Rishab Shetty: ಒಂದೇ ದಿನಕ್ಕೆ 15 ಕೋಟಿ ರೂಪಾಯಿ ಬಾಚಿದ ‘ಕಾಂತಾರ’; ಪರಭಾಷೆಯಲ್ಲಿ ಭರ್ಜರಿ ಕಮಾಯಿ
Kantara Box Office Collection: ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ ‘ಕಾಂತಾರ’ ಸಿನಿಮಾದಿಂದ ‘ಹೊಂಬಾಳೆ ಫಿಲ್ಸ್ಮ್’ ಸಂಸ್ಥೆಗೆ ಬಹುಕೋಟಿ ರೂಪಾಯಿ ಲಾಭ ಆಗಿದೆ. ರಿಷಬ್ ಶೆಟ್ಟಿ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೆಚ್ಚಿದೆ.
ಕನ್ನಡದ ‘ಕಾಂತಾರ’ (Kantara) ಚಿತ್ರವನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಈ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ (Box Office Collection) ಭರ್ಜರಿ ಆಗಿದೆ. ಪರಭಾಷೆಯಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಿದ ಬಳಿಕ ಚಿತ್ರದ ಅಬ್ಬರ ಇನ್ನಷ್ಟು ಹೆಚ್ಚಾಗಿದೆ. ಒಂದೇ ದಿನದಲ್ಲಿ 15 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಈ ಸಿನಿಮಾ ಧೂಳೆಬ್ಬಿಸಿದೆ. ಈ ಚಿತ್ರದಿಂದ ರಿಷಬ್ ಶೆಟ್ಟಿ (Rishab Shetty) ಅವರ ಜನಪ್ರಿಯತೆ ಹೆಚ್ಚಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರಿಗೆ ಯಶಸ್ಸು ಸಿಕ್ಕಿದೆ. ಅಕ್ಟೋಬರ್ 14, 15 ಮತ್ತು 16ರಂದು ಕ್ರಮವಾಗಿ ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ‘ಕಾಂತಾರ’ ಬಿಡುಗಡೆ ಮಾಡಲಾಯಿತು. ಈ ಪೈಕಿ ಶನಿವಾರದಂದು ಚಿತ್ರದ ಹಿಂದಿ ಅವತರಣಿಕೆಯು ಉತ್ತರ ಭಾರತದಲ್ಲಿ 2.75 ಕೋಟಿ ರೂ. ಸಂಗ್ರಹಿಸಿದೆ. ಅದರ ಜೊತೆ ತಮಿಳು ಮತ್ತು ತೆಲುಗು ಭಾಷೆಯ ಕಲೆಕ್ಷನ್ ಸೇರಿಸಿದರೆ ಒಂದೇ ದಿನದಲ್ಲಿ ಒಟ್ಟು 15 ಕೋಟಿ ರೂಪಾಯಿ ಸಂಗ್ರಹ ಆದಂತಾಗಿದೆ.
ಹಿಂದಿ ಅವತರಣಿಕೆಯು ಶುಕ್ರವಾರವಷ್ಟೇ (ಅ.14) ರಿಲೀಸ್ ಆಗಿತ್ತು. ಮೊದಲ ದಿನದ ಕಲೆಕ್ಷನ್ಗೆ ಹೋಲಿಸಿದರೆ, 2ನೇ ದಿನ ಡಬಲ್ ಕಲೆಕ್ಷನ್ ಆಗಿರುವುದು ಅಚ್ಚರಿಯೇ ಸರಿ. ಕನ್ನಡ, ತೆಲುಗು ಮತ್ತು ತಮಿಳು ಅವತರಣಿಕೆಯಿಂದ ಶನಿವಾರ (ಅ.15) 12 ಕೋಟಿ ರೂ. ಗಳಿಕೆ ಆಗಿದೆ. ಭಾನುವಾರ ಕೂಡ ಈ ಎಲ್ಲ ಭಾಷೆಗಳಲ್ಲಿ ಅತ್ಯುತ್ತಮ ಕಲೆಕ್ಷನ್ ಆಗಿದೆ. ಅದರ ಅಂಕಿ-ಸಂಖ್ಯೆಗಳು ಇನ್ನಷ್ಟೇ ಸಿಗಬೇಕಿದೆ.
‘ಕಾಂತಾರ’ ಚಿತ್ರದಲ್ಲಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯನ್ನು ಹೇಳಲಾಗಿದೆ. ಜಾತಿ ಸಂಘರ್ಷದ ವಿಷಯವೂ ಇದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಮುಂತಾದ ಕಲಾವಿದರ ಪಾತ್ರಗಳು ಹೈಲೈಟ್ ಆಗಿವೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕರಾವಳಿಯ ಭೂತಕೋಲದ ಹಿನ್ನೆಲೆಯಲ್ಲಿ ‘ಕಾಂತಾರ’ ಚಿತ್ರದ ಕಥೆಯನ್ನು ನಿರೂಪಿಸಲಾಗಿದೆ. ಉತ್ತರ ಭಾರತದಲ್ಲಿ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ನೋಡಿ ಬಂದ ಪ್ರೇಕ್ಷಕರು ಪಾಸಿಟಿವ್ ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ. ಅದರ ಪರಿಣಾಮವಾಗಿ ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಹೆಚ್ಚುತ್ತಿದೆ. ಬಾಯಿ ಮಾತಿನ ಪ್ರಚಾರ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ವಿಜಯ್ ಕಿರಗಂದೂರು ಅವರು ನಿರ್ಮಾಣ ಮಾಡಿರುವ ‘ಕಾಂತಾರ’ ಸಿನಿಮಾದಿಂದ ‘ಹೊಂಬಾಳೆ ಫಿಲ್ಸ್ಮ್’ ಸಂಸ್ಥೆಗೆ ಬಹುಕೋಟಿ ರೂಪಾಯಿ ಲಾಭ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:02 pm, Mon, 17 October 22