ಮತ್ತೊಂದು ಸಾಧನೆ ಮಾಡಿದ ಕಾಂತಾರ; ಸಾರ್ವಕಾಲಿಕ ಟಾಪ್ 5 ತೆಲುಗು ಡಬ್ಬಿಂಗ್ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ 

ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ಟಾಪ್ 5 ತೆಲುಗು ಡಬ್ಬಿಂಗ್ ಚಿತ್ರಗಳ ಪಟ್ಟಿಗೆ 'ಕಾಂತಾರ' ಕೂಡ ಸೇರಿಕೊಂಡಿದ್ದು, ಅಲ್ಲಿಗೆ ಕಾಂತಾರ ಮತ್ತೊಂದು ಸಾಧನೆ ಮಾಡಿದೆ.

ಮತ್ತೊಂದು ಸಾಧನೆ ಮಾಡಿದ ಕಾಂತಾರ; ಸಾರ್ವಕಾಲಿಕ ಟಾಪ್ 5 ತೆಲುಗು ಡಬ್ಬಿಂಗ್ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ 
Kantara
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Nov 23, 2022 | 10:41 PM

ಹೊಂಬಾಳೆ ಸಂಸ್ಥೆ ನಿರ್ಮಾಣದ, ರಿಷಬ್​ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಚಿತ್ರ ‘ಕಾಂತಾರ’ (Kantara). ಸೆ. 30 ರಂದು ತೆರೆಗೆ ಬಂದ ಈ ಚಿತ್ರ 50 ದಿನಗಳನ್ನು ಪೂರ್ಣಗೊಳಿಸಿ ಇಂದಿಗೂ ಮುನ್ನುಗ್ಗುತ್ತಿದೆ. ಬಾಕ್ಸ್​ ಆಫಿಸ್ಸ್​ (Kantara Box Office Collection)​ನಲ್ಲಿ ‘ಕಾಂತಾರ’ ಚಿತ್ರ ಈಗಾಗಲೇ ಧೂಳು ಎಬಿಸಿದೆ. ಕಡಿಮೆ ಬಜೆಟ್​ನಲ್ಲಿ ಸಿದ್ಧಗೊಂಡ ‘ಕಾಂತಾರ’ ಸಿನಿಮಾ ಈ ಪರಿ ಹಿಟ್​ ಆಗುತ್ತದೆ ಎಂಬ ಊಹೆ ಇರಲಿಲ್ಲ. ಆದರೆ ಬಿಡುಗಡೆ ಬಳಿಕ ಈ ಸಿನಿಮಾ ಎಲ್ಲರ ನಿರೀಕ್ಷೆಗೂ ಮೀರಿ ದಾಖಲೆ ಮಾಡಿದೆ. ‘ಕಾಂತಾರ’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ ನೋಡಿ ಪರಭಾಷೆ ಸಿನಿಮಂದಿಗೂ ಅಚ್ಚರಿ ಆಗಿದೆ. ಕಡಿಮೆ ಬಜೆಟ್​ನಲ್ಲಿ ಮೂಡಿಬಂದ ಈ ಸಿನಿಮಾ ಈಗ ಬರೋಬ್ಬರಿ 400 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈಗ ಅದೇ ರೀತಿಯಾಗಿ ‘ಕಾಂತಾರ’ ಮತ್ತೊಂದು ದಾಖಲೆ ನಿರ್ಮಿಸಿದೆ. ಆದರೆ ಅದು ಸ್ಯಾಂಡಲ್​ವುಡ್​ನಲ್ಲಿ ಅಲ್ಲ. ಬದಲಾಗಿ ಟಾಲಿವುಡ್​ನಲ್ಲಿ.

