ಶ್ರೀಸುಬುಧೇಂದ್ರ ತೀರ್ಥರಿಂದ ‘ಶ್ರೀಜಗನ್ನಾಥ ದಾಸರು ಭಾಗ 2’ ಸಿನಿಮಾ ಹಾಡುಗಳ ಬಿಡುಗಡೆ
ಗಾಯನ ಸಮಾಜದಲ್ಲಿ ಅದ್ದೂರಿ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ‘ಶ್ರೀಜಗನ್ನಾಥ ದಾಸರು ಭಾಗ 2’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಗೀತೆಗಳನ್ನು ರಿಲೀಸ್ ಮಾಡಿ ಶುಭಕೋರಿದರು. ಮಧುಸೂದನ್ ಹವಾಲ್ದಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ನಾಡಿನ ಪ್ರಸಿದ್ದ ಹರಿದಾಸರ (Haridasa) ಬದುಕಿನ ಕಥೆಯನ್ನು ಮಧುಸೂದನ್ ಹವಾಲ್ದಾರ್ ಅವರು ಸಿನಿಮಾಗಳ ಮೂಲಕ ಜನತೆಗೆ ಪರಿಚಯ ಮಾಡಿಕೊಡುತ್ತಿದ್ದಾರೆ. ದಾಸಶ್ರೇಷ್ಠರಾದ ಶ್ರೀಜಗನ್ನಾಥ ದಾಸರು, ಶ್ರೀಮಹಿಪತಿ ದಾಸರು, ಶ್ರೀವಿಜಯ ದಾಸರು, ಶ್ರೀಪ್ರಸನ್ನ ವೆಂಕಟ ದಾಸರು ಮುಂತಾದ ಮಹಾಮಹಿಮರ ಕುರಿತ ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿದೆ. ಈಗ ‘ಶ್ರೀಜಗನ್ನಾಥ ದಾಸರು ಭಾಗ 2’ (Sri Jagannatha Dasaru Part 2) ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.
ಗಾಯನ ಸಮಾಜದಲ್ಲಿ ‘ಶ್ರೀಜಗನ್ನಾಥ ದಾಸರು ಭಾಗ 2’ ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ಅದ್ದೂರಿ ಸಮಾರಂಭದಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಮಧುಸೂದನ್ ಹವಾಲ್ದಾರ್ ಮತ್ತು ರಾಯಚೂರು ಶೇಷಗಿರಿದಾಸ್ ಸಂಗೀತ ಸಂಯೋಜಿಸಿರುವ ಈ ಸಿನಿಮಾದಲ್ಲಿ 8 ಹಾಡುಗಳಿವೆ.
‘ಶ್ರೀಜಗನ್ನಾಥ ದಾಸರು ಭಾಗ 2’ ಸಿನಿಮಾದ ಹಾಡುಗಳಿಗೆ ಜನಪ್ರಿಯ ಗಾಯಕರು ಧ್ವನಿ ನೀಡಿದ್ದಾರೆ. ಸಮಾರಂಭದಲ್ಲಿ 6 ಹಾಡುಗಳನ್ನು ಪ್ರದರ್ಶಿಸಲಾಯಿತು. ಈ ವೇಳೆ ನಾಡಿನ ಖ್ಯಾತ ದಾಸರಾದ 99 ವಯಸ್ಸಿನ ಶ್ರೀಅನಂತಾಚಾರ್ ಕಟಗೇರಿ ಅವರನ್ನು ಸನ್ಮಾನಿಸಲಾಯಿತು. ಈ ವಯಸ್ಸಿನಲ್ಲೂ ಕಟಗೇರಿ ದಾಸರು ವಿಜಯದಾಸರ ಕೀರ್ತನೆ ಹಾಡಿ ಗಮನ ಸೆಳೆದರು.
ಈ ಕಾರ್ಯಕ್ರಮದಲ್ಲಿ ಗಾಯಕಿ ಸಂಗೀತ ಕಟ್ಟಿ ಅವರ ಗಾಯನ ಸಹ ಕೇಳುಗರನ್ನು ಸೆಳೆಯಿತು. ಹಲವು ಕ್ಷೇತ್ರಗಳ ಗಣ್ಯರು ಮತ್ತು ಸಿನಿಮಾ ತಂಡದವರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ‘ಮಾತಾಂಬುಜ ಮೂವೀಸ್’ ಮೂಲಕ ಮಧುಸೂದನ್ ಹವಾಲ್ದಾರ್ ಅವರು ನಿರ್ಮಿಸಿ, ನಿರ್ದೇಶನ ಮಾಡಿರುವ ಈ ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಕರಾವಳಿ ಕಹಾನಿ ಇರುವ ‘ಮಾರ್ನಮಿ’ ಸಿನಿಮಾದಲ್ಲಿ ರಿತ್ವಿಕ್ ಮಠದ್; ಹೇಗಿದೆ ನೋಡಿ ಟೀಸರ್
ಹಾಡುಗಳ ಬಿಡುಗಡೆ ಬಳಿಕ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ‘ಮಧುಸೂದನ್ ಹವಾಲ್ದಾರ್ ಮಾಡುತ್ತಿರುವ ಕಾರ್ಯ ಬಹಳ ದೊಡ್ಡದು. ಅಶ್ಲೀಲ ಸಂಭಾಷಣೆಯಿಂದ ಕೂಡಿರುವ ಮತ್ತು ಹೊಡಿಬಡಿ ಸಿನಿಮಾಗಳೇ ಹೆಚ್ಚು ಬರುತ್ತಿರುವ ಈ ಕಾಲದಲ್ಲಿ ನಾಡಿನ ಹರಿದಾಸರ ಬಗ್ಗೆ ಇಂದಿನ ಜನತೆಗೆ ಪರಿಚಯಿಸುವ ಸಿನಿಮಾಗಳನ್ನು ಅವರು ನಿರ್ಮಾಣ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದರ ಉಪಯೋಗವನ್ನು ಹೆಚ್ಚಾಗಿ ಯುವಜನತೆ ಪಡೆದುಕೊಳ್ಳಬೇಕು. ‘ಶ್ರೀಜಗನ್ನಾಥದಾಸರು ಭಾಗ 2’ ಸಿನಿಮಾ ಅತ್ಯಂತ ಯಶಸ್ವಿ ಆಗಲಿ’ ಎಂದು ಹಾರೈಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.