್ಯಂತರ ಅಥವಾ ಅಂತಿಮ ಆದೇಶ ಬರೋವರೆಗೆ ಕಾಂತಾರ ಸಿನಿಮಾದಲ್ಲಿ ‘ವರಾಹ ರೂಪಂ..’ ಹಾಡನ್ನು ಬಳಕೆ ಮಾಡುವಂತಿಲ್ಲ. ಈ ಪ್ರಕರಣದ ಮರುವಿಚಾರಣೆಗೆ ಕೋರಲು ಅರ್ಜಿದಾರರಿಗೆ ಅವಕಾಶ ಇದೆ’ ಎಂದು ಬದ್ರುದೀನ್ ಹೇಳಿದ್ದಾರೆ.
ತೈಕುಡಂ ಬ್ರಿಡ್ಜ್ನವರು ಕೋಯಿಕ್ಕೋಡ್ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ‘ವರಾಹ ರೂಪಂ..’ ಹಾಡಿನಲ್ಲಿ ಬಳಕೆ ಆದ ಟ್ಯೂನ್ ‘ನವರಸಂ’ ಹಾಡಿನದ್ದು ಎನ್ನುವ ಆರೋಪ ಕೇಳಿ ಬಂತು. ಈ ಪ್ರಕರಣದ ಸದ್ಯ ಕೋರ್ಟ್ನಲ್ಲಿ ವಿಚಾರಣೆ ಆಗುತ್ತಿದೆ.
ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ‘ಕಾಂತಾರ’ಕ್ಕೆ ಪ್ರಿಕ್ವೆಲ್ ಬರಲಿದೆ ಎಂದು ಹೇಳಿದ್ದರು. ‘ಕಾಂತಾರದ ಗೆಲುವು ಖುಷಿ ಕೊಟ್ಟಿದೆ. ಈ ಕಥೆಯನ್ನು ಮೊದಲು ಕಾರ್ತಿಕ್ ಗೌಡ ಅವರ ಹತ್ತಿರ, ನಂತರ ವಿಜಯ್ ಅವರ ಬಳಿ ಹೇಳಿದೆ. ತಕ್ಷಣ ಒಪ್ಪಿಗೆ ನೀಡಿ ನಿರ್ಮಾಣಕ್ಕೆ ಮುಂದಾದರು. ಚಿತ್ರವನ್ನು ನಾನು ಅಂದುಕೊಂಡಂತೆ ತರಲು ಸಂಪೂರ್ಣ ಸಹಕಾರ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ನಾನು ಆಭಾರಿ. ಯಶಸ್ಸಿಗೆ ಕಾರಣರಾದ ನನ್ನ ಚಿತ್ರತಂಡ, ಮಾಧ್ಯಮದ ಮಿತ್ರರಿಗೆ ಹಾಗೂ ಸಮಸ್ತ ಜನತೆಗೆ ನನ್ನ ಧನ್ಯವಾದ. ನನ್ನ ಮಡದಿ ಪ್ರಗತಿ ಅವರಿಗೆ ವಿಶೇಷ ಧನ್ಯವಾದ. ‘ಕಾಂತಾರ ಭಾಗ 2’ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದಾರೆ. ನೀವು ನೋಡಿರುವುದೇ ಎರಡನೇ ಪಾರ್ಟ್. ಮುಂದೆ ಬರೋದು ಈ ಚಿತ್ರದ ಮೊದಲ ಭಾಗ’ ಎಂದು ರಿಷಬ್ ಶೆಟ್ಟಿ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