‘ಕಾಂತಾರ’ ಚಿತ್ರ ನಿರ್ಮಾಣವಾದಾಗ ಇದನ್ನು ಪ್ಯಾನ್​ ಇಂಡಿಯಾ ಚಿತ್ರ ಮಾಡಬೇಕು ಎಂಬ ಯಾವ ಉದ್ದೇಶವೂ ನಟ ರಿಷಬ್​ ಶೆಟ್ಟಿ ಅವರಿಗೆ ಇರಲಿಲ್ಲ. ಆದರೆ ಕನ್ನಡದಲ್ಲಿ ಚಿತ್ರ ತೆರೆ ಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಪರ ಭಾಷೆಯ ಪ್ರೇಕ್ಷಕರು ಕನ್ನಡದಲ್ಲಿಯೇ ಚಿತ್ರವನ್ನು ನೋಡಿ ಮೆಚ್ಚಿಕೊಳ್ಳ ತೊಡಗಿದರು. ಬಳಿಕ ಈ ಚಿತ್ರವನ್ನು ಪ್ಯಾನ್​ ಇಂಡಿಯಾ ಮಾಡಬೇಕು ಎಂದು ಬೇಡಿಕೆಗಳು ಬಂದವು.

ಪ್ಯಾನ್​​ ಇಂಡಿಯಾದ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಡಬ್​ ಮಾಡಲಾಯಿತು. ಸದ್ಯ ಹೀಗೆ ತೆಲುಗಿಗೆ ಡಬ್​ ಆದ ಚಿತ್ರದ ಪೈಕಿ ‘ಕಾಂತಾರ’ ಒಂದು. ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ಟಾಪ್ 5 ತೆಲುಗು ಡಬ್ಬಿಂಗ್ ಚಿತ್ರಗಳ ಪಟ್ಟಿಗೆ ‘ಕಾಂತಾರ’ ಕೂಡ ಸೇರಿಕೊಂಡಿದೆ. ಟ್ರ್ಯಾಕ್​ಟಾಲಿವುಡ್​​. ಕಾಮ್ (TrackTollywood.com) ವರದಿ ಪ್ರಕಾರ, ‘ಕಾಂತಾರ’ ಚಿತ್ರ ತೆಲುಗಿನಲ್ಲಿ ಅತಿ ಹೆಚ್ಚು ಗಳಿಕೆಯಾದ ಟಾಪ್ 5 ತೆಲುಗು ಡಬ್ಬಿಂಗ್ ಚಲನಚಿತ್ರಗಳಲ್ಲಿ ಒಂದಾಗಿದೆ. ತೆಲುಗು ಡಬ್ಬಿಂಗ್ ಆವೃತ್ತಿಯಿಂದ ಚಿತ್ರ ಇಲ್ಲಿಯವರೆಗೂ 65 ಕೋಟಿ ಗಳಿಸಿದೆ. ಆ ಮೂಲಕ ನಟ ಚಿಯಾನ್ ವಿಕ್ರಮ್ ಅವರ ‘ಐ’ ಚಿತ್ರವನ್ನು ಹಿಂದಿಕ್ಕಿದೆ. ‘ಕೆಜಿಎಫ್​​ 2’ ಚಿತ್ರ ತೆಲುಗಿಗೆ ಡಬ್​ ಆಗಿ 185 ಕೋಟಿ ರೂ. ಗಳಿಕೆ ಮಾಡಿ ಅಗ್ರಸ್ಥಾನದಲ್ಲಿದೆ.

ಎಲ್ಲ ಭಾಷೆಯಲ್ಲೂ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡದಲ್ಲಿ 168.50 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ತೆಲುಗು ವರ್ಷನ್​ನಿಂದ 60 ಕೋಟಿ ರೂಪಾಯಿ ಹರಿದುಬಂದಿದೆ. ತಮಿಳುನಾಡಿಲ್ಲಿ 12.70 ಕೋಟಿ ರೂಪಾಯಿ ಹಾಗೂ ಕೇರಳದಲ್ಲಿ 19.20 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಇನ್ನು, ಉತ್ತರ ಭಾರತದ ಮಂದಿ ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ.

ಹಿಂದಿ ವರ್ಷನ್​ನಿಂದ ಬರೋಬ್ಬರಿ 96 ಕೋಟಿ ರೂಪಾಯಿ ಆದಾಯ ಬಂದಿದೆ. ವಿದೇಶದ ಬಾಕ್ಸ್​ ಆಫೀಸ್​ನಲ್ಲಿ 44.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಕನ್ನಡದ ಸಿನಿಮಾ ಈ ಪರಿ ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಇಂದಿಗೂ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada