‘ವರಾಹ ರೂಪಂ..’ ವಿವಾದ: ಹೊಂಬಾಳೆಗೆ ಹಿನ್ನಡೆ; ಮೇಲ್ಮನವಿ ಅರ್ಜಿ ವಜಾ ಮಾಡಿದ ಕೇರಳ ಹೈಕೋರ್ಟ್
ಕೇರಳದ ಸ್ಥಳೀಯ ನ್ಯಾಯಾಲಯಗಳು ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿದ್ದವು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಹೊಂಬಾಳೆ ಫಿಲ್ಮ್ಸ್ಗೆ ಈಗ ಹಿನ್ನಡೆ ಆಗಿದೆ.
‘ಕಾಂತಾರ’ ಸಿನಿಮಾದ (Kantara Movie) ‘ವರಾಹ ರೂಪಂ..’ ಹಾಡು ವಿವಾದದ ಕೇಂದ್ರ ಬಿಂದು ಆಗಿದೆ. ಈ ಹಾಡಿನ ಟ್ಯೂನ್ ಮೇಲೆ ಕೃತಿಚೌರ್ಯದ ಆರೋಪ ಹೊರಿಸಲಾಗಿದೆ. ಮಲಯಾಳಂನ ಖ್ಯಾತ ಮ್ಯೂಸಿಕ್ ಬ್ಯಾಂಡ್ ‘ತೈಕ್ಕುಡಂ ಬ್ರಿಡ್ಜ್’ (Thaikkudam Bridge) ಕೋರ್ಟ್ ಮೆಟ್ಟಿಲೇರಿತ್ತು. ಕೇರಳದ ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಗಳು ಅರ್ಜಿ ವಿಚಾರಣೆ ನಡೆಸಿ, ‘ಹಾಡನ್ನು ಒಪ್ಪಿಗೆ ಇಲ್ಲದೆ ಪ್ರಸಾರ ಮಾಡಬಾರದು’ ಎಂದು ಆದೇಶ ನೀಡಿದ್ದವು. ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಈ ಆದೇಶವನ್ನು ಕೇರಳ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿತ್ತು. ಆದರೆ, ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದ್ದು, ‘ಅಧೀನ ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸಿದರೆ ಅರ್ಜಿದಾರರ ಶಾಸನಬದ್ಧ ಹಕ್ಕುಗಳಿಗೆ ಚ್ಯುತಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ. ಹೈಕೋರ್ಟ್ ನಿರ್ದೇಶನವನ್ನು, ‘ನ್ಯಾಯಾಲಯದಿಂದ ಹೊರಗೆ ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಿ’ ಎಂಬ ಪರೋಕ್ಷ ಸೂಚನೆ ಎಂಬಂತೆ ಹಲವರು ವ್ಯಾಖ್ಯಾನಿಸುತ್ತಿದ್ದಾರೆ.
‘ನವರಸಂ..’ ಹಾಡಿನಲ್ಲಿರುವ ಟ್ಯೂನ್ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂದು ಕೇಳುಗರು ಅಭಿಪ್ರಾಯಪಟ್ಟಿದ್ದರು. ಇದನ್ನು ‘ತೈಕ್ಕುಡಂ ಬ್ರಿಡ್ಜ್’ ಗಂಭೀರವಾಗಿ ಪರಿಗಣಿಸಿ ಕೇಸ್ ದಾಖಲು ಮಾಡಿತ್ತು. ಕೇರಳದ ಸ್ಥಳೀಯ ನ್ಯಾಯಾಲಯಗಳು ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿದ್ದವು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಹೊಂಬಾಳೆ ಫಿಲ್ಮ್ಸ್ಗೆ ಈಗ ಹಿನ್ನಡೆ ಆಗಿದೆ. ಕೇರಳ ಹೈಕೋರ್ಟ್ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಸಿ.ಎಸ್. ದಿಯಾಸ್ ಅವರು ಅರ್ಜಿಯನ್ನು ವಜಾ ಮಾಡಿದ್ದಾರೆ. ಅಲ್ಲದೆ, ಪರ್ಯಾಯ ಕಾನೂನು ಪರಿಹಾರ ಕಂಡುಕೊಳ್ಳಲು ಅವಕಾಶ ನೀಡಿದ್ದಾರೆ.
‘ಅಧೀನ ನ್ಯಾಯಾಲಯಗಳು ಹೊರಡಿಸಿದ ಎಲ್ಲಾ ಆದೇಶಗಳಲ್ಲಿ ನಾವು ಮಧ್ಯ ಪ್ರವೇಶಿಸಬಾರದು. ಹಾಗೆ ಮಾಡಿದರೆ ಅಧೀನ ನ್ಯಾಯಾಲಯಗಳು ಬಲಗುಂದಿದಂತೆ ಆಗುತ್ತವೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ‘ಎಲ್ಲಾ ಮೇಲ್ಮನವಿಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಕೋರ್ಟ್ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತದೆ’ ಎಂದು ಹೈಕೋರ್ಟ್ ಹೇಳಿದೆ. ಈ ಮೂಲಕ ಅರ್ಜಿಯನ್ನು ವಜಾ ಮಾಡಿದೆ. ಇದರಿಂದ ಹೊಂಬಾಳೆ ಫಿಲ್ಮ್ಸ್ಗೆ ಹಿನ್ನಡೆ ಆಗಿದೆ. ಈಗ ಹೊಂಬಾಳೆ ಫಿಲ್ಮ್ಸ್ ಈ ವಿಚಾರದಲ್ಲಿ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: ತೈಕ್ಕುಡಂ ಬ್ರಿಡ್ಜ್ ಕೇಸ್: ಯೂಟ್ಯೂಬ್, ಮ್ಯೂಸಿಕ್ ಆ್ಯಪ್ಗಳಿಂದ ‘ವರಾಹ ರೂಪಂ..’ ಹಾಡು ಡಿಲೀಟ್
‘ವರಾಹ ರೂಪಂ..’ ಹಾಡನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ‘ಹೊಂಬಾಳೆ ಫಿಲ್ಮ್ಸ್’ ಯೂಟ್ಯೂಬ್ ಚಾನೆಲ್ಗಳಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈಗ ‘ಹೊಂಬಾಳೆ ಫಿಲ್ಮ್ಸ್’ ಯೂಟ್ಯೂಬ್ ಚಾನೆಲ್ನಿಂದ ಈ ಹಾಡನ್ನು ಡಿಲೀಟ್ ಮಾಡಲಾಗಿದೆ. ಮ್ಯೂಸಿಕ್ ಆ್ಯಪ್ಗಳಾದ ಜಿಯೊ ಸಾವನ್ ಮೊದಲಾದ ಕಡೆಗಳಲ್ಲಿ ಈ ಹಾಡು ಪ್ರಸಾರ ಆಗುತ್ತಿಲ್ಲ.