ದೇವರ ಬಗೆಗಿನ ಗ್ರಹಿಕೆ ಬಗ್ಗೆ ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ
ರಿಷಬ್ ಅವರು ‘ಕಾಂತಾರ’ ಸಿನಿಮಾದಲ್ಲಿ ದೈವ ಹಾಗೂ ಭೂತಾರಾಧನೆಯ ವಿಚಾರಗಳನ್ನು ಹೇಳಿದ್ದಾರೆ. ಇದೆಲ್ಲವೂ ದೇವರಿಗೆ ಸಂಬಂಧಿಸಿದ್ದು. ಹೀಗಾಗಿ, ಈ ಕುರಿತು ರಿಷಬ್ ಶೆಟ್ಟಿಗೆ ಪ್ರಶ್ನೆ ಎದುರಾಗಿದೆ.
ಗೋವಾದಲ್ಲಿ ಅಂತಾರಾಷ್ಟ್ರೀಯ ಸಿನಿಮೋತ್ಸವ (IFFI ) ನಡೆಯುತ್ತಿದೆ. ದೇಶದ ವಿವಿಧ ಚಿತ್ರರಂಗದ ಅನೇಕ ಸ್ಟಾರ್ ಕಲಾವಿದರು, ನಿರ್ದೇಶಕರು ಇದರಲ್ಲಿ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ‘ದಿ ಕಾಶ್ಮೀರ್ ಫೈಲ್ಸ್’ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಇದರಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದರು. ‘ಕಾಂತಾರ’ ಚಿತ್ರದ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ರಿಷಬ್ ಶೆಟ್ಟಿ (Rishab Shetty) ಕೂಡ ಇದರಲ್ಲಿ ಭಾಗಿ ಆಗಿದ್ದರು. ಅಲ್ಲಿ ಹಲವು ವಿಚಾರಗಳ ಕುರಿತು ಅವರು ಮಾತನಾಡಿದ್ದಾರೆ. ರಿಷಬ್ ಅವರನ್ನು ನೋಡುತ್ತಿದ್ದಂತೆ ಫ್ಯಾನ್ಸ್ ಮುತ್ತಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಬಳಿ ಸೆಲ್ಫಿಗೆ ಅವರು ಮುಗಿ ಬಿದ್ದಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ರಿಷಬ್ ಶೆಟ್ಟಿ ಅವರು ವಿವಿಧ ಶೈಲಿಯ ಸಿನಿಮಾ ಮಾಡಿದ್ದಾರೆ. ಇದರ ಆಯ್ಕೆ ಹೇಗೆ ಎಂಬ ಬಗ್ಗೆ ರಿಷಬ್ ಮಾತನಾಡಿದ್ದಾರೆ. ‘ನಾನು ಸಿನಿಮಾ ಮಾಡುವಾಗ ಯಾವ ಶೈಲಿಯ ಚಿತ್ರ ಮಾಡಬೇಕು ಎಂಬುದನ್ನು ಯೋಚಿಸುವುದಿಲ್ಲ. ನಾನು ಅಜ್ಜಿ ಹೇಳುವ ಕಥೆಗಳಿಂದ ಪ್ರಭಾವಕ್ಕೆ ಒಳಗಾಗಿದ್ದೇನೆ. ಹೀಗಾಗಿ, ಸ್ಕ್ರಿಪ್ಟ್ ಬರೆಯುವಾಗ ಅದನ್ನು ತಲೆಯಲ್ಲಿ ಇಟ್ಟುಕೊಂಡಿರುತ್ತೇನೆ’ ಎಂದಿದ್ದಾರೆ ರಿಷಬ್.
ರಿಷಬ್ ಅವರು ‘ಕಾಂತಾರ’ ಸಿನಿಮಾದಲ್ಲಿ ದೈವ ಹಾಗೂ ಭೂತಾರಾಧನೆಯ ವಿಚಾರಗಳನ್ನು ಹೇಳಿದ್ದಾರೆ. ಇದೆಲ್ಲವೂ ದೇವರಿಗೆ ಸಂಬಂಧಿಸಿದ್ದು. ಹೀಗಾಗಿ, ಈ ಕುರಿತು ರಿಷಬ್ ಶೆಟ್ಟಿಗೆ ಪ್ರಶ್ನೆ ಎದುರಾಗಿದೆ. ದೇವರು ಅಂದರೆ ನಿಮ್ಮ ಗ್ರಹಿಕೆ ಏನು ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ರಿಷಬ್ ‘ಸಿನಿಮಾ ದೇವರು. ನನಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು ಸಿನಿಮಾ. ನನ್ನನ್ನು ಇಲ್ಲಿಯವರೆಗೆ ಕರೆ ತಂದಿದ್ದು ಸಿನಿಮಾ’ ಎಂದಿದ್ದಾರೆ ರಿಷಬ್.
ಕಾಂತಾರಾ ಸೂಪರ್ ಹಿಟ್
ಕೇವಲ 15 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಚಿತ್ರ ಈಗ ಒಟಿಟಿಯಲ್ಲಿ ರಿಲೀಸ್ ಆಗಿ ಅಬ್ಬರಿಸುತ್ತಿದೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ‘ವರಾಹ ರೂಪಂ..’ ಹಾಡು ವಿವಾದ ಸೃಷ್ಟಿ ಮಾಡಿತ್ತು. ಈಗ ಈ ಹಾಡಿನ ಟ್ಯೂನ್ ಬದಲಿಸಿ ಒಟಿಟಿಯಲ್ಲಿ ರಿಲೀಸ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:52 am, Fri, 25 November 22