Sanchari Vijay: ಸಂಚಾರಿ ವಿಜಯ್ ಅಪಘಾತದ ಸುದ್ದಿ ತಿಳಿದ ತಕ್ಷಣ ಸಹಾಯ ಮಾಡಿದ ಸುದೀಪ್; ಕೂಡಲೇ ನಡೆಯಿತು ಸರ್ಜರಿ

| Updated By: Digi Tech Desk

Updated on: Jun 14, 2021 | 9:46 AM

Kichcha Sudeep | Sanchari Vijay Health Update: ಸಂಚಾರಿ ವಿಜಯ್​ ಅವರು ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಸ್ಯಾಂಡಲ್​ವುಡ್​ನ ಅನೇಕ ಸೆಲೆಬ್ರಿಟಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ವಿಜಯ್​ ಚಿಕಿತ್ಸೆಗೆ ಸುದೀಪ್​ ನೆರವಾಗಿದ್ದಾರೆ.

Sanchari Vijay: ಸಂಚಾರಿ ವಿಜಯ್ ಅಪಘಾತದ ಸುದ್ದಿ ತಿಳಿದ ತಕ್ಷಣ ಸಹಾಯ ಮಾಡಿದ ಸುದೀಪ್; ಕೂಡಲೇ ನಡೆಯಿತು ಸರ್ಜರಿ
ಸುದೀಪ್​- ಸಂಚಾರಿ ವಿಜಯ್​
Follow us on

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ ಸಂಚಾರಿ ವಿಜಯ್​ ಅವರು ರಸ್ತೆ ಅಪಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ (ಜೂ.12) ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಅವರಿಗೆ ಆಕ್ಸಿಡೆಂಟ್​ ಆಯಿತು. ಕೂಡಲೇ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವಿಷಯ ತಿಳಿಯುತ್ತಿದ್ದಂತೆಯೇ ಕಿಚ್ಚ ಸುದೀಪ್​ ಅವರು ಸಹಾಯಹಸ್ತ ಚಾಚಿದ್ದಾರೆ. ಅವರಿಂದಾಗಿ ವಿಜಯ್​ಗೆ ರಾತ್ರೋರಾತ್ರಿ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವಾಯಿತು ಎಂಬ ಮಾಹಿತಿ ಸಿಕ್ಕಿದೆ.

ಸಂಚಾರಿ ವಿಜಯ್​ ಅವರನ್ನು ಜೂ.12ರ ರಾತ್ರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರಿಸ್ಥಿತಿ ತುಂಬ ಗಂಭೀರವಾಗಿತ್ತು. ಸುದೀಪ್​ ಅವರು ಕೂಡಲೇ ಅಪೋಲೋ ಆಸ್ಪತ್ರೆಯ ವೈದ್ಯರಿಗೆ ಕರೆಮಾಡಿ ಶಸ್ತ್ರ ಚಿಕಿತ್ಸೆ ಮಾಡುವಂತೆ ಮನವಿ ಮಾಡಿಕೊಂಡರು. ಆ ಕಾರಣ ತ್ವರಿತಗತಿಯಲ್ಲಿ ಚಿಕಿತ್ಸೆ ಸಿಗಲು ಸಾಧ್ಯವಾಯ್ತು ಎಂದು ಮೂಲಗಳಿಂದ ತಿಳಿದುಬಂದಿದೆ. ವಿಜಯ್​ ಅವರು ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಸ್ಯಾಂಡಲ್​ವುಡ್​ನ ಅನೇಕ ಸೆಲೆಬ್ರಿಟಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಭಾನುವಾರ (ಜೂ.13) ರಾತ್ರಿ ವಿಜಯ್​ ಆರೋಗ್ಯದ ಬಗ್ಗೆ ಅಪೊಲೋ ಆಸ್ಪತ್ರೆಯಿಂದ ಅಧಿಕೃತವಾಗಿ ಹೆಲ್ತ್​ ಬುಲೆಟಿನ್​ ಬಿಡುಗಡೆ ಮಾಡಲಾಗಿದೆ. ಅವರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂಬುದು ಗೊತ್ತಾಗಿದೆ. ‘ಆಸ್ಪತ್ರೆಗೆ ಕರೆತಂದಾಗ ಮೆದುಳಿನ ಭಾಗದಲ್ಲಿ ಉಂಟಾದ ರಕ್ತಸ್ರಾವದಿಂದ ವಿಜಯ್​ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಮೆದುಳಿನಲ್ಲಿನ ರಕ್ತಸ್ರಾವ ತೆಗೆಯಲಾಗಿದೆ. ಅವರು​ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಎಲ್ಲಾ ಜೀವ ರಕ್ಷಕ ವಿಧಾನದ ಮೂಲಕ, ನ್ಯೂರೋ ಐಸಿಯುನಲ್ಲಿ ಇದ್ದಾರೆ. ನಾವು ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ರಂಗಭೂಮಿ ಹಿನ್ನೆಲೆಯಿಂದ ಬಂದ ಸಂಚಾರಿ ವಿಜಯ್​ ಓರ್ವ ಪ್ರತಿಭಾನ್ವಿತ ನಟ. 2014ರಲ್ಲಿ ಅವರ ನಟಿಸಿದ ಹರಿವು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ‘ನಾನು ಅವನಲ್ಲ.. ಅವಳು’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಅವಕಾಶಗಳು ಹೆಚ್ಚಾಗಿದ್ದವು. ಲಾಕ್​ಡೌನ್​ ಸಂದರ್ಭದಲ್ಲಿ ಅವರು ಅನೇಕರಿಗೆ ಸಹಾಯ ಮಾಡುತ್ತಿದ್ದರು. ಅಷ್ಟರಲ್ಲೇ ಈ ಅಪಘಾತ ಸಂಭವಿಸಿರುವುದು ನೋವಿನ ಸಂಗತಿ.

ಇದನ್ನೂ ಓದಿ:

ಸಂಚಾರಿ ವಿಜಯ್​ ಕೋಮಾದಲ್ಲೇ ಇದ್ದಾರೆ, ಆರೋಗ್ಯ ಸ್ಥಿತಿ ಗಂಭೀರವಾಗಿದೆ: ವೈದ್ಯರ ಮಾಹಿತಿ

ಕೊರೊನಾ ವೈರಸ್​ನಿಂದಾಗಿ ಮೂವರು ಆತ್ಮೀಯರನ್ನು ಕಳೆದುಕೊಂಡ ನಟ ಸಂಚಾರಿ ವಿಜಯ್

Published On - 9:19 am, Mon, 14 June 21