ಸುದೀಪ್ (Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ (MN Kumar) ನಡುವಿನ ವಿವಾದವನ್ನು ಬಗೆಹರಿಸಲು ಫಿಲಂ ಚೇಂಬರ್ ಯತ್ನಿಸುತ್ತಿದೆ. ಸ್ವತಃ ನಿರ್ಮಾಪಕ ಕುಮಾರ್, ಫಿಲಂ ಚೇಂಬರ್ ಎದುರು ಧರಣಿ ಕೂತಿದ್ದು, ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು (Sa Ra Govindu) ಮಾತನಾಡಿದ್ದು, ಸುದೀಪ್ ಅವರು ಫಿಲಂ ಚೇಂಬರ್ನ ಸಂಧಾನ ಸಮಿತಿ ಮುಂದೆ ಹಾಜರಾಗಿ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
”ಸುದೀಪ್ ಅವರಿಂದ ಹಣ ಕೊಡಿಸಿ ಎಂದು ನಿರ್ಮಾಪಕ ಎಂಎನ್ ಕುಮಾರ್ ವಾಣಿಜ್ಯ ಮಂಡಳಿಯಲ್ಲಿ ಮನವಿ ಮಾಡಿದ್ದಾರೆ. ಅವರು ಕೇಳಿದ ಕೂಡಲೇ ಹಣ ಕೊಡಿಸಿಬಿಡಲು ಆಗುವುದಿಲ್ಲ. ಸುದೀಪ್ ಸಹ ಸಣ್ಣವರಲ್ಲ. ಚಿತ್ರರಂಗದಲ್ಲಿ ವರ್ಷಗಳಿಂದಲೂ ಇರುವ ವ್ಯಕ್ತಿ. ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದರೆ ಕೇವಲ 10-15 ನಿಮಿಷಗಳಲ್ಲಿ ಈ ಸಮಸ್ಯೆ ಬಗೆಹರಿದುಬಿಡುತ್ತಿತ್ತು. ಈ ಹಿಂದೆಯೂ ಈ ರೀತಿಯ ಹಲವಾರು ಸಮಸ್ಯೆಗಳು ವಾಣಿಜ್ಯ ಮಂಡಳಿಯಲ್ಲಿ ಬಗೆಹರಿದಿವೆ” ಎಂದಿದ್ದಾರೆ.
”ಕಾಲ ಇನ್ನೂ ಮಿಂಚಿಲ್ಲ. ಸುದೀಪ್, ನಮ್ಮವರು, ಕನ್ನಡದ ಕಲಾವಿದರು, ಸುದೀಪ್ ನಮ್ಮ ಹೆಮ್ಮೆ. ಅವರು ಬಂದು ವಾಣಿಜ್ಯ ಮಂಡಳಿಯಲ್ಲಿ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅವರ ಮೇಲೆ ಯಾರೂ ದೂಷಣೆ ಮಾಡುತ್ತಿಲ್ಲ. ಸುದೀಪ್ ಅವರು ಮಂಡಳಿಗೆ ಬರಬೇಕು, ಕುಮಾರ್ ಹೇಳುತ್ತಿರುವುದು ಸತ್ಯವಾ ಅಥವಾ ಸುಳ್ಳಾ ಎಂಬುದನ್ನು ಸುದೀಪ್ ಅವರೇ ಸಾಬೀತು ಪಡಿಸಬಹುದಾಗಿತ್ತು. ಕುಮಾರ್ ಸುಳ್ಳು ಹೇಳುತ್ತಿದ್ದರೆ ನೀವೇ ಅದನ್ನು ಸಾಬೀತು ಮಾಡಿ, ನಿಮಗೆ ಅವಕಾಶ ಇದೆ. ಒಬ್ಬ ನಿರ್ಮಾಪಕನ ಮೇಲೆ 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿರುವುದು ಸರಿಯಲ್ಲ. ಸಮಸ್ಯೆಯನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳೋಣ” ಎಂದಿದ್ದಾರೆ ಸಾರಾ ಗೋವಿಂದು.
ಇದನ್ನೂ ಓದಿ: ಸುದೀಪ್ ನನ್ನ ಮಗನಂತೆ, ನನ್ನ ಮಗನನ್ನು ನಾನು ಬಿಟ್ಟುಕೊಡಲ್ಲ: ರವಿಚಂದ್ರನ್
”ಸುದೀಪ್ ಅವರಿಂದ ಸಾಕಷ್ಟು ಜನರಿಗೆ ಸಹಾಯ ಆಗಿದೆ. ಅವರೇನು ಮಹಾನ್ ತಪ್ಪು ಮಾಡಿಲ್ಲ, ಅವರು ಕನ್ನಡ ಚಿತ್ರರಂಗದವರು. ಕುಮಾರ್ ಹೇಳುತ್ತಿದ್ದಾರೆ, ಸುದೀಪ್ ಎದುರಿಗೆ ನಾನು ಸಾಬೀತು ಪಡಿಸುತ್ತೇನೆ ಎಂದು. ಸುದೀಪ್ ಸಹ ಹಾಗೆಯೇ ಬಂದು ಅವರ ವಾದ ಮಂಡಿಸಲಿ, ಯಾರದ್ದು ಸರಿಯೋ ತೀರ್ಮಾನ ಆಗಿಬಿಡಲಿ” ಎಂದಿದ್ದಾರೆ ಸಾರಾ ಗೋವಿಂದು.
ನಿರ್ಮಾಪಕ ಎಂಎನ್ ಕುಮಾರ್ ಅವರು ಸುದೀಪ್ ವಿರುದ್ಧ ಆರೋಪ ಮಾಡಿದ್ದು, ಸುದೀಪ್ ತಮ್ಮಿಂದ ಅಡ್ವಾನ್ಸ್ ಹಣ ಪಡೆದು ವರ್ಷಗಳಾದರು ಸಿನಿಮಾ ಮಾಡಿಕೊಟ್ಟಿಲ್ಲ, ಡೇಟ್ಸ್ ಸಹ ಕೊಡುತ್ತಿಲ್ಲ, ಹಣವನ್ನೂ ವಾಪಸ್ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕುಮಾರ್ ಜೊತೆಗೆ ಸುರೇಶ್ ಆ ನಂತರ ರೆಹಮಾನ್ ಸಹ ಸುದೀಪ್ ವಿರುದ್ಧ ಇದೇ ಮಾದರಿಯ ಆರೋಪಗಳನ್ನು ಮಾಡಿದ್ದರು. ಇದೀಗ ಸುದೀಪ್, ತಮ್ಮ ವಿರುದ್ಧ ಆರೋಪ ಮಾಡಿರುವ ನಿರ್ಮಾಪಕರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಿರ್ಮಾಪಕರ ವಿರುದ್ಧ ಹತ್ತು ಕೋಟಿ ಮೌಲ್ಯದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