ಯಾವುದೇ ಸಿನಿಮಾಕ್ಕೂ ಅನ್ಯಾಯ ಆಗಬಾರದು: ಶಿವರಾಜ್ ಕುಮಾರ್

|

Updated on: Oct 21, 2023 | 3:09 PM

Shiva Rajkumar: ಯಾವುದೇ ಸಿನಿಮಾಗಳಿಗೆ ಅನ್ಯಾಯ ಆಗಬಾರದು. ಶಿವರಾಜ್‌ ಕುಮಾರ್ ಸಿನಿಮಾ ಅಂತ ಅಲ್ಲ, ಎಲ್ಲಾ ಕನ್ನಡ ಸಿನಿಮಾಗಳಿಗೆ ಮನ್ನಣೆ ಸಿಗಬೇಕು ಎಂದಿದ್ದಾರೆ ಶಿವರಾಜ್ ಕುಮಾರ್.

ಯಾವುದೇ ಸಿನಿಮಾಕ್ಕೂ ಅನ್ಯಾಯ ಆಗಬಾರದು: ಶಿವರಾಜ್ ಕುಮಾರ್
Follow us on

ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಘೋಸ್ಟ್’ ಸಿನಿಮಾ ಎರಡು ದಿನದ ಹಿಂದಷ್ಟೆ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿದೆ. ‘ಘೋಸ್ಟ್’ ಸಿನಿಮಾದ ಜೊತೆಗೆ ತಮಿಳಿನ ‘ಲಿಯೋ’, ತೆಲುಗಿನ ‘ಭಗವಂತ್ ಕೇಸರಿ’, ‘ಟೈಗರ್ ನಾಗೇಶ್ವರ್ ರಾವ್’ ಸಿನಿಮಾಗಳು ಸಹ ಬಿಡುಗಡೆ ಆಗಿದ್ದವು. ‘ಘೋಸ್ಟ್’ ಸಿನಿಮಾಕ್ಕಿಂತಲೂ ಹೆಚ್ಚಿನ ಚಿತ್ರಮಂದಿರಗಳು ಪರಭಾಷೆ ಸಿನಿಮಾಕ್ಕೆ ದೊರೆತಿದ್ದವು. ಆದರೂ ಶಿವಣ್ಣ ಆಗ ಹೆಚ್ಚಿಗೇನು ಮಾತಾಡಿರಲಿಲ್ಲ. ಇದೀಗ ಟಿವಿ9 ಸಂದರ್ಶನದಲ್ಲಿ ಮಾತನಾಡಿರುವ ಶಿವರಾಜ್ ಕುಮಾರ್, ಉದ್ದೇಶಪೂರ್ವಕವಾಗಿ ಕನ್ನಡ ಸಿನಿಮಾಗಳಿಗೆ ತೊಂದರೆ ಕೊಟ್ಟರೆ ಸಹಿಸಲಾಗದು ಎಂಬರ್ಥದ ಮಾತುಗಳನ್ನಾಡಿದ್ದಾರೆ.

