Ajaneesh B Loknath: ಅಜನೀಶ್ ಲೋಕನಾಥ್ಗೆ ಯಾಕಿಂಥ ಸ್ಥಿತಿ; ಇದು ಹಾಸ್ಟೆಲ್ ಹುಡುಗರ ಕಿತಾಪತಿ
Hostel Hudugaru Bekagiddare: ಗಾಂಧಿನಗರದಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ತಂಡ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರತಿ ಪ್ರೋಮೋವನ್ನು ತುಂಬ ಕ್ರಿಯೇಟಿವ್ ಆಗಿ ಮಾಡುವ ಮೂಲಕ ಗಮನ ಸೆಳೆಯಲಾಗುತ್ತಿದೆ.
ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ (Ajaneesh B Loknath) ಅವರಿಗೆ ಸಖತ್ ಬೇಡಿಕೆ ಇದೆ. ಅವರು ಅನೇಕ ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ‘ಕಾಂತಾರ’, ‘ವಿಕ್ರಾಂತ್ ರೋಣ’ ಸಿನಿಮಾದ ಹಾಡುಗಳ ಯಶಸ್ಸಿನ ಹಿಂದಿನ ಸೂತ್ರಧಾರ ಅವರು. ಅಚ್ಚರಿ ಎಂದರೆ ಅಜನೀಶ್ ಬಿ. ಲೋಕನಾಥ್ ಅವರನ್ನು ಕಿಡ್ನಾಪ್ (Kidnap) ಮಾಡಿರುವ ರೀತಿಯಲ್ಲಿರುವ ಒಂದು ಫೋಟೋ ವೈರಲ್ ಆಗಿದೆ. ಇದನ್ನು ಒಮ್ಮೆಲೆ ನೋಡಿದರೆ ಫ್ಯಾನ್ಸ್ ಗಾಬರಿ ಆಗಬಹುದು. ಆದರೆ ಫೋಟೋ ಹಿಂದಿನ ಕಹಾನಿ ಬೇರೆಯೇ ಇದೆ. ಇದು ‘ಹಾಸ್ಟೆಲ್ ಹುಡುಗರ’ ಕಿತಾಪತಿ! ಹೌದು, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಚಿತ್ರದ ಪ್ರಚಾರಕ್ಕಾಗಿ ಮಾಡಿದ ಪೋಸ್ಟರ್ ಇದು.
ವಿಶೇಷ ರೀತಿಯಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಪ್ರಮೋಷನ್ ಮಾಡಲಾಗುತ್ತಿದೆ. ಅದಕ್ಕೆ ಅಜನೀಶ್ ಬಿ. ಲೋಕನಾಥ್ ಅವರು ಕೈ ಜೋಡಿಸಿದ್ದಾರೆ. ಅವರನ್ನು ಉಗ್ರರು ಅಪಹರಿಸಿದ ರೀತಿಯಲ್ಲಿ ಫೋಟೋಶೂಟ್ ಮಾಡಿಸಲಾಗಿದೆ. ಈ ಹಿಂದೆ ಪುನೀತ್ ರಾಜ್ಕುಮಾರ್ ಕೂಡ ಈ ಚಿತ್ರತಂಡಕ್ಕೆ ಬೆಂಬಲ ನೀಡಿದ್ದರು. ವಿಶೇಷವಾದ ಪ್ರೋಮೋದಲ್ಲಿ ಅವರು ನಟಿಸಿದ್ದರು. ಇತ್ತೀಚೆಗೆ ನಟಿ ರಮ್ಯಾ ಕೂಡ ಒಂದು ಪ್ರಮೋಷನಲ್ ವಿಡಿಯೋದಲ್ಲಿ ನಟಿಸಿದ್ದು, ಅದು ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಅಜನೀಶ್ ಲೋಕನಾಥ್ ಅವರು ಈ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದಾರೆ. ವರುಣ್ ಸ್ಟುಡಿಯೋಸ್ ಹಾಗೂ ಪ್ರಜ್ವಲ್ ಬಿ.ಪಿ. ಅವರ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣ ಆಗಿರುವ ಮೊದಲ ಚಿತ್ರವಿದು. ಆರಂಭದಿಂದಲೂ ಈ ಸಿನಿಮಾದ ಪ್ರೋಮೋಷನಲ್ ಕಂಟೆಂಟ್ಗಳು ಗಮನ ಸೆಳೆಯುತ್ತಿವೆ.
ರಂಗಭೂಮಿಯ ಅನೇಕ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಕೆಲವು ಸ್ಟಾರ್ ನಟರು ಅತಿಥಿ ಪಾತ್ರ ಮಾಡಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಜನವರಿಯಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ಪ್ರೋಮೋಗಳ ಮೂಲಕ ಸಖತ್ ಹೈಪ್ ಸೃಷ್ಟಿ ಮಾಡಿರುವ ಈ ಚಿತ್ರದ ಮೇಲೆ ಸಿನಿಪ್ರಿಯರಿಗೆ ನಿರೀಕ್ಷೆ ಮೂಡಿದೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಅವರು ಸಂಕಲನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:53 pm, Thu, 24 November 22