ದುನಿಯಾ ವಿಜಯ್ ಹೊಸ ಸಿನಿಮಾಗೆ ಮುಹೂರ್ತ; ಇದು ಸತ್ಯ ಘಟನೆ ಆಧಾರಿತ ಚಿತ್ರ
ದುನಿಯಾ ವಿಜಯ್ ನಟನೆಯ ಹೊಸ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ಈ ಸಿನಿಮಾದಲ್ಲಿ ಅವರ ಪುತ್ರಿ ರಿತನ್ಯ (ಮೋನಿಕಾ) ನಟಿಸುತ್ತಿದ್ದಾರೆ. ‘ಮೊದಲ ಸಿನಿಮಾದಲ್ಲಿ ಅಪ್ಪನ ಜೊತೆ ಅಭಿನಯಿಸುತ್ತಿರುವುದಕ್ಕೆ ಖುಷಿಯಿದೆ. ಈ ಸಿನಿಮಾದಿಂದ ನನ್ನ ಹೆಸರನ್ನು ರಿತನ್ಯ ಅಂತ ಬದಲಿಸಿಕೊಂಡಿದ್ದೇನೆ’ ಎಂದು ಅವರು ಹೇಳಿದ್ದಾರೆ. ರಚಿತಾ ರಾಮ್, ಶಿಶಿರ್ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ.
ದರ್ಶನ್ ನಟನೆಯ ‘ಸಾರಥಿ’ ಸಿನಿಮಾವನ್ನು ನಿರ್ಮಿಸಿದ್ದ ಕೆ.ವಿ. ಸತ್ಯಪ್ರಕಾಶ್ ಅವರು 12 ವರ್ಷಗಳ ಬಳಿಕ ‘ಸಾರಥಿ ಫಿಲ್ಮ್ಸ್’ ಮೂಲಕ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಪ್ರಾಜೆಕ್ಟ್ಗೆ ಅವರ ಪುತ್ರ ಸೂರಜ್ ಗೌಡ ಕೂಡ ಸಾಥ್ ನೀಡಿದ್ದಾರೆ. ‘ಜಂಟಲ್ ಮ್ಯಾನ್’, ‘ಗುರು ಶಿಷ್ಯರು’ ಚಿತ್ರಗಳನ್ನು ನಿರ್ದೇಶಿಸಿ, ‘ಕಾಟೇರ’ ತಂಡದಲ್ಲೂ ಕೆಲಸ ಮಾಡಿದ ಜಡೇಶ್ ಕೆ. ಹಂಪಿ (Jadesh Kumar Hampi) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಗೆ ದುನಿಯಾ ವಿಜಯ್ (Duniya Vijay) ಅವರು ಹೀರೋ. ಇದು ಅವರ 29ನೇ ಸಿನಿಮಾ. ಇನ್ನೂ ಶೀರ್ಷಿಕೆ ಬಹಿರಂಗ ಆಗಿಲ್ಲ. ಸದ್ಯಕ್ಕೆ ‘ವಿ.ಕೆ. 29’ (VK 29) ಎಂದು ಇದನ್ನು ಕರೆಯಲಾಗುತ್ತಿದೆ. ಇಂದು (ಏಪ್ರಿಲ್ 11) ಈ ಸಿನಿಮಾದ ಮುಹೂರ್ತ ನೆರವೇರಿದೆ. ಶಾಸಕ ಗೋಪಾಲಯ್ಯ ಮೊದಲ ದೃಶ್ಯಕ್ಕೆ ಚಾಲನೆ ನೀಡಿದ್ದು, ತರುಣ್ ಸುಧೀರ್ ಆ್ಯಕ್ಷನ್-ಕಟ್ ಹೇಳಿದರು. ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಂ. ಸುರೇಶ್ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಕೂಡ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದರು. ರಚಿತಾ ರಾಮ್ ಅವರು ಈ ಚಿತ್ರಕ್ಕೆ ನಾಯಕಿಯಾಗಿ ನಟಿಸುತ್ತಿದ್ದಾರೆ. ದುನಿಯಾ ವಿಜಯ್ ಪುತ್ರಿ ರಿತನ್ಯ (ಮೋನಿಕಾ) ಅವರು ಈ ಸಿನಿಮಾ ಮೂಲಕ ಚಿತ್ರರಂಗ ಎಂಟ್ರಿ ನೀಡುತ್ತಿದ್ದಾರೆ. ‘ಡೇರ್ಡೆವಿಲ್ ಮುಸ್ತಫಾ’ ಖ್ಯಾತಿಯ ನಟ ಶಿಶಿರ್ ಅವರು ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಸಿನಿಮಾದ ಕಥೆಯ ಬಗ್ಗೆ ನಿರ್ದೇಶಕ ಜಡೇಶ್ ಅವರು ಮಾಹಿತಿ ನೀಡಿದರು. ‘ಇದು ನಾನು ಕಂಡು, ಕೇಳಿದ ನೈಜ ಕಥೆ. ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಹಾನಿ. ಕೋಲಾರ ಭಾಗದ ಕಥೆಯಾದ್ದರಿಂದ ಸಂಭಾಷಣೆ ಆ ಶೈಲಿಯಲ್ಲೇ ಇರಲಿದೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. 90ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶಿವರಾಮ ಕಾರಂತರು ಬರೆದ ಚೋಮನ ದುಡಿ ಕಾದಂಬರಿಯ ಚೋಮನ ಪಾತ್ರವೇ ಈ ಸಿನಿಮಾಗೆ ಸ್ಫೂರ್ತಿ. ಆದರೆ ಆ ಪುಸ್ತಕಕ್ಕೂ ಈ ಸಿನಿಮಾಗೂ ಸಂಬಂಧ ಇಲ್ಲ’ ಎಂದು ನಿರ್ದೇಶಕರು ಹೇಳಿದ್ದಾರೆ.
ಇದನ್ನೂ ಓದಿ: ಅಚಾನಕ್ಕಾಗಿ ಬಾಲ್ಯದ ಗೆಳೆಯನ ಮನೆಗೆ ಭೇಟಿ ಕೊಟ್ಟ ದುನಿಯಾ ವಿಜಯ್
‘ವಿ.ಕೆ. 29’ ಸಿನಿಮಾಗಾಗಿ ಬೆಂಗಳೂರಲ್ಲಿ ದೊಡ್ಡ ಸೆಟ್ ಹಾಕಲಾಗುತ್ತಿದೆ. ಕೋಲಾರ, ಮೈಸೂರಲ್ಲೂ ಶೂಟಿಂಗ್ ನಡೆಯಲಿದೆ. ವಿಜಯ್ ಅವರಿಗೆ ಡಿಫರೆಂಟ್ ಪಾತ್ರ ಇರಲಿದೆ. ಅವರ ಪುತ್ರಿ ಮೋನಿಕಾ ಅವರು ಈ ಸಿನಿಮಾ ಮೂಲಕ ರಿತನ್ಯ ಎಂದು ಹೆಸರು ಬದಲಿಸಿಕೊಂಡು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಸ್ವಾಮಿ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ನಿರ್ಮಾಪಕ ಸತ್ಯಪ್ರಕಾಶ್ ಮಾತನಾಡಿ, ‘ನನಗೆ ಸಾರಥಿ ಸಿನಿಮಾ ಬಹಳ ಕೀರ್ತಿ ತಂದುಕೊಟ್ಟಿತು. ಆ ಬಳಿಕ ಕೆಲವು ಕಥೆಗಳನ್ನು ಕೇಳಿದ್ದೆ. ಆದರೆ ನಿರ್ಮಿಸಲು ಆಗಿರಲಿಲ್ಲ. ಜಡೇಶ್ ಹೇಳಿದ ಕಥೆ ಇಷ್ಟವಾಯ್ತು’ ಎಂದು ಅವರು ಹೇಳಿದರು.
‘ನನ್ನ ಮಗಳು ಮುಂಬೈನ ಅನುಪಮ್ ಖೇರ್ ಸಂಸ್ಥೆಯಲ್ಲಿ ಅಭಿನಯ ಕಲಿತು ಬಂದಿದ್ದಾಳೆ. ಈ ಸಿನಿಮಾದಲ್ಲೂ ನನ್ನ ಮಗಳ ಪಾತ್ರದಲ್ಲೇ ಅಭಿನಯಿಸುತ್ತಿದ್ದಾಳೆ. ನಾನು ಚಿತ್ರರಂಗಕ್ಕೆ ಬಂದು 30 ವರ್ಷ ಆಯ್ತು. ಹೀರೋ ಆಗಿ 18 ವರ್ಷಗಳಾಗಿವೆ. ಈಗ ಮಗಳು ಚಿತ್ರರಂಗಕ್ಕೆ ಬರುತ್ತಿದ್ದಾಳೆ’ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.