ಟಿವಿ9 ಬಳಿ ಮಾತನಾಡಿರುವ ಶಿವರಾಜ್ ಕುಮಾರ್ ಅವರಿಗೆ, ಮಲ್ಟಿಪ್ಲೆಕ್ಸ್​ಗಳಲ್ಲಿ ಶಿವಣ್ಣನ ಸಿನಿಮಾಕ್ಕೆ ಮಾರ್ನಿಂಗ್ ಶೋ ಸಿಗುತ್ತಿಲ್ಲ ಎಂಬ ಪ್ರಶ್ನೆಗೆ ತುಸು ಖಾರವಾಗಿಯೇ ಉತ್ತರಿಸಿರುವ ಶಿವರಾಜ್ ಕುಮಾರ್ ”ಪಿವಿಆರ್‌ಗೆ ಏನಾದ್ರು ಕೊಂಬು ಇದೆಯಾ? ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ, ”ಪಿವಿಆರ್‌ ಕರ್ನಾಟಕದಲ್ಲಿದೆ, ಕನ್ನಡದ ನೆಲದಲ್ಲಿ ಇದೆ ತಾನೆ? ಕನ್ನಡ ಸಿನಿಮಾಗಳ ಬಗ್ಗೆ ಇತೀಚಿಗೆ ಒಳ್ಳೆ ರೆಸ್ಪಾನ್ಸ್‌ ಸಿಗುತ್ತಿದೆ, ‘ಕಾಂತರ’ ಸಿನಿಮಾ ಬಗ್ಗೆ ಎಲ್ಲಾರಿಗೂ ಗೊತ್ತಿದೆ ತಾನೆ, ಮೊದಲು ಕಾಂತರ ಸಿನಿಮಾ ಬಗ್ಗೆ ಗೋತ್ತಿತ್ತ, ಜನ ನೋಡಿ, ಹಿಟ್ ಆಗಿದ್ದಕ್ಕೆ ಅಲ್ಲವಾ ಅದು ಎಂಥಹಾ ಸಿನಿಮಾ ಎಂಬುದು ಗೊತ್ತಾಗಿದ್ದು. ಶೋಗಳನ್ನೇ ಕೊಡದೇ ಹೋದರೆ ಹೇಗೆ? ಇದು ಗಂಭೀರ ಸಮಸ್ಯೆ, ಖಂಡಿತವಾಗಿಯೂ ಇದನ್ನು ಕೂತು ಬಗೆಹರಿಸಿಕೊಳ್ಳಬೇಕು. ಯಾವುದೇ ಸಿನಿಮಾಗಳಿಗೆ ಅನ್ಯಾಯ ಆಗಬಾರದು. ಶಿವರಾಜ್‌ ಕುಮಾರ್ ಸಿನಿಮಾ ಅಂತ ಅಲ್ಲ, ಎಲ್ಲಾ ಕನ್ನಡ ಸಿನಿಮಾಗಳಿಗೆ ಮನ್ನಣೆ ಸಿಗಬೇಕು ಎಂದಿದ್ದಾರೆ ಶಿವರಾಜ್ ಕುಮಾರ್.

‘ಘೋಸ್ಟ್’ ಸಿನಿಮಾ ಅಕ್ಟೋಬರ್ 19ರಂದು ಬಿಡುಗಡೆ ಆಯ್ತು. ಅದೇ ದಿನ ತಮಿಳಿನ ‘ಲಿಯೋ’, ತೆಲುಗಿನ ‘ಭಗವಂತ್ ಕೇಸರಿ’ ಹಾಗೂ ‘ಟೈಗರ್ ನಾಗೇಶ್ವರ್ ರಾವ್’ ಸಿನಿಮಾಗಳು ಬಿಡುಗಡೆ ಆದವು. ಮೊದಲ ದಿನ ಬೆಂಗಳೂರಿನಲ್ಲಿ ‘ಘೋಸ್ಟ್’ ಸಿನಿಮಾಕ್ಕಿಂತಲೂ ತಮಿಳಿನ ವಿಜಯ್ ನಟನೆಯ ‘ಲಿಯೋ’ ಸಿನಿಮಾಕ್ಕೆ ಹೆಚ್ಚು ಶೋಗಳು ಲಭಿಸಿತ್ತು. ಇದು ಕನ್ನಡ ಸಿನಿಮಾ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಆ ಸಮಯದಲ್ಲಿ ಶಿವರಾಜ್ ಕುಮಾರ್ ಅವರು ಹೆಚ್ಚಿಗೇನು ಮಾತನಾಡಿರಲಿಲ್ಲ. ಆದರೆ ಉದ್ದೇಶಪೂರ್ವಕವಾಗಿ ಕನ್ನಡ ಸಿನಿಮಾಗಳಿಗೆ ಸಮಸ್ಯೆ ಕೊಟ್ಟರೆ ಸುಮ್ಮನೆ ಕೂರುವುದಿಲ್ಲ ಎಂಬ ಸಂದೇಶವನ್ನು ಈಗ ರವಾನಿಸಿದ್ದಾರೆ.

ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾವನ್ನು ಶ್ರೀನಿ ನಿರ್ದೇಶನ ಮಾಡಿದ್ದಾರೆ, ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಹಾಗೂ ತಮಿಳು ನಟ ಜಯರಾಂ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಿವಣ್ಣನ ಅಭಿಮಾನಿಗಳು ಸಿನಿಮಾವನ್ನು ಸಂಭ್ರಮಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 2:35 pm, Sat, 21 October 23