‘ಕರಿಮಣಿ ಮಾಲಿಕ ನೀನಲ್ಲ’ ಇದು ಹಾಡು ಮಾತ್ರವಲ್ಲ; ಸಿನಿಮಾ ಶೀರ್ಷಿಕೆಯೂ ಹೌದು
‘ಯು ಟರ್ನ್ 2’ ಖ್ಯಾತಿಯ ನಿರ್ದೇಶಕ ಚಂದ್ರು ಓಬಯ್ಯ ಅವರು ‘ಕರಿಮಣಿ ಮಾಲಿಕ ನೀನಲ್ಲ’ ಶೀರ್ಷಿಕೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇದರ ಟೈಟಲ್ ಪೋಸ್ಟರ್ ಅನಾವರಣ ಮಾಡಲಾಗಿದೆ. ಕಲಬುರಗಿಯ ರಮಿಕಾ ಸುತಾರಾ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಹೀರೋ ಯಾರು ಎಂಬುದು ಶೀಘ್ರದಲ್ಲೇ ತಿಳಿಯಲಿದೆ.
ಸೋಶಿಯಲ್ ಮೀಡಿಯಾದಲ್ಲಿ ‘ಉಪೇಂದ್ರ’ ಸಿನಿಮಾದ ‘ಓನಲ್ಲ, ನೀನಲ್ಲ, ಕರಿಮಣಿ ಮಾಲಿಕ ನೀನಲ್ಲ’ ಹಾಡು ವೈರಲ್ ಆಗಿದ್ದು ಗೊತ್ತೇ ಇದೆ. ಇದೇ ಸಾಲನ್ನು ಈಗ ಸಿನಿಮಾ (Kannada Cinema) ಶೀರ್ಷಿಕೆಯಾಗಿ ಬಳಸಿಕೊಳ್ಳಲಾಗಿದೆ. ‘ಯು ಟರ್ನ್ 2’ ಸಿನಿಮಾದ ಖ್ಯಾತಿಯ ಚಂದ್ರು ಓಬಯ್ಯ ಅವರು ಈ ವೈರಲ್ ಹಾಡಿನ ಲೈನ್ ಇಟ್ಟುಕೊಂಡು ಹೊಸ ಸಿನಿಮಾದ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಸಿನಿಮಾದ ಶೀರ್ಷಿಕೆಯನ್ನು ಇತ್ತೀಚೆಗೆ ಅನಾವರಣ ಮಾಡಲಾಗಿದೆ. ‘ಕರಿಮಣಿ ಮಾಲಿಕ ನೀನಲ್ಲ’ (Karimani Malika Neenalla) ಸಿನಿಮಾದ ಶೀರ್ಷಿಕೆಯನ್ನು ಮ್ಯೂಸಿಕ್ ಅಡ್ಡಾದ ಲೋಕೇಶ್ ಲಾಂಚ್ ಮಾಡಿದ್ದಾರೆ.
ಟೈಟಲ್ ರಿಲೀಸ್ ಕಾರ್ಯಕ್ರಮದಲ್ಲಿ ಚಂದ್ರು ಓಬಯ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ನಾನು ಯುಟರ್ನ್ 2 ಸಿನಿಮಾದ ಬಳಿಕ ರಾಮು ಆ್ಯಂಡ್ ರಾಮು ಚಿತ್ರವನ್ನು ಮಾಡಿದ್ದೇನೆ. ಅದು ಸೆನ್ಸಾರ್ ಪ್ರಕ್ರಿಯೆಯ ಹಂತದಲ್ಲಿದೆ. ಅಲ್ಲದೇ ‘ಪ್ಯಾಟಿ ಹುಡ್ಗಿ ಹಳ್ಳಿ ಲೈಫು’ ಚಿತ್ರೀಕರಣ ನಡೆಯುತ್ತಿದೆ. ಈಗ ‘ಕರಿಮಣಿ ಮಾಲಿಕ ನೀನಲ್ಲ’ ಎಂಬ ಶೀರ್ಷಿಕೆ ಇಟ್ಟುಕೊಂಡು ಈ ಸಿನಿಮಾವನ್ನು ಮುಂದಿನ ತಿಂಗಳು ಆರಂಭಿಸುತ್ತಿದ್ದೇನೆ’ ಎಂದು ಅವರು ಹೇಳಿದರು.
