
ಬೆಂಗಳೂರು: ರಥ ಸಪ್ತಮಿ ದಿನದಂದು (ಫೆ.19) ಅದ್ದೂರಿಯಾಗಿ ತೆರೆ ಕಂಡ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಭರ್ಜರಿಯಾಗಿ ತನ್ನ ಆಟ ಮುಂದುವರೆಸಿದೆ. ಆದ್ರೆ ಸದ್ಯ ಈಗ ಪೊಗರು ಸಿನಿಮಾ ವಿರುದ್ಧ ಆರೋಪವೊಂದು ಕೇಳಿ ಬಂದಿದೆ. ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡೋ ದೃಶ್ಯ ಇದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಆರೋಪ ಮಾಡಿದ್ದಾರೆ. ಕೂಡಲೇ ಚಿತ್ರತಂಡ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಬ್ರಾಹ್ಮಣ ಸಮುದಾಯದ ಬಗ್ಗೆ ಪೊಗರು ಸಿನಿಮಾದಲ್ಲಿ ಅವಹೇಳನಕಾರಿಯಾದ ಹೇಳಿಕೆಗಳಿವೆ. ಇದರಿಂದ ಸಮುದಾಯದ ಜನರಿಗೆ ನೋವುಂಟಾಗಿದೆ. ಕೂಡಲೇ ಚಿತ್ರತಂಡ, ಪೊಗರು ಚಿತ್ರದ ನಿರ್ದೇಶಕ, ನಿರ್ಮಾಪಕರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ವಾಣಿಜ್ಯ ಮಂಡಳಿಗೆ ದೂರು ನೀಡಲು ನಿರ್ಧರಿಸಲಾಗಿದೆ. ಜೊತೆಗೆ ಸಿನಿಮಾದಲ್ಲಿರುವ ದೃಶ್ಯವನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಮುಂದೆ ಹೋರಾಟ ಮಾಡ್ತೀವಿ ಎಂದು ಸಚ್ಚಿದಾನಂದಮೂರ್ತಿ ಪೊಗರು ಸಿನಿಮಾ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಫೆ. 23ರಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ಬಗ್ಗೆ ಮನವಿ ಸಲ್ಲಿಸುತ್ತೇವೆ. ಫೆ.24ರ ಬುಧವಾರ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಸಚ್ಚಿದಾನಂದಮೂರ್ತಿ ತಿಳಿಸಿದ್ದಾರೆ.
ತಪ್ಪಾಗಿದ್ರೆ ಕ್ಷಮೆ ಕೇಳೋದ್ರಲ್ಲಿ ತಪ್ಪೇನಿಲ್ಲ
ವಿವಾದದ ಬೆನ್ನಲ್ಲೇ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಪೊಗರು ಚಿತ್ರದ ನಿರ್ದೇಶಕ ನಂದ ಕಿಶೋರ್, “ಯಾವುದೇ ಸಮುದಾಯವನ್ನ ಅವಮಾನಿಸೋ ಉದ್ದೇಶ ಇಲ್ಲ. ಬ್ರಾಹ್ಮಣರನ್ನ ತುಂಬಾ ಗೌರವಿಸ್ತಿವಿ. ಇದು ಒಂದು ಕಾಲ್ಪನಿಕ ಕಥೆ. ಒಬ್ಬ ರಾಕ್ಷಸ ಹೇಗಿರ್ತಾನೆ. ಹಿಂದಿನ ಕಾಲದಲ್ಲಿ ಗುರುಗಳು ಹೋಮ ಮಾಡುವಾಗ ರಾಕ್ಷಸರು ಬಂದು ತೊಂದರೆ ಕೊಡ್ತಿದ್ರು. ಅದನ್ನ ಈ ಕಾಲಕ್ಕೆ ತೋರಿಸಿದ್ದೀನಿ ಅಷ್ಟೇ. ಇದ್ರಿಂದ ತೊಂದರೆ ಆಗ್ತಿದೆ ಅಂದ್ರೆ ಬದಲಾಯಿಸುತ್ತೇವೆ. ತಿಳಿದೇ ತಿಳಿಯದೇನೋ ತಪ್ಪಾಗಿದ್ರೆ ಕ್ಷಮೆ ಕೇಳೋದ್ರಲ್ಲಿ ತಪ್ಪೇನಿಲ್ಲ” ಎಂದು ನಂದ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ.
ಅಷ್ಟಕ್ಕು ಚಿತ್ರದಲ್ಲಿರುವುದೇನು?
ಸಿನೆಮಾದ ದೃಶ್ಯವೊಂದರಲ್ಲಿ ಅರ್ಚಕರು ಹೋಮ ಮಾಡ್ತಾ ಇರ್ತಾರೆ. ಅವಾಗ ವಿಲನ್ಗಳು ಎಂಟ್ರಿಯಾಗಿ ಹೋಮಕ್ಕೆ ತಡೆಯೊಡ್ಡುತ್ತಾರೆ. ಈ ಸಂದರ್ಭ ವಿಲನ್ ಒಬ್ಬ ಅರ್ಚಕನ ಹೆಗಲ ಮೇಲೆ ಕಾಲಿಟ್ಟು ಹೊಡೆಯುತ್ತಾನೆ. ಈ ದೃಶ್ಯದ ಬಗ್ಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Pogaru First Day Collection: ಧ್ರುವ ಸರ್ಜಾ ನಟನೆಯ ಪೊಗರು ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?
Pogaru Movie Review: ಪೊಗರು ವಿಮರ್ಶೆ: ಫ್ಯಾನ್ಸ್ ಖುಷಿಪಡಿಸಲು ಮತ್ತೆ ಮಾಸ್ ಅವತಾರ ಎತ್ತಿದ ಧ್ರುವ ಸರ್ಜಾ
Published On - 2:15 pm, Sun, 21 February 21