ನಿರ್ಮಾಪಕ ದೇವರಾಜ್ ಅವರು ‘ಡಿ ಕ್ರಿಯೇಷನ್ಸ್’ ಲಾಂಛನದ ಮೂಲಕ ನಿರ್ಮಾಣ ಮಾಡಿರುವ ‘SCAM 1770’ ಸಿನಿಮಾ ತೆರೆಗೆ ಬರಲು ಸಕಲ ಸಿದ್ಧತೆ ನಡೆಸಿದೆ. ಈ ಸಿನಿಮಾಗೆ ವಿಕಾಸ್ ಪುಷ್ಪಗಿರಿ ಅವರು ನಿರ್ದೇಶನ ಮಾಡಿದ್ದಾರೆ. ಈ ವಾರ, ಅಂದರೆ ಏಪ್ರಿಲ್ 12ರಂದು ರಾಜ್ಯಾದ್ಯಂತ ‘SCAM 1770’ ಚಿತ್ರ ಬಿಡುಗಡೆ ಆಗುತ್ತಿದೆ. ಒಂದು ವಿಶೇಷ ಕಥಾಹಂದರದ ಕಾರಣದಿಂದ ಈ ಸಿನಿಮಾ ಮೇಲೆ ಕೌತುಕ ಇದೆ. ರಂಜನ್, ನಿಶ್ವಿತಾ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಪ್ರೇಕ್ಷಕರು ಈ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಬಂದಿದೆ.
ಈ ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಸ್ಕ್ಯಾಮ್ ಎಂದ ತಕ್ಷಣ ಹಲವು ಹಗರಣಗಳು ನೆನಪಾಗುತ್ತವೆ. ಅವುಗಳ ಪೈಕಿ ‘ಸ್ಕ್ಯಾಮ್ 1770’ ಸಿನಿಮಾದಲ್ಲಿ ಹೇಳಲು ಹೊರಟಿರುವುದು ಶಿಕ್ಷಣದ ವ್ಯವಸ್ಥೆಯ ಕುರಿತು ಹಗರಣ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಸತ್ಯ ಘಟನೆಗಳನ್ನು ಇಟ್ಟುಕೊಂಡು ವಾಸ್ತವದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆ ನಡೆಸುವವರು ನೋಡಲೇ ಬೇಕಾದ ಸಿನಿಮಾ ಇದು ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ.
ಇಂದೂ ನಟೇಶ್ ಮತ್ತು ಅಡ್ವೊಕೇಟ್ ನೇತ್ರಾವತಿ ಅವರು ಈ ಸಿನಿಮಾಗೆ ಕಥೆ ಬರೆದಿದ್ದಾರೆ. ವಿಕಾಸ್ ಪುಷ್ಪಗಿರಿ ಮತ್ತು ಶಂಕರ್ ರಾಮನ್ ಅವರು ಚಿತ್ರಕಥೆ ಬರೆದಿದ್ದಾರೆ. ಶಂಕರ್ ರಾಮನ್ ಅವರು ಸಂಭಾಷಣೆ ಬರೆದಿದ್ದಾರೆ. ಸತೀಶ್ ಆರ್ಯನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಶೋಯೆಬ್ ಅವರು ಛಾಯಾಗ್ರಹಣ ಮಾಡಿದ್ದು, ಸುರೇಶ್ ಆರ್ಮುಗಂ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಕಲೈ ಹಾಗೂ ರಾಮು ನೃತ್ಯ ನಿರ್ದೇಶನ ಮಾಡಿದ್ದಾರೆ. ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ.
ಇದನ್ನೂ ಓದಿ: ಡಾಲಿ ಧನಂಜಯ ಹೊಸ ಸಿನಿಮಾ ಹೆಸರು ‘ಕೋಟಿ’; ಗಮನ ಸೆಳೆದ ಪೋಸ್ಟರ್
ಸೂಪರ್ ಹಿಟ್ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದ ಖ್ಯಾತಿಯ ನಟ ರಂಜನ್ ಅವರು ‘SCAM 1770’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ನಿಶ್ವಿತಾ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಬಿ. ಸುರೇಶ, ಶ್ರೀನಿವಾಸ್ ಪ್ರಭು, ಅವಿನಾಶ್, ರಮೇಶ್ ಪಂಡಿತ್, ನಾರಾಯಣ ಸ್ವಾಮಿ, ರಾಘು ಶಿವಮೊಗ್ಗ, ಹರಿಣಿ, ಉಗ್ರಂ ಸಂದೀಪ್, ಹಂಸ, ಶೃತಿ ನಾಯಕ್, ಸುನೇತ್ರ ಪಂಡಿತ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.