BIFFES 2023: ಬೆಂಗಳೂರು ಚಿತ್ರೋತ್ಸವಕ್ಕೆ ಸರ್ಕಾರದಿಂದ 4.49 ಕೋಟಿ ರೂ. ಅನುದಾನ; ಮಾ.23ರಂದು ಚಾಲನೆ
R Ashok | 14th Bengaluru International Film Festival: 14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಮಾರ್ಚ್ 23ರಂದು ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ.
ಸಿನಿಮಾಸಕ್ತರ ಪಾಲಿನ ಹಬ್ಬ ಎಂದೇ ಕರೆಯಲ್ಪಡುವ ‘ಬೆಂಗಳೂರು ಸಿನಿಮೋತ್ಸವ’ದ (BIFFES) 14ನೇ ಆವೃತ್ತಿಗೆ ಸಿದ್ಧತೆಗಳು ನಡೆಯುತ್ತಿವೆ. ಪ್ರತಿ ಬಾರಿಯಂತೆ ಈ ವರ್ಷ ಕೂಡ ಅದ್ದೂರಿಯಾಗಿ ಸಿನಿಮೋತ್ಸವ ಮಾಡಲಾಗುವುದು. ಈ ಕುರಿತು ಮಾಹಿತಿ ನೀಡಲು ಇಂದು (ಫೆ.8) ಕಂದಾಯ ಸಚಿವ ಆರ್. ಅಶೋಕ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ‘14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ’ (14th Bengaluru International Film Festival) ಸಲುವಾಗಿ ಕರ್ನಾಟಕ ಸರ್ಕಾರದಿಂದ 4.49 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಈ ಸಿನಿಮೋತ್ಸವದಲ್ಲಿ ಪ್ರಶಸ್ತಿ ಗೆಲ್ಲುವ ಚಿತ್ರಗಳಿಗೆ ನೀಡುವ ನಗದು ಬಹುಮಾನದ ಮೊತ್ತವನ್ನು ಹೆಚ್ಚಿಸಲು ಸಲಹೆ ನೀಡಿರುವುದಾಗಿ ಆರ್. ಅಶೋಕ್ (R Ashok) ತಿಳಿಸಿದ್ದಾರೆ.
14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಕುರಿತಂತೆ ಪೂರ್ವಭಾವಿ ಸಭೆ ನಡೆಸಲಾಯಿತು. ಅದರಲ್ಲಿ ಚಿತ್ರರಂಗದ ಹಲವರು ಭಾಗಿ ಆಗಿದ್ದರು. ಅಶೋಕ್ ಕಶ್ಯಪ್, ಸುನೀಲ್ ಪುರಾಣಿಕ್, ಭಾ.ಮ. ಹರೀಶ್, ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮುಂತಾದವರ ಜೊತೆ ಚರ್ಚೆ ನಡೆಸಲಾಯಿತು. ಆ ಬಳಿಕ ಆರ್. ಅಶೋಕ್ ಸುದ್ದಿಗೋಷ್ಠಿ ನಡೆಸಿದರು. ಈ ಬಾರಿಯ ಸಿನಿಮೋತ್ಸವದ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು.
ಮಾರ್ಚ್ 23ರಂದು ಬೆಂಗಳೂರು ಸಿನಿಮೋತ್ಸವ ಉದ್ಘಾಟನೆ:
ವಿಧಾನಸೌಧದ ಮುಂಭಾಗದಲ್ಲಿ ಮಾರ್ಚ್ 23ರಂದು 14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆ ಆಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಸಮಾರಂಭಕ್ಕೆ ಬೇರೆ ಭಾಷೆಯ ಹೆಸರಾಂತ ನಟ-ನಟಿಯರನ್ನು ಅತಿಥಿಗಳನ್ನಾಗಿ ಕರೆಸಲು ಪ್ರಯತ್ನಿಸಲಾಗುತ್ತಿದೆ. ಯಾವ ಕಲಾವಿದರ ಹೆಸರು ಅಂತಿಮವಾಗಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಇದನ್ನೂ ಓದಿ: ಬೆತ್ತಲಾಗಿ ಕಾನ್ ಸಿನಿಮೋತ್ಸವದ ರೆಡ್ ಕಾರ್ಪೆಟ್ ಮೇಲೆ ನಡೆದ ಯುವತಿ; ಮುಜುಗರ ತಂದ ಘಟನೆ
ಓರಿಯನ್ ಮಾಲ್ನಲ್ಲಿ ಸಿನಿಮಾ ಪ್ರದರ್ಶನ:
ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ಓರಿಯನ್ ಮಾಲ್ನ 11 ಪರದೆಗಳಲ್ಲಿ ಸಿನಿಮಾಗಳು ಪ್ರದರ್ಶನ ಆಗಲಿವೆ. ಅಂದಾಜು 300 ಸಿನಿಮಾಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಹಲವು ರಾಷ್ಟ್ರಗಳ ಸಿನಿಮಾಗಳನ್ನು ನೋಡುವ ಅವಕಾಶ ಸಿನಿಮಾಸಕ್ತರಿಗೆ ಸಿಗಲಿದೆ. ಇತ್ತೀಚೆಗೆ ನಿಧನರಾದ ಕೆ. ವಿಶ್ವನಾಥ್, ವಾಣಿ ಜಯರಾಂ ಅವರಿಗೆ ನಮನ ಸಲ್ಲಿಸಲಾಗುವುದು.
ಇದನ್ನೂ ಓದಿ: ಸಿನಿಮೋತ್ಸವದ ಬಗ್ಗೆ ಗೌರವ ಇಲ್ಲದವರು ಅದನ್ನು ಉತ್ಸವ ಆಗಿ ಆಚರಿಸಲು ಹೇಗೆ ಸಾಧ್ಯ? ರಾಜ್ ಬಿ. ಶೆಟ್ಟಿ ಪ್ರಶ್ನೆ
ಪ್ರಶಸ್ತಿಯ ನಗದು ಬಹುಮಾನ ಹೆಚ್ಚಳಕ್ಕೆ ಆರ್. ಅಶೋಕ್ ಸಲಹೆ:
‘ಇದು ಅಂತಾರಾಷ್ಟ್ರೀಯ ಮಟ್ಟದ ಸಿನಿಮೋತ್ಸವ. ಹಾಗಾಗಿ ಬಹುಮಾನದ ಮೊತ್ತ ಕೂಡ ಒಳ್ಳೆಯ ರೀತಿಯಲ್ಲಿ ಇರಬೇಕು. ಈಗ ಇರುವುದು 5 ವರ್ಷಗಳ ಹಿಂದೆ ನಿಗದಿ ಮಾಡಿದ್ದ ಮೊತ್ತ. ಅದನ್ನು ಹೆಚ್ಚಿಸಬೇಕು ಅಂತ ನಾನು ಸಲಹೆ ನೀಡಿದ್ದೇನೆ. ಕೆಲವೇ ದಿನಗಳಲ್ಲಿ ಅದು ನಿರ್ಣಯ ಆಗಲಿದೆ’ ಎಂದು ಆರ್. ಅಶೋಕ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:53 pm, Wed, 8 February 23