‘ರೋಣಾಪುರದಲ್ಲಿ ರಣಗಲ್ ಮೈಲಿಗಲ್ಲು’ ‘ಭೈರತಿ ರಣಗಲ್’ ಟ್ರೈಲರ್ ಬಿಡುಗಡೆ

Bhairathi Ranagal Movie: ಶಿವರಾಜ್ ಕುಮಾರ್ ಟನೆಯ ‘ಭೈರತಿ ರಣಗಲ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಕೈಯಲ್ಲಿ ಮಚ್ಚು ಹಿಡಿದ ಶಿವಣ್ಣ ದುಷ್ಟ ಸಂಹಾರಕ್ಕೆ ನಿಂತಿದ್ದಾರೆ. ‘ಭೈರತಿ ರಣಗಲ್’ ಸಿನಿಮಾ ನವೆಂಬರ್ 15 ಕ್ಕೆ ಬಿಡುಗಡೆ ಆಗಲಿದೆ.

‘ರೋಣಾಪುರದಲ್ಲಿ ರಣಗಲ್ ಮೈಲಿಗಲ್ಲು’ ‘ಭೈರತಿ ರಣಗಲ್’ ಟ್ರೈಲರ್ ಬಿಡುಗಡೆ
ಭೈರತಿ ರಣಗಲ್
Follow us
ಮಂಜುನಾಥ ಸಿ.
|

Updated on:Nov 05, 2024 | 3:36 PM

ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. 2017 ರಲ್ಲಿ ಬಿಡುಗಡೆ ಆಗಿದ್ದ ‘ಮಫ್ತಿ’ ಸಿನಿಮಾದ ಪಾತ್ರವಾದ ಭೈರತಿ ರಣಗಲ್ ಪಾತ್ರವನ್ನು ಪ್ರಧಾನವಾಗಿಟ್ಟುಕೊಂಡು ಈ ಸಿನಿಮಾ ನಿರ್ಮಿಸಲಾಗಿದ್ದು, ಆ ಸಿನಿಮಾದಲ್ಲಿ ತುಸುವೇ ಇದ್ದ ಭೈರತಿ ರಣಗಲ್ ಪಾತ್ರವನ್ನು ಇಲ್ಲಿ ವೈಭವೀಕರಿಸಲಾಗಿದೆ. ಸಿನಿಮಾದ ಟ್ರೈಲರ್ ಇಂದು (ನವೆಂಬರ್ 05) ಬಿಡುಗಡೆ ಆಗಿದ್ದು, ಶಿವಣ್ಣ ಬೇರೆ ಬೇರೆ ಶೇಡ್​ಗಳಲ್ಲಿ ಗಮನ ಸೆಳೆದಿದ್ದಾರೆ. ಸಿನಿಮಾದ ಸಣ್ಣ ಝಲಕ್ ಅನ್ನು ಟ್ರೈಲರ್ ನೀಡುತ್ತಿದೆ.

‘ಮಫ್ತಿ’ ಸಿನಿಮಾದಲ್ಲಿ ಭೈರತಿ ರಣಗಲ್ ಪಾತ್ರದ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಬದಲಿಗೆ ಭೈರತಿ ರಣಗಲ್ ಡಾನ್, ಮಹಾ ಚಾಣಾಕ್ಷ, ಒಳ್ಳೆಯರಿಗೆ ಬಹಳ ಒಳ್ಳೆಯವ, ಕುಟುಂಬವನ್ನು ಇಷ್ಟಪಡುವವ ಎಂಬಿತ್ಯಾದಿ ವಿವರಗಳಷ್ಟೆ ಆ ಸಿನಿಮಾದಲ್ಲಿದ್ದವು. ಆದರೆ ಆ ಪಾತ್ರ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಕಾರಣಕ್ಕೆ ಸಿನಿಮಾದ ನಿರ್ದೇಶಕ ನರ್ತನ್, ‘ಭೈರತಿ ರಣಗಲ್’ ಪಾತ್ರವನ್ನೇ ಪ್ರಧಾನವಾಗಿಸಿಕೊಂಡು ಸಿನಿಮಾ ಮಾಡಿದ್ದಾರೆ.

