ಹೈದರಾಬಾದ್​​ನಲ್ಲಿ ಕನ್ನಡ ಮಾತನಾಡಿದ್ದೇಕೆ, ಕಾರಣ ಕೊಟ್ಟ ರಿಷಬ್ ಶೆಟ್ಟಿ

Rishab Shetty Kannada speech: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಮುಂಚೆ ಹೈದರಾಬಾದ್​​ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದರು. ಇದನ್ನು ವಿರೋಧಿಸಿ ಕೆಲವರು ಸಿನಿಮಾ ಬ್ಯಾನ್​​ಗೆ ಒತ್ತಾಯಿಸಿದ್ದರು. ಇದೀಗ ರಿಷಬ್ ಶೆಟ್ಟಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಾವು ಅಂದು ಕನ್ನಡದಲ್ಲಿ ಮಾತನಾಡಿದ್ದು ಏಕೆಂದು ವಿವರಿಸಿದ್ದಾರೆ.

ಹೈದರಾಬಾದ್​​ನಲ್ಲಿ ಕನ್ನಡ ಮಾತನಾಡಿದ್ದೇಕೆ, ಕಾರಣ ಕೊಟ್ಟ ರಿಷಬ್ ಶೆಟ್ಟಿ
Rishab Jr Ntr

Updated on: Oct 10, 2025 | 8:37 AM

‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಷಬ್ ಶೆಟ್ಟಿ ಹಾಕಿರುವ ಶ್ರಮ ಫಲ ನೀಡುತ್ತಿದೆ. ಸುಮಾರು ಮೂರು ವರ್ಷಗಳ ಕಾಲ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕಾಗಿ ಅವರು ಹಾಗೂ ಅವರ ತಂಡ ಕಷ್ಟ ಪಟ್ಟಿದೆ. ಸಿನಿಮಾ ಬಿಡುಗಡೆ ಸಮಯದಲ್ಲಿಯೂ ಸಹ ದೇಶದಾದ್ಯಂತ ಸಂಚರಿಸಿ ಪ್ರಚಾರ ಸಹ ಮಾಡಿದ್ದರು ರಿಷಬ್ ಶೆಟ್ಟಿ. ಆದರೆ ಹೈದರಾಬಾದ್​​ನಲ್ಲಿ ಆಯೋಜಿಸಲಾಗಿದ್ದ ಇವೆಂಟ್​​ನಲ್ಲಿ ರಿಷಬ್ ಶೆಟ್ಟಿ ಕನ್ನಡ ಮಾತನಾಡಿದರು ಎಂಬ ಕಾರಣಕ್ಕೆ ತೆಲುಗು ಜನರು ವಿವಾದ ಸೃಷ್ಟಿಸಲು ಯತ್ನಿಸಿದ್ದರು. ಆದರೆ ರಿಷಬ್ ಶೆಟ್ಟಿ ಆ ವಿಷಯವನ್ನು ಜಾಣತನದಿಂದ ನಿಭಾಯಿಸಿದ ಕಾರಣ ಈಗ ತೆಲುಗು ರಾಜ್ಯಗಳಲ್ಲಿಯೂ ಸಹ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅದ್ಧೂರಿಯಾಗಿ ಅಬ್ಬರಿಸುತ್ತಿದೆ.

ಸಿನಿಮಾ ಬಿಡುಗಡೆಗೆ ಮುಂಚೆ ಹೈದರಾಬಾದ್​​ನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮಕ್ಕೆ ಜೂ ಎನ್​ಟಿಆರ್ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ಕನ್ನಡದಲ್ಲಿಯೇ ಮಾತನಾಡಿದ್ದರು. ಇದಕ್ಕೆ ತೆಲುಗರು ಆಕ್ಷೇಪ ವ್ಯಕ್ತಪಡಿಸಿದ್ದರು. 2022 ರ ‘ಕಾಂತಾರ’ ಸಮಯದಲ್ಲಿ ರಿಷಬ್ ತೆಲುಗಿನಲ್ಲಿ ಮಾತನಾಡಿದ್ದರು. ಈಗ ತೆಲುಗು ಬರಲ್ಲ ಎಂದು ಕನ್ನಡದಲ್ಲಿ ಮಾತನಾಡಿದ್ದಾರೆ ಎಂದು ಆಕ್ಷೇಪಿಸಿದ್ದರು. ಸಿನಿಮಾ ಬ್ಯಾನ್​​ಗೆ ಸಹ ಒತ್ತಾಯಿಸಿದ್ದರು. ಆದರೆ ಅದಾದ ಕೆಲವೇ ದಿನಗಳಲ್ಲಿ ನಡೆದ ವಿಶಾಖಪಟ್ಟಣಂ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಮಾತನಾಡಿ, ವಿವಾದವನ್ನು ಸರಿಪಡಿಸಿದರು.

