ಶಿವರಾಜ್ ಕುಮಾರ್ ಕಳೆದ ಮೂರು ನಾಲ್ಕು ತಿಂಗಳಿನಿಂದಲೂ ವಿಶ್ರಾಂತಿಯಲ್ಲಿದ್ದು, ಇದೀಗ ಚಿತ್ರೀಕರಣಕ್ಕೆ ಮರಳಿದ್ದಾರೆ. ಶಿವರಾಜ್ ಕುಮಾರ್ ಅವರು ಅನಾರೋಗ್ಯದ ವಿರುದ್ಧ ಕಳೆದ ಕೆಲ ತಿಂಗಳಿನಿಂದಲೂ ಹೋರಾಡುತ್ತಲೇ ಇದ್ದರು. ಇದೀಗ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ವಿಶ್ರಾಂತಿ ಎಲ್ಲವನ್ನೂ ಮುಗಿಸಿ ಇದೀಗ ಸಿನಿಮಾ ಚಿತ್ರೀಕರಣಕ್ಕೆ ಮರಳಿದ್ದಾರೆ. ಚಿಕಿತ್ಸೆಗೆ ಹೋಗುವ ಮೊದಲು ಅನಾರೋಗ್ಯದ ಬಗ್ಗೆ ಹೆಚ್ಚಿಗೇನೂ ಮಾಧ್ಯಮಗಳ ಬಳಿ ಹೇಳಿಕೊಂಡಿರದಿದ್ದ ಶಿವರಾಜ್ ಕುಮಾರ್ ಇದೀಗ ಕೆಲ ಮಾಧ್ಯಮಗಳಿಗೆ ಸಂದರ್ಶನ ನೀಡಿ ಅನಾರೋಗ್ಯ ಮತ್ತು ಅದರಿಂದ ಚೇತರಿಕೆ, ಅನಾರೋಗ್ಯದ ವಿರುದ್ಧ ನಡೆದ ಹೋರಾಟದ ಕುರಿತು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಮಹತ್ವದ ಅಂಶವೆಂದರೆ ಶಿವರಾಜ್ ಕುಮಾರ್ ಅವರ ಈ ಹೋರಾಟ ಡಾಕ್ಯುಮೆಂಟರಿ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
ಇತ್ತೀಚೆಗೆ ಟಿವಿ9 ಕನ್ನಡಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಟ ಶಿವರಾಜ್ ಕುಮಾರ್ ಅವರು, ನನಗೆ ಚಿಕಿತ್ಸೆ ನೀಡಿದ ವೈದ್ಯರು ನೀಡಿರುವ ಐಡಿಯಾದಂತೆ ನನ್ನ ಈ ಅನಾರೋಗ್ಯದ ವಿರುದ್ಧ ಹೋರಾಟವನ್ನು ಡಾಕ್ಯುಮೆಂಟರಿ ರೂಪದಲ್ಲಿ ಹೊರತರುವ ಆಲೋಚನೆ ಇದೆ ಎಂದಿದ್ದಾರೆ. ಶಿವರಾಜ್ ಕುಮಾರ್ ಅವರು ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಚಿಕಿತ್ಸೆ ಪಡೆದರು. ತಮಿಳು ಮೂಲದ ವೈದ್ಯರೊಬ್ಬರು ಶಿವಣ್ಣನಿಗೆ ಚಿಕಿತ್ಸೆ ನೀಡಿದರು. ಅವರೇ ನೀಡಿರುವ ಸಲಹೆಯಂತೆ ಇದೀಗ ಅವರ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಡಾಕ್ಯುಮೆಂಟರಿ ರೂಪದಲ್ಲಿ ಹೊರತರುವ ಆಲೋಚನೆ ಶಿವಣ್ಣ ಹಾಗೂ ಗೀತಕ್ಕನಿಗೆ ಮೂಡಿದೆ.
ಶಿವರಾಜ್ ಕುಮಾರ್ ಅವರು ಮೂತ್ರಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಈ ಕ್ಯಾನ್ಸರ್ ಬಂದವರ ರಿಕವರಿ ಅಷ್ಟು ಸುಲಭವಲ್ಲ. ಅಲ್ಲದೆ ಕ್ಯಾನ್ಸರ್ ಎಂದೊಡನೆ ಎಷ್ಟೋ ಮಂದಿ ಹೆದರಿ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಈಗ ಶಿವಣ್ಣ ತಮ್ಮ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಡಾಕ್ಯುಮೆಂಟರಿ ರೂಪದಲ್ಲಿ ಹೊರತರುವ ಮೂಲಕ ಕ್ಯಾನ್ಸರ್ ರೋಗಿಗಳಿಗೆ, ಕ್ಯಾನ್ಸರ್ ಕುರಿತು ತಪ್ಪು ಕಲ್ಪನೆ ಇರುವ ವ್ಯಕ್ತಿಗಳಿಗೆ ಜಾಗೃತಿ ಮೂಡಿಸಲು ಮತ್ತು ಸ್ಪೂರ್ತಿ ಮೂಡಿಸಲೆಂದು ಈ ಡಾಕ್ಯುಮೆಂಟರಿಯನ್ನು ಹೊರಗೆ ತರುತ್ತಿದ್ದಾರೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ
ಕ್ಯಾನ್ಸರ್ನಿಂದ ಗುಣಮುಖರಾಗಿರುವ ನಟ ಶಿವರಾಜ್ ಕುಮಾರ್ ಇದೀಗ ಚಿತ್ರೀಕರಣಕ್ಕೆ ಮರಳಿದ್ದಾರೆ. ತಮ್ಮ 131ನೇ ಸಿನಿಮಾದ ಚಿತ್ರೀಕರಣವನ್ನು ಶಿವಣ್ಣ ಪ್ರಾರಂಭ ಮಾಡಿದ್ದಾರೆ. ಇದರ ಜೊತೆಗೆ ತೆಲುಗಿನ ರಾಮ್ ಚರಣ್ ಸಿನಿಮಾದಲ್ಲಿಯೂ ನಟಿಸಲು ರೆಡಿಯಾಗಿದ್ದು, ಇತ್ತೀಚೆಗಷ್ಟೆ ಲುಕ್ ಟೆಸ್ಟ್ ಮಾಡಿಸಿ ಲುಕ್ ಫೈನಲ್ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Sat, 8 March 25