ಯೋಗರಾಜ್ ಭಟ್ (Yogaraj Bhatt) ನಿರ್ದೇಶಿಸಿ, ಶಿವರಾಜ್ ಕುಮಾರ್ (Shiva Rajkumar), ಪ್ರಭುದೇವ (Prabhu Deva) ಒಟ್ಟಿಗೆ ನಟಿಸಿರುವ ‘ಕರಟಕ ಧಮನಕ’ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ರೆಟ್ರೋ ಮಾದರಿಯಲ್ಲಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ. ಪೋಸ್ಟರ್ ಜೊತೆಗೆ ವಿಡಿಯೋ ಸಹ ಒಂದನ್ನು ಬಿಡುಗಡೆ ಮಾಡಲಾಗಿದ್ದು, ವಿಡಿಯೋನಲ್ಲಿ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ಈ ಸಿನಿಮಾ ಎರಡು ಗುಳ್ಳೆ ನರಿಗಳ ಕತೆಯಂತೆ!
ನರಿ ಬುದ್ಧಿ ಎನ್ನುವುದು ಮನುಷ್ಯನಲ್ಲಿ ಇದ್ದೇ ಇದೆ. ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆ ಒಟ್ಟಾರೆ ತಲೆ ತಲಾಂತರಗಳಿಂದಲೂ ನರಿ ಬುದ್ಧಿ ಎಂಬುದು ಮನುಷ್ಯನ ರಕ್ತದಲ್ಲಿ ಸೇರಿಕೊಂಡಿದೆ. ಅತ್ಯಂತ ನೀಚ ಬುದ್ಧಿಯ, ಕುತಂತ್ರೀ ಬುದ್ಧಿಯ ನರಿಗಳನ್ನು ಕರಟಕ, ಧಮನಕ ಎಂದು ಕರೆಯುತ್ತಿದ್ದರೆಂದು ಪುರಾಣಗಳಲ್ಲಿ ಉಲ್ಲೇಖಗಳಿವೆ. ನಮ್ಮ ಸಿನಿಮಾ ಸಹ ಅಂಥಹದೇ ಕುತಂತ್ರಿಗಳಿಬ್ಬರ ಕತೆಯಾಗಿರುವ ಕಾರಣ ಅದೇ ಹೆಸರನ್ನು ನಾವು ಇಟ್ಟಿದ್ದೇವೆ ಎಂದಿದ್ದಾರೆ ಭಟ್ಟರು.
ಇಂದು ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಸಹ ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಅವರ ಜೊತೆಗೆ ಎರಡು ನರಿಗಳ ಚಿತ್ರಗಳು ಸಹ ಇವೆ. ಜೊತೆಗೆ ”’ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು “ಕರಟಕ” ಇನ್ನೊಂದರ ಹೆಸರು “ದಮನಕ”. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಆ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಎಚ್ಚರಿಕೆ” ಎಂಬ ಬರಹವೂ ಇದೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಘೋಷಣೆಯಾದ ಸಿನಿಮಾಗಳ ಪಟ್ಟಿ ಇಲ್ಲಿದೆ
ಸಿನಿಮಾವನ್ನು ಬೆಂಗಳೂರು ಗ್ರಾಮಾಂತರ, ಕೋಲಾರ, ಗೌರಿಬಿದನೂರು ಹಾಗೂ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿದೆ. ಶಿವರಾಜಕುಮಾರ್, ಪ್ರಭುದೇವ, ರವಿಶಂಕರ್, ತನಿಕೆಲ್ಲ ಭರಣಿ, ರಂಗಾಯಣ ರಘು, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನ ನೀಡಿರುವ ಈ ಸಿನಿಮಾವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಯೋಗರಾಜ್ ಭಟ್ ಹಾಗೂ ರವಿ ಈ ಚಿತ್ರಕ್ಕೆ ಕಥೆ ರಚಿಸಿದ್ದು, ಚಿತ್ರಕಥೆಯನ್ನು ಯೋಗರಾಜ್ ಭಟ್, ರವಿ ಹಾಗೂ ಸುಬ್ರಹ್ಮಣ್ಯ ಬರೆದಿದ್ದಾರೆ.
‘ಕರಟಕ ಧಮನಕ’ ಸಿನಿಮಾ 80-90 ರ ದಶಕದಲ್ಲಿ ನಡೆಯುವ ಕತೆಯನ್ನು ಹೊಂದಿದ್ದು, ಇಬ್ಬರು ನಟೋರಿಯಸ್ ವ್ಯಕ್ತಿಗಳು ತಂತ್ರ-ಕುತಂತ್ರದಿಂದ ಜನರನ್ನು ಮೋಸ ಮಾಡಿ ಬದುಕುವುದನ್ನೇ ವೃತ್ತಿ ಮಾಡಿಕೊಂಡಿರುತ್ತಾರೆ. ಅವರ ಕತೆಯನ್ನೇ ಕರಟಕ-ಧಮನಕ ಸಿನಿಮಾದಲ್ಲಿ ಭಟ್ಟರು ಹೇಳುತ್ತಿದ್ದಾರೆ.
ಯೋಗರಾಜ್ ಭಟ್ಟರು ಈ ಹಿಂದೆ ಗಾಳಿಪಟ 2 ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರ ಬೆನ್ನಲ್ಲೆ ಈಗ ‘ಕರಟಕ ಧಮನಕ’ ನಿರ್ದೇಶಿಸಿ ಬಿಡುಗಡೆ ಮಾಡುತ್ತಿದ್ದಾರೆ. ಇದಾದ ಬಳಿಕ ಭಟ್ಟರು ನಿರ್ದೇಶಿಸಿರುವ ಕುಸ್ತಿಗೆ ಸಂಬಂಧಿಸಿದ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