ಇಂದು ಬಿಡುಗಡೆ ಆಗಿರುವ ಟ್ರೈಲರ್​ನಲ್ಲಿ ಭೈರತಿ ರಣಗಲ್​ನ ಬಾಲ್ಯ, ಬಾಲ್ಯದಲ್ಲಿ ಆತ ಎದುರಿಸಿದ ಸಮಸ್ಯೆ, ಅದರಿಂದ ಆತನಲ್ಲಿ ಹುಟ್ಟಿದ ಪ್ರಶ್ನೆಗಳು, ಅವಕ್ಕೆ ಉತ್ತರ ಕಂಡುಕೊಳ್ಳಲು ಮಾಡಿಕೊಂಡ ಆಯ್ಕೆ. ಕಾನೂನಾತ್ಮಕ ಹೋರಾಟ, ಅದೂ ಕೈಗೂಡದೇ ಇದ್ದಾಗ ಕೈಗೆ ಎತ್ತಿಕೊಂಡ ಆಯುಧ ಇನ್ನಿತರೆ ವಿಷಯಗಳ ಸಣ್ಣ ಝಲಕ್​ಗಳು ಕಾಣುತ್ತವೆ. ಟ್ರೈಲರ್​ನಲ್ಲಿ ಶಿವಣ್ಣ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಮಚ್ಚು ಹಿಡಿದು ದುಷ್ಟ ಸಂಹಾರ ಮಾಡುತ್ತಿರುವ ಕೆಲ ದೃಶ್ಯಗಳು ಟ್ರೈಲರ್​ನಲ್ಲಿವೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ನೂತನ ಫಾರ್ಮ್ ಹೌಸ್ ಅದ್ಧೂರಿ ಗೃಹ ಪ್ರವೇಶ

ಶಿವಣ್ಣ ಮಾತ್ರವೇ ಅಲ್ಲದೆ ಬೇರೆ ಕೆಲವು ಪಾತ್ರಗಳ ಪರಿಚಯವನ್ನೂ ಸಹ ಟ್ರೈಲರ್​ನಲ್ಲಿ ಮಾಡಿಸಲಾಗಿದೆ. ಶಿವಣ್ಣನ ಹೊರತಾಗಿ ಟ್ರೈಲರ್​ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದು ಬಾಲಿವುಡ್ ನಟ ರಾಹುಲ್ ಭೋಸ್. ರಾಹುಲ್ ಅವರು ‘ಭೈರತಿ ರಣಗಲ್’ ಸಿನಿಮಾದ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣನ ಸಹೋದರಿಯ ಪಾತ್ರ ನಿರ್ವಹಿಸಿರುವ ಛಾಯಾ ಸಿಂಗ್​ ಸಹ ಟ್ರೈಲರ್​ನಲ್ಲಿ ಹೆಚ್ಚು ಕಾಣುತ್ತಾರೆ. ನಾಯಕಿ ರುಕ್ಮಿಣಿ ವಸಂತ್ ಹೀಗೆ ಬಂದು ಹಾಗೆ ಹೊರಟುಬಿಡುತ್ತಾರೆ. ಅವಿನಾಶ್ ಹಾಗೂ ಇನ್ನೂ ಕೆಲ ಪಾತ್ರಗಳು ಟ್ರೈಲರ್​ನಲ್ಲಿ ಕಾಣುತ್ತವೆ. ‘ಮಫ್ತಿ’ ಸಿನಿಮಾದಲ್ಲಿದ್ದ ಕೆಲವು ಪಾತ್ರಗಳು ಸಹ ‘ಭೈರತಿ ರಣಗಲ್’ ಸಿನಿಮಾದ ಟ್ರೈಲರ್​ನಲ್ಲಿ ಕಾಣಸಿಗುತ್ತವೆ.

‘ಭೈರತಿ ರಣಗಲ್’ ಸಿನಿಮಾವನ್ನು ನರ್ತನ್ ನಿರ್ದೇಶನ ಮಾಡಿದ್ದು, ಸಿನಿಮಾವನ್ನು ಶಿವಣ್ಣ ಹಾಗೂ ಗೀತಕ್ಕ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾ ನವೆಂಬರ್ 15 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Tue, 5 November 24