‘ಕಾಂತಾರ’ದಲ್ಲಿ ನಟಿಸಲು ಹಿಂಜರಿದಿದ್ದರು ರುಕ್ಮಿಣಿ ವಸಂತ್, ಒಪ್ಪಿಸಿದ್ದು ಯಾರು?

Kantara Chapter 1: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ಸಿನಿಮಾನಲ್ಲಿ ನಾಯಕಿ ರುಕ್ಮಿಣಿ ವಸಂತ್ ಪಾತ್ರದ ಬಗ್ಗೆಯೂ ಸಹ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಆದರೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅವಕಾಶ ಬಂದಾಗ ನಟಿಸಲು ಹಿಂಜರಿದಿದ್ದರಂತೆ ರುಕ್ಮಿಣಿ ಆದರೆ ಅವರನ್ನು ಒಪ್ಪಿಸಿದ್ದು ಯಾರು?

‘ಕಾಂತಾರ’ದಲ್ಲಿ ನಟಿಸಲು ಹಿಂಜರಿದಿದ್ದರು ರುಕ್ಮಿಣಿ ವಸಂತ್, ಒಪ್ಪಿಸಿದ್ದು ಯಾರು?
Rukmini Vasanth

Updated on: Nov 20, 2025 | 6:34 PM

ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಗ್ಲೋಬಲ್ ಹಿಟ್ ಆಗಿದೆ. ಗಳಿಕೆಯಲ್ಲಿ ಕೆಲವು ಹೊಸ ದಾಖಲೆಗಳನ್ನು ಈ ಸಿನಿಮಾ ಬರೆದಿದೆ. ಸಿನಿಮಾದ ಪ್ರತಿ ವಿಭಾಗದ ಕೆಲಸಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾನಲ್ಲಿ ರಿಷಬ್ ಶೆಟ್ಟಿಯ ನಟನೆ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಅವರ ಸರಿಸಮಕ್ಕೆ ನಾಯಕಿ ರುಕ್ಮಿಣಿ ವಸಂತ್ ಸಹ ನಟಿಸಿದ್ದಾರೆ. ಸಿನಿಮಾ ನೋಡುವವರಿಗೆ ರುಕ್ಮಿಣಿ ವಸಂತ್ ಪಾತ್ರದ ಟ್ವಿಸ್ಟ್ ಹಾಗೂ ಅವರ ನಟನೆ ಎರಡೂ ಇಷ್ಟವಾಗಿದೆ. ಸಿನಿಮಾನಲ್ಲಿ ಅವರ ನಟನೆಗೆ ಪ್ರೇಕ್ಷಕರ ಮಾರು ಹೋಗಿದ್ದಾನೆ. ಆದರೆ ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ನಟಿಸಲು ಹಿಂದೇಟು ಹಾಕಿದ್ದರಂತೆ ರುಕ್ಮಿಣಿ, ಆದರೆ ಅವರನ್ನು ಒಪ್ಪಿಸಿದ್ದು ಯಾರು? ಅವರೇ ಹೇಳಿದ್ದಾರೆ.

ಇತ್ತೀಚೆಗಿನ ಸಂದರ್ಶನದಲ್ಲಿ ಮಾತನಾಡಿರುವ ನಟಿ ರುಕ್ಮಿಣಿ ವಸಂತ್, ‘ನನಗೆ ನೆಗೆಟಿವ್ ಪಾತ್ರದಲ್ಲಿ ನಟಿಸುವ ಬಗ್ಗೆ ಗೊಂದಲ ಇತ್ತು. ನಟಿಸಬೇಕೆ? ಬೇಡವೆ? ಎಂಬ ಬಗ್ಗೆ ಅನುಮಾನ ಇತ್ತು. ಆದರೆ ನನ್ನ ತಾಯಿ ನನ್ನ ಗೊಂದಲ ದೂರ ಮಾಡಿದರು. ಸಿನಿಮಾದ ಪಾತ್ರ ಚೆನ್ನಾಗಿ ಮೂಡಿಬರುತ್ತದೆ ಎಂಬ ವಿಶ್ವಾಸ ತುಂಬಿದರು. ಪಾತ್ರವನ್ನು ಸಹ ಚೆನ್ನಾಗಿ ರೂಪಿಸಲಾಗಿತ್ತು ಹಾಗಾಗಿ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡೆ’ ಎಂದಿದ್ದಾರೆ ರುಕ್ಮಿಣಿ ವಸಂತ್.

