ಒಂದು ತಿಂಗಳ ಹಿಂದೆ ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯಲೆಂದು ಅಮೆರಕಕ್ಕೆ ತೆರಳಿದ್ದ ನಟ ಶಿವರಾಜ್ 35 ದಿನಗಳ ಬಳಿಕ ಇಂದು (ಜನವರಿ 26) ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ. ಅನಾರೋಗ್ಯದಿಂದ ಗುಣಮುಖರಾಗಿ ರಾಜ್ಯಕ್ಕೆ ವಾಪಸ್ಸಾಗುತ್ತಿರುವ ಶಿವರಾಜ್ ಕುಮಾರ್ ಅವರನ್ನು ಸ್ವಾಗತಿಸಲು ಅವರ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು, ಆತ್ಮೀಯರು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಶಿವಣ್ಣ ಅವರಿಗೆ ಭಾರಿ ಅದ್ಧೂರಿ ಸ್ವಾಗತವನ್ನು ಅಭಿಮಾನಿಗಳು, ಆತ್ಮೀಯರು ನೀಡಲಿದ್ದಾರೆ.
ಶಿವರಾಜ್ ಕುಮಾರ್ ಅವರು ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಭಿಮಾನಿಗಳು, ಆತ್ಮೀಯರು ವಿಮಾನ ನಿಲ್ದಾಣದ ಬಳಿಯೇ ಶಿವಣ್ಣನ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಏರ್ಪೋರ್ಟ್ ಟೋಲ್ ಇಂದ, ಶಿವಣ್ಣನ ಮನೆಯವರೆಗೆ ಅದ್ಧೂರಿ ಮೆರವಣಿಗೆ ಮಾಡಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಶಿವಣ್ಣನನ್ನು ನೋಡಲು ಏರ್ಪೋರ್ಟ್ ಟೋಲ್ ಬಳಿ ನೂರಾರು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ.
ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರಜತ್ಗೆ ಸಿಕ್ತು ವಿಶೇಷ ಅವಾರ್ಡ್; ಏನದು?
ಏರ್ಪೋರ್ಟ್ ರಸ್ತೆ, ಶಿವಣ್ಣ ಅವರ ಮನೆಯ ಬಳಿ ಶಿವಣ್ಣ ಅವರ ಕಟೌಟ್ಗಳು ರಾರಾಜಿಸುತ್ತಿವೆ. ಶಿವಣ್ಣ ಗುಣಮುಖರಾಗಿ ಬರುತ್ತಿರುವುದಕ್ಕೆ ಶುಭ ಕೋರಿ ಹಲವಾರು ಮಂದಿ ಕಟೌಟ್ಗಳನ್ನು, ಶುಭ ಸಂದೇಶಗಳನ್ನು ಕಟೌಟ್ ಮಾಡಿ ಹಾಕಿಸಿದ್ದಾರೆ. ಶಿವರಾಜ್ ಕುಮಾರ್ ಅವರ ಜೊತೆಗೆ ಕೆಲವೆಡೆ ಗೀತಾ ಶಿವರಾಜ್ ಕುಮಾರ್ ಅವರ ಕಟೌಟ್ ಅನ್ನು ಸಹ ಹಾಕಿರುವುದು ವಿಶೇಷ. ಇಂದು ಶಿವಣ್ಣ ಮರಳುತ್ತಿರುವುದಕ್ಕೆ ಹಲವೆಡೆ ಅಭಿಮಾನಿಗಳು ಅನ್ನ ಸಂತರ್ಪಣೆ ಸಹ ಆಯೋಜನೆ ಮಾಡಿದ್ದಾರೆ.
ಶಿವರಾಜ್ ಕುಮಾರ್ ಅವರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲೆಂದು 35 ದಿನಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಮಿಸಿಸಿಪ್ಪಿ ಕ್ಯಾನ್ಸರ್ ಇನ್ಸ್ಟಿಟ್ಯೂಷನ್ನಲ್ಲಿ ಶಿವರಾಜ್ ಕುಮಾರ್ ಅವರಿಗೆ ಶಸ್ತಚಿಕಿತ್ಸೆ ಮಾಡಲಾಯ್ತು. ಶಿವಣ್ಣ ಅವರು ಅಲ್ಲಿಯೇ ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದು ಇದೀಗ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಶಿವರಾಜ್ ಕುಮಾರ್ ಅವರ ಜೊತೆಯಲ್ಲಿ ಗೀತಾ ಶಿವರಾಜ್ ಕುಮಾರ್, ಅವರ ಪುತ್ರಿ ನಿವೇದಿತಾ, ಮಧು ಬಂಗಾರಪ್ಪ ಅವರುಗಳು ಸಹ ಅಮೆರಿಕಕ್ಕೆ ತೆರಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:22 am, Sun, 26 January 25