‘ಎಳನೀರು ಮಾರುವ ಹುಡುಗ ಮತ್ತು ಹೂವು ಮಾರುವ ಹುಡುಗಿಯ ನಡುವೆ ನಡೆಯುವ ವಿಭಿನ್ನ ಪ್ರೇಮಕಥೆ ಈ ಸಿನಿಮಾದಲ್ಲಿ ಇರಲಿದೆ. ನಾನು ಸಿದ್ಧ ಮಾಡಿಕೊಂಡಿದ್ದ ಕಥೆಗೆ ಈ ಶೀರ್ಷಿಕೆ ಸೂಕ್ತ ಎನಿಸಿತು. ಹಾಗಾಗಿ ಇಟ್ಟಿದ್ದೇನೆ. ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಿ, ಮೈಸೂರು, ಬೆಂಗಳೂರು, ಮಡಿಕೇರಿ ಮುಂತಾದ ಕಡೆಗಳಲ್ಲಿ 40 ದಿನ ಶೂಟಿಂಗ್ ಮಾಡುವ ಪ್ಲ್ಯಾನ್ ಇದೆ. ಸಿನಿಮಾದಲ್ಲಿ ನಾಲ್ಕು ಹಾಡುಗಳು ಇರಲಿವೆ. ಸಂಗೀತ ನಿರ್ದೇಶನ ಸಹ ನಾನೇ ಮಾಡುತ್ತಿದ್ದೇನೆ’ ಎಂದು ಚಂದ್ರು ಓಬಯ್ಯ ಹೇಳಿದರು.
ಇದನ್ನೂ ಓದಿ: ‘ಕರಿಮಣಿಗೆ ಈಗ ಮತ್ತೆ ಬೆಲೆ ಬಂದಿದೆ’: ವೈರಲ್ ಹಾಡಿಗೆ ಗುರುಕಿರಣ್ ಪ್ರತಿಕ್ರಿಯೆ
ಈ ಸಿನಿಮಾದಲ್ಲಿ ನಾಯಕಿಯಾಗಿ ರಮಿಕಾ ಸುತಾರಾ ನಟಿಸುತ್ತಿದ್ದಾರೆ. ನಾಯಕನ ಪಾತ್ರಕ್ಕೆ ಕಲಾವಿದನ ಆಯ್ಕೆ ನಡೆಯುತ್ತಿದೆ. ಶೀಘ್ರದಲ್ಲೇ ಹೆಚ್ಚಿನ ವಿವರ ತಿಳಿಸುವುದಾಗಿ ಚಿತ್ರತಂದವರು ಹೇಳಿಕೊಂಡಿದ್ದಾರೆ. ನಾಯಕಿ ರಮಿಕಾ ಸುತಾರಾ ಮಾತನಾಡಿ, ‘ನಾನು ಮೂಲತ: ಕಲಬುರಗಿಯವಳು. ಮೊದಲಿಂದಲೂ ಸಿನಿಮಾ ಬಗ್ಗೆ ಆಸಕ್ತಿಯಿತ್ತು. ಚಾನ್ಸ್ ಸಿಕ್ಕಿರಲಿಲ್ಲ. ಆ್ಯಕ್ಟಿಂಗ್ ಕ್ಲಾಸ್ಗೆ ಹೋಗಿದ್ದೇನೆ. ಈ ಸಿನಿಮಾದಲ್ಲಿ ಹೂ ಮಾರುವ ಹುಡುಗಿಯಾಗಿ ನಟಿಸುತ್ತಿದ್ದೇನೆ’ ಎಂದಿದ್ದಾರೆ. ಮತ್ತೊರ್ವ ನಟಿ ಮೀನಾ ಕಿರಣ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ನಾಯಕಿಯ ತಾಯಿ ಪಾತ್ರಕ್ಕೆ ಅವರು ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾಗೆ ವೀನಸ್ ನಾಗರಾಜಮೂರ್ತಿ ಛಾಯಾಗ್ರಹಣ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.