
ದರ್ಶನ್ (Darshan) ನಟನೆಯ ‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣ ಇನ್ನೇನು ಮುಗಿಯುವ ಹಂತದಲ್ಲಿದೆ. ಹಲವಾರು ಅಡೆ-ತಡೆಗಳ ಬಳಿಕ ಕೊನೆಗೂ ಸಿನಿಮಾದ ಚಿತ್ರೀಕರಣ ಪೂರ್ಣವಾಗುತ್ತಿದೆ. ಸಿನಿಮಾನಲ್ಲಿ ದರ್ಶನ್ ಜೊತೆಗೆ ಹಲವು ಹೊಸ, ಹಳೆಯ ಕಲಾವಿದರು ನಟಿಸಿದ್ದಾರೆ. ಸಿನಿಮಾನಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಅಂದಹಾಗೆ ಇದೇ ಸಿನಿಮಾನಲ್ಲಿ ಮತ್ತೊಬ್ಬ ಜನಪ್ರಿಯ ನಾಯಕಿಯೂ ನಟಿಸಿದ್ದಾರೆ. ಕನ್ನಡದ ಈ ನಟಿ ಬರೋಬ್ಬರಿ 17 ವರ್ಷಗಳ ಬಳಿಕ ದರ್ಶನ್ ಜೊತೆಗೆ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
ಬೆಂಗಳೂರಿನ ಚೆಲುವೆ, ಬಹುಭಾಷಾ ನಟಿ ಶರ್ಮಿಳಾ ಮಾಂಡ್ರೆ, ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾನಲ್ಲಿ ನಟಿಸಿದ್ದಾರೆ. ಈ ಬಗ್ಗೆ ತಾವೇ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಶರ್ಮಿಳಾ ಮಾಂಡ್ರೆ, ‘ಮಿಲನಾ ಪ್ರಕಾಶ್ ಅವರ ಅಭಿಮಾನಿ ನಾನು. ಹಲವು ವರ್ಷಗಳಿಂದಲೂ ಅವರ ಸಿನಿಮಾ ನೋಡುತ್ತಾ ಬಂದಿದ್ದೇನೆ. ಅವರ ಜೊತೆ ಕೆಲಸ ಮಾಡುವ ಆಸೆಯಿತ್ತು, ಅದು ಈಗ ‘ದಿ ಡೆವಿಲ್’ ಸಿನಿಮಾ ಮೂಲಕ ಈಡೇರುತ್ತಿದೆ’ ಎಂದಿದ್ದಾರೆ.
‘ದಿ ಡೆವಿಲ್’ ಸಿನಿಮಾನಲ್ಲಿ ನನ್ನ ವಿಶಿಷ್ಠ ರೀತಿಯ ಪಾತ್ರ. ಈಗಾಗಲೇ ನನ್ನ ಪಾತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವೆಲ್ಲ ವಿಷಯಗಳು ಹರಿದಾಡುತ್ತಿವೆ. ಆದರೆ ಅವೆಲ್ಲವೂ ಸುಳ್ಳಾಗಿವೆ. ಸಿನಿಮಾ ಬಿಡುಗಡೆ ಆದಾಗ ನನ್ನ ಪಾತ್ರದ ವಿಶೇಷತೆ ತಿಳಿಯಲಿದೆ. ಸದ್ಯಕ್ಕೆ ಅದು ಗುಟ್ಟು. ಬಹಳ ವರ್ಷಗಳ ಬಳಿಕ ನಾನು ದರ್ಶನ್ ಅವರೊಟ್ಟಿಗೆ ನಟಿಸುತ್ತಿದ್ದೇನೆ. ‘ನವಗ್ರಹ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಒಳ್ಳೆಯ ಗೆಳೆತನ ಇತ್ತು, ಅದೇ ಈಗಲೂ ಮುಂದುವರೆದಿದೆ’ ಎಂದಿದ್ದಾರೆ ಶರ್ಮಿಳಾ.
ಇದನ್ನೂ ಓದಿ:ಗ್ಲಾಮರ್ ಅವತಾರದಲ್ಲಿ ಮಿಂಚಿದ ಶರ್ಮಿಳಾ ಮಾಂಡ್ರೆ
ಶರ್ಮಿಳಾ ಮಾಂಡ್ರೆ ಸಿನಿಮಾಗಳ ಜೊತೆಗೆ ಇನ್ಸ್ಟಾಗ್ರಾಂನಲ್ಲೂ ಸಖತ್ ಸಕ್ರಿಯವಾಗಿದ್ದಾರೆ. ತಮ್ಮ ಗ್ಲಾಮರಸ್ ಚಿತ್ರ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಶರ್ಮಿಳಾ ಮಾಂಡ್ರೆ ಇದೀಗ ನಟಿಯಿಂದ ನಿರ್ಮಾಪಕಿಯಾಗಿ ಬಡ್ತಿ ಸಹ ಪಡೆದಿದ್ದಾರೆ. ಶರ್ಮಿಳಾ ಮಾಂಡ್ರೆ ಕನ್ನಡದ ‘ದಸರಾ’ ಮತ್ತು ತಮಿಳಿನ ‘ಕಾದಲ್ ಕೊಂಜಂ ತೂಕಲಾ’ ಸಿನಿಮಾಗಳನ್ನು ನಿರ್ಮಾಣ ಮತ್ತು ಸಹ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ನಿರ್ಮಿಸುವ ಆಸೆ ಅವರಿಗಿದೆಯಂತೆ.
ಇನ್ನು ‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು ಕೆಲ ಸಣ್ಣ ಪುಟ್ಟ ದೃಶ್ಯಗಳ ಚಿತ್ರೀಕರಣ ಮಾತ್ರವೇ ಬಾಕಿ ಇದೆ ಎನ್ನಲಾಗುತ್ತಿದೆ. ಸಿನಿಮಾದ ಡಬ್ಬಿಂಗ್ ಕಾರ್ಯವೂ ಸಹ ಚಾಲ್ತಿಯಲ್ಲಿದೆ. ಸಿನಿಮಾದ ಟೀಸರ್ ಅನ್ನು ಕೆಲವೇ ದಿನಗಳಲ್ಲಿ ಚಿತ್ರತಂಡ ಬಿಡುಗಡೆ ಮಾಡಲಿದೆ. ಅದಾದ ಬಳಿಕ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಸಹ ಚಿತ್ರತಂಡ ಘೋಷಣೆ ಮಾಡಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:04 pm, Thu, 12 June 25