ಇದೀಗ ಎನ್​​ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಿಷಬ್ ಶೆಟ್ಟಿ, ‘ನಾನು ಅಪ್ಪಟ ಕನ್ನಡಿಗ, ನನಗೆ ನನ್ನ ಭಾಷೆಯ ಬಗ್ಗೆ ಹೆಮ್ಮೆ ಇದೆ. ಒಬ್ಬ ಅಪ್ಪಟ ಭಾಷಾ ಪ್ರೇಮಿ, ಮತ್ತೊಂದು ಭಾಷೆಗೆ ಎಂದೂ ಅವಮಾನ ಮಾಡಲಾರ. ತೆಲುಗು ಭಾಷೆ ನಮ್ಮ ಸಹೋದರ ಭಾಷೆ. ಅದಕ್ಕೆ ಅದರದ್ದೇ ಆದ ಗೌರವ, ಸ್ಥಾನ-ಮಾನಗಳು ಇವೆ’ ಎಂದಿದ್ದಾರೆ.

ಇದನ್ನೂ ಓದಿ:ರಿಷಬ್ ಶೆಟ್ಟಿಯ ನಂಬಿ ನೂರಾರು ಕೋಟಿ ಹೂಡಿಕೆ ಮಾಡಿದ್ದೇಕೆ ಹೊಂಬಾಳೆ?

ಮುಂದುವರೆದು, ‘ಅಂದು ಜೂ ಎನ್​ಟಿಆರ್ ಅತಿಥಿಯಾಗಿ ಬಂದಿದ್ದರು. ಅವರೊಂದಿಗೆ ನನ್ನದು ಆತ್ಮೀಯ ಬಂಧ. ಅವರು ನನ್ನ ಗೆಳೆಯ, ಸಹೋದರ ಇದ್ದಂತೆ. ಅವರಿಗೆ ನಾನು ಕೆಲವು ವಿಷಯಗಳನ್ನು ಹೇಳಬೇಕಿತ್ತು, ಅದು ತುಸು ಭಾವನಾತ್ಮಕವಾದ ವಿಷಯಗಳಾಗಿದ್ದವು. ಹಾಗಾಗಿ ನಾನು ಅಂದು ಕನ್ನಡದಲ್ಲಿಯೇ ಮಾತನಾಡಿದೆ. ನನಗೆ ತೆಲುಗು ಸರಿಯಾಗಿ ಬರುವುದಿಲ್ಲ. ಹಿಂದಿಯೂ ಅಷ್ಟಕ್ಕಷ್ಟೆ, ಇಂಗ್ಲೀಷಿನ ಮೇಲೂ ಹಿಡಿತ ಇಲ್ಲ. ಹಾಗಾಗಿ ನನ್ನ ಮಾತೃಭಾಷೆಯನ್ನು ಬಳಸಿದೆ. ನಾನು ಯೋಚಿಸುವುದು ಕನ್ನಡದಲ್ಲಿ ಹಾಗಾಗಿ ಸಹಜವಾಗಿಯೇ ನನ್ನ ಯೋಚನೆಗಳನ್ನು ನಾನು ನನ್ನದೇ ಭಾಷೆಯಲ್ಲಿ ವ್ಯಕ್ತಪಡಿಸುತ್ತೇನೆ’ ಎಂದು ವಿವರಣೆ ನೀಡಿದ್ದಾರೆ.

ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರಾದರೂ, ಡಿಸಿಎಂ ಪವನ್ ಕಲ್ಯಾಣ್ ಸೇರಿದಂತೆ ಇನ್ನೂ ಕೆಲವು ಸಿನಿಮಾ ಪ್ರಮುಖರು ರಿಷಬ್ ಶೆಟ್ಟಿಯ ಭಾವನೆಗಳನ್ನು ಅರ್ಥ ಮಾಡಿಕೊಂಡು, ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟಿಕೆಟ್ ಹೆಚ್ಚಳಕ್ಕೆ ಅನುಮತಿ ನೀಡಿದರು. ಬಳಿಕ ರಿಷಬ್ ಸಹ ಪವನ್ ಕಲ್ಯಾಣ್, ಚಂದ್ರಬಾಬು ನಾಯ್ಡು, ಜೂ ಎನ್​ಟಿಆರ್, ಪ್ರಭಾಸ್ ಅವರುಗಳಿಗೆ ತಮ್ಮ ಸಿನಿಮಾಕ್ಕೆ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