ಅಲ್ಲದೆ, ಶೂಟಿಂಗ್ ಸಮಯದಲ್ಲಿ ಸಹ ಸಿನಿಮಾದ ಬರಹಗಾರರು, ಸಹಾಯಕ ನಿರ್ದೇಶಕರುಗಳ ಜೊತೆಗೆ ಸಾಕಷ್ಟು ಸಮಯ ಕಳೆಯುತ್ತಿದ್ದೆ. ಸಂಭಾಷಣೆಯನ್ನು ಸರಿಯಾದ ರೀತಿಯಲ್ಲಿ ಹೇಳುವುದನ್ನು ಹಾಗೂ ಬಾಡಿ ಲಾಂಗ್ವೇಜ್ ಅನ್ನು ಪಕ್ಕಾ ಮಾಡಿಕೊಂಡ ಬಳಿಕವೇ ನಾವು ಶೂಟಿಂಗ್ ಸೆಟ್​​ಗೆ ಹೋಗುತ್ತಿದ್ದೆವು. ಕನ್ನಡ ಭಾಷೆಯೇ ಆದರೂ ಅದನ್ನು ಆಡುವ ರೀತಿಯ ಭಿನ್ನವಾಗಿತ್ತು. ಶೈಲಿಗೆ ನಾನು ಹೊಂದಿಕೊಳ್ಳಬೇಕಿತ್ತು, ಹಾಗಾಗಿ ಸಾಕಷ್ಟು ಹೋಂ ವರ್ಕ್ ನಾನು ಮಾಡಿಕೊಂಡೆ’ ಎಂದಿದ್ದಾರೆ ರುಕ್ಮಿಣಿ ವಸಂತ್. ಅಂತಿಮವಾಗಿ ಜನರ ಪ್ರೀತಿ ನೋಡಿದಾಗ ಸಾರ್ಥಕ ಎನಿಸಿತು ಎಂದಿದ್ದಾರೆ.

ಇದನ್ನೂ ಓದಿ:ರುಕ್ಮಿಣಿ ವಸಂತ್ ಅವರಿಗೆ ಆ ರೀತಿಯ ಹಾಡಿನಲ್ಲಿ ನಟಿಸುವಾಸೆಯಂತೆ

ತಮ್ಮ ಪರಭಾಷೆ ಸಿನಿಮಾಗಳ ಬಗ್ಗೆಯೂ ಮಾತನಾಡಿರುವ ರುಕ್ಮಿಣಿ ವಸಂತ್, ‘ಬೇರೆ ಭಾಷೆಗಳ ಸಿನಿಮಾಗಳಿಗೆ ನಾನು ಡಬ್ ಮಾಡಿಲ್ಲವಾದರೂ ಶೂಟಿಂಗ್ ಸಮಯದಲ್ಲಿ ಸರಿಯಾಗಿ ಸಂಭಾಷಣೆ ಹೇಳುವುದನ್ನು ನಾನು ಪದೇ ಪದೇ ಪ್ರಾಕ್ಟಿಸ್ ಮಾಡುತ್ತಲೇ ಇರುತ್ತೇನೆ. ‘ಮದರಾಸಿ’ ಸಿನಿಮಾಕ್ಕೂ ಸಹ ಸಹಾಯಕ ನಿರ್ದೇಶಕರುಗಳ ತಂಡದ ಸಹಾಯದೊಂದಿಗೆ ನಾನು ತಮಿಳು ಸಂಭಾಷಣೆಗಳನ್ನು ಸರಿಯಾಗಿ ಹೇಳುವುದನ್ನು ಅಭ್ಯಾಸ ಮಾಡಿದೆ. ಡಬ್ ನಾನು ಮಾಡುವುದಿಲ್ಲವಾದರೂ ಶೂಟಿಂಗ್ ಸಮಯದಲ್ಲಿ ಸಂಭಾಷಣೆ ಸರಿಯಾಗಿ ಹೇಳಿದರಷ್ಟೆ ಎದುರಿಗಿರುವ ನಟರಿಗೆ ನಟಿಸಲು ಕಷ್ಟವಾಗುವುದಿಲ್ಲ’ ಎಂದಿದ್ದಾರೆ ರುಕ್ಮಿಣಿ ವಸಂತ್.

ಪ್ರತಿ ಸಿನಿಮಾ ಸಹ ಹೊಸ ವಿಷಯಗಳ ಕಲಿಕೆಗೆ ಸಿಗುತ್ತಿರುವ ಅವಕಾಶ ಎಂದಿರುವ ರುಕ್ಮಿಣಿ ವಸಂತ್, ಪ್ರತಿ ಸಿನಿಮಾಕ್ಕೂ, ಪ್ರತಿ ಪಾತ್ರಕ್ಕೂ ಅದರದ್ದೇ ಆದ ಸವಾಲುಗಳು ಇರುತ್ತವೆ. ಸೂಕ್ತ ತರಬೇತಿಯಿಂದ ಮಾತ್ರವೇ ಅಂತಿಮ ಫಲಿತಾಂಶ ಉತ್ತಮವಾಗಿ ಬರಲು ಸಾಧ್ಯ ಎಂದು ತಾವು ನಂಬಿರುವುದಾಗಿ ಅವರು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