
ರುಕ್ಮಿಣಿ ವಸಂತ್ (Rukmini Vasanth) ಪ್ರಸ್ತುತ ದಕ್ಷಿಣ ಭಾರತದ ಸ್ಟಾರ್ ನಟಿ. ತಮ್ಮ ನಟನೆ ಮತ್ತು ಸೌಂದರ್ಯದಿಂದ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ ರುಕ್ಮಿಣಿ ವಸಂತ್. ‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳಲ್ಲಿ ರುಕ್ಮಿಣಿ ಅವರ ನಟನೆ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಪರ ಭಾಷೆಯ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾಗಳಲ್ಲಿ ರುಕ್ಮಿಣಿ ನಟಿಸುತ್ತಿದ್ದಾರೆ. ಇವುಗಳ ನಡುವೆ ಬಾಲಿವುಡ್ಗೂ ಸಹ ರುಕ್ಮಿಣಿ ವಸಂತ್ ಕಾಲಿಡುತ್ತಿದ್ದಾರೆ. ಆದರೆ ರುಕ್ಮಿಣಿ ಅವರಿಗೆ ನಟಿ ಆಗುವ ಆಸೆಯೇ ಇರಲಿಲ್ಲ, ಬೇರೆ ಏನೋ ಆಗುವ ಆಸೆ ಇತ್ತು.
ಬಹುತೇಕರಿಗೆ ಗೊತ್ತಿರುವಂತೆ ಭಾರತೀಯ ಸೇನೆಯ ಹೆಮ್ಮೆಯ ಕರ್ನಲ್ ವಸಂತ್ ವೇಣುಗೋಪಾಲ್ ಅವರ ಪುತ್ರಿ ರುಕ್ಮಿಣಿ ವಸಂತ್. ಎಳವೆಯಿಂದ ವಿದ್ಯಾಭ್ಯಾಸದಲ್ಲಿಯೂ ಮುಂದಿದ್ದರಂತೆ ರುಕ್ಮಿಣಿ. ಬಹಳ ವರ್ಷ ಅವರಿಗೆ ತಾವು ಪಶು ವೈದ್ಯರಾಗಬೇಕು ಎಂಬ ಆಸೆ ಇತ್ತಂತೆ. ಪ್ರಾಣಿ ಪ್ರೇಮಿ ಆಗಿದ್ದ ರುಕ್ಮಿಣಿ ಅವರಿಗೆ ತಾವು ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ವೈದ್ಯೆ ಆಗಬೇಕು ಎಂಬ ಆಸೆಯಿತ್ತಂತೆ. ಆದರೆ ಬರ ಬರುತ್ತಾ, ಆ ಕೆಲಸ ಎಷ್ಟು ಕಷ್ಟ ಎಂದು ಅರಿವಾಗಿ ಆ ಆಸೆ ಕೈಬಿಟ್ಟರಂತೆ ನಟಿ.
ಇದನ್ನೂ ಓದಿ:ರುಕ್ಮಿಣಿ ವಸಂತ್ ಮೇಕಪ್ ಹೀಗೆ ನಡೆಯುತ್ತೆ: ವಿಡಿಯೋ ನೋಡಿ
ಅದರ ಬಳಿಕ ಫ್ಯಾಷನ್ ಡಿಸೈನರ್ ಆಗುವ ಆಸೆ ಮೂಡಿತಂತೆ. ಆದರೆ ಆ ಆಸೆಯೂ ಕಮರಿ ಕೊನೆಗೆ ನಟನೆಯತ್ತ ಮನಸ್ಸು ಹೊರಳಿದೆ. ಬಳಿಕ ಅವರು ಲಂಡನ್ನ ಪ್ರತಿಷ್ಠಿತ ಡ್ರಾಮಾ ಶಾಲೆಯಾದ ರಾಡಾನಲ್ಲಿ ಅಡ್ಮೀಷನ್ ಪಡೆದರು. ಅಲ್ಲಿ ಹಲವು ವರ್ಷ ಕಲಿತು ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಮೊದಲಿಗೆ ‘ಬೀರ್ಬಲ್’ ಸಿನಿಮಾನಲ್ಲಿ ನಟಿಸಿದರು. ಅದರ ಬಳಿಕ ಮತ್ತೊಂದು ಸಿನಿಮಾ ಒಪ್ಪಿಕೊಂಡರಾದರೂ ಅದು ಕೋವಿಡ್ ಕಾರಣಕ್ಕೆ ನಿಂತು ಹೋಯ್ತು. ಬಳಿಕ ಇನ್ನು ಚಿತ್ರರಂಗದಲ್ಲಿ ಉಳಿವಿಲ್ಲ ಎಂದುಕೊಂಡಾಗ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾನಲ್ಲಿ ಅವಕಾಶ ದೊರೆಯಿತು. ಬಳಿಕ ನಡೆದಿದ್ದೆಲ್ಲ ಇತಿಹಾಸ.
ಅಂದಹಾಗೆ ರುಕ್ಮಿಣಿ ಅವರು ನಟಿಯಾಗುವಲ್ಲಿ ಅವರ ತಾಯಿಯ ಪಾತ್ರ ಮಹತ್ವದ್ದಂತೆ. ರುಕ್ಮಿಣಿ ಅವರ ತಾಯಿ ಸ್ವತಃ ನೃತ್ಯ ಕಲಾವಿದೆ. ಅದ್ಭುತವಾಗಿ ನೃತ್ಯ ಮಾಡುವ ಜೊತೆಗೆ ನಾಟಕ ರಚನೆ, ನಿರ್ದೇಶನ ಸಹ ಮಾಡುತ್ತಿದ್ದರಂತೆ. ಎಳವೆಯಲ್ಲಿ ಕೆಲವು ನಾಟಕಗಳಲ್ಲಿಯೂ ರುಕ್ಮಿಣಿ ನಟಿಸಿದ್ದರು. ಬಳಿಕ ತಾಯಿಯ ಮಾರ್ಗದರ್ಶನದಲ್ಲಿ ನೃತ್ಯವನ್ನೂ ಕಲಿತರು. ರಾಡಾನಲ್ಲಿ (ರಾಯಲ್ ಅಕಾಡೆಮಿ ಆಫ್ ಡ್ರಾಮಾ ಆರ್ಟ್ಸ್) ಅಡ್ಮೀಷನ್ ಪಡೆಯುವಲ್ಲಿ ತಾಯಿಯ ಬೆಂಬಲವೂ ಸಾಕಷ್ಟಿದೆ ಎಂದು ರುಕ್ಮಿಣಿ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ ರುಕ್ಮಿಣಿ ವಸಂತ್ ಅವರು ಬೆಂಗಳೂರಿನಲ್ಲಿ ಬ್ಯಾಲೆ ಡ್ಯಾನ್ಸ್ ಸಹ ಕಲಿತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