Basavaraj Bommai: ಮಾರ್ಚ್ ಮೊದಲ ವಾರದಲ್ಲಿ ಅಂಬರೀಷ್ ಸ್ಮಾರಕ ಉದ್ಘಾಟನೆ: ಸಿಎಂ ಬಸವರಾಜ ಬೊಮ್ಮಾಯಿ
Rebel Star Ambareesh Memorial: ‘ಒಂದೂವರೆ ವರ್ಷದ ಹಿಂದೆ ಅಂಬರೀಷ್ ಸ್ಮಾರಕದ ನಿರ್ಮಾಣಕ್ಕೆ ಹಣ ನೀಡಿ ಕೆಲಸ ಆರಂಭಿಸಿದ್ದೆವು. ಆ ಸ್ಮಾರಕದ ಕಾರ್ಯ ಈಗ ಪೂರ್ಣಗೊಂಡಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಖ್ಯಾತ ನಟ ‘ರೆಬಲ್ ಸ್ಟಾರ್’ ಅಂಬರೀಷ್ ಸ್ಮಾರಕ (Ambareesh Memorial) ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದ್ದಾರೆ. ಮಂಗಳವಾರ (ಫೆ.7) ಸಂಜೆ ‘ಪುನೀತ್ ರಾಜ್ಕುಮಾರ್ ರಸ್ತೆ’ (Puneeth Rajkumar Road) ಉದ್ಘಾಟನೆ ವೇಳೆ ಅವರು ಈ ವಿಚಾರ ತಿಳಿಸಿದ್ದಾರೆ. ‘ಪುನೀತ್ ರಾಜ್ಕುಮಾರ್ ಹಾಗೆಯೇ ನನ್ನ ಆತ್ಮೀಯ ಸ್ನೇಹಿತ ಅಂಬರೀಷ್ ಕೂಡ ಬಂಗಾರದ ಹೃದಯ ಹೊಂದಿದ್ದ ವ್ಯಕ್ತಿ. ಅವರು ಮನಸ್ಸು ಮಾಡಿದ್ದರೆ ಎಷ್ಟೋ ಹಣ ಗಳಿಸಬಹುದಿತ್ತು. ಆದರೆ ಅವರು ಅಪಾರ ಜನರ ಪ್ರೀತಿ-ಸ್ನೇಹ ಗಳಿಸಿದ್ದರು. ಅವರ ಸ್ಮಾರಕ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು. ಮಾರ್ಚ್ ಮೊದಲ ವಾರ ಆ ಸ್ಮಾರಕ ಉದ್ಘಾಟನೆ ಮಾಡೋಣ’ ಎಂದು ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.
‘ಒಂದು ಕಾಲದಲ್ಲಿ ನಾನು ಮತ್ತು ಅಂಬರೀಷ್ ಅವರು ಪ್ರತಿ ದಿನ ಒಟ್ಟಿಗೆ ಇರುತ್ತಿದ್ದೆವು. ಹಳ್ಳಿ, ದೇಶ, ವಿದೇಶದಲ್ಲಿ ಅವರಿಗೆ ಸ್ನೇಹಿತರು ಇದ್ದಾರೆ. ಅಂಥ ಸ್ನೇಹಿತರಲ್ಲಿ ನಾನೂ ಒಬ್ಬ. ಸುಮಾರು ಒಂದೂವರೆ ವರ್ಷದ ಹಿಂದೆ ಅಂಬರೀಷ್ ಸ್ಮಾರಕದ ನಿರ್ಮಾಣಕ್ಕೆ ಹಣ ನೀಡಿ ಕೆಲಸ ಆರಂಭಿಸಿದ್ದೆವು. ಆ ಸ್ಮಾರಕದ ಕಾರ್ಯ ಈಗ ಪೂರ್ಣಗೊಂಡಿದೆ’ ಎಂದು ಬೊಮ್ಮಾಯಿ ಹೇಳಿದ್ದಾರೆ.
ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು:
‘ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರನ್ನು ಇಡಬೇಕು ಎಂದು ಅವರ ಅನೇಕ ಸ್ನೇಹಿತರು ಆಸೆಪಟ್ಟಿದ್ದಾರೆ. ಆ ರಸ್ತೆಗೆ ಅವರ ಹೆಸರು ಸೂಕ್ತ. ಅವರ ವ್ಯಕ್ತಿತ್ವದ ಬಗ್ಗೆ ತಿಳಿದಿರುವ ಎಲ್ಲರೂ ಹೌದು ಎನ್ನುತ್ತಾರೆ. ಯಾಕೆಂದರೆ, ಅವರು ಅಲ್ಲಿ ಸಮಯ ಕಳೆಯುತ್ತಿದ್ದರು. ಕುದುರೆಯ ಓನರ್ ಆಗಿದ್ದರು. ಅದರ ಜೊತೆಗೆ ನಮ್ಮ ಚಿತ್ರೋದ್ಯಮದ ವಾಣಿಜ್ಯ ಮಂಡಳಿ ಕೂಡ ಅಲ್ಲೇ ಇದೆ. ಗಾಂಧಿನಗರವೂ ಹತ್ತಿರ ಇದೆ. ಹಾಗಾಗಿ ಆ ರಸ್ತೆಗೆ ರೇಸ್ ಕೋರ್ಸ್ ರಸ್ತೆ ಎನ್ನುವುದಕ್ಕಿಂತ ರೆಬೆಲ್ ಸ್ಟಾರ್ ರಸ್ತೆ ಎಂದರೆ ಬಹಳ ಚೆನ್ನಾಗಿ ಇರುತ್ತದೆ’ ಎಂದಿದ್ದಾರೆ ಬಸವರಾಜ ಬೊಮ್ಮಾಯಿ.
ಇದನ್ನೂ ಓದಿ: Puneeth Rajkumar Road: ಪುನೀತ್ ಜೀವನ ಚರಿತ್ರೆ ಸಾರುವ ಸ್ಮಾರಕ ನಿರ್ಮಾಣಕ್ಕೆ ಸಿಎಂ ಭರವಸೆ; ರಸ್ತೆ ಉದ್ಘಾಟನೆ ವೇಳೆ ಘೋಷಣೆ
‘ಅಂಬರೀಷ್ಗೂ ಬಹಳ ಖುಷಿ ಆಗುತ್ತದೆ’:
‘ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು ಇಡಬೇಕು ಎಂದು ನಾನು ತೀರ್ಮಾನಿಸಿದ್ದೇನೆ. ಇದರಿಂದ ಅಂಬರೀಷ್ಗೆ ಬಹಳ ಖುಷಿ ಆಗುತ್ತದೆ. ಸರಿಯಾದ ರಸ್ತೆಗೆ ನೀನು ನನ್ನ ಹೆಸರನ್ನು ಇಟ್ಟಿದ್ದೀಯ ಅಂತ ಅವನು ಹೇಳುತ್ತಾನೆ’ ಎಂದಿದ್ದಾರೆ ಬೊಮ್ಮಾಯಿ.
‘ಅಂಬರೀಷ್, ಪುನೀತ್ ರಾಜ್ಕುಮಾರ್, ವಿಷ್ಣುವರ್ಧನ್, ಡಾ. ರಾಜ್ಕುಮಾರ್ ಅವರಂತಹ ವ್ಯಕ್ತಿತ್ವಗಳು ನಮ್ಮನ್ನು ರಂಜಿಸಲು ಹುಟ್ಟಿದ್ದು ಮಾತ್ರವಲ್ಲ. ನಮ್ಮ ಪ್ರೀತಿ-ವಿಶ್ವಾಸವನ್ನು ಗಳಿಸಿದ ಜೀವಗಳು ಅವು. ಅವರ ಹೆಸರು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಇರುತ್ತದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:25 pm, Tue, 7 February 23