ಮಲಯಾಳಂನ ಈ ಸ್ಟಾರ್ ನಟ ಬಹಳ ಇಷ್ಟವಂತೆ ಶಿವಣ್ಣನಿಗೆ, ಅದಕ್ಕೆ ಕಾರಣ ಇದೆ

Shiva Rajkumar: ಶಿವರಾಜ್ ಕುಮಾರ್ ಒಳ್ಳೆಯ ನಟರನ್ನು, ಸಿನಿಮಾಗಳನ್ನು ಮೆಚ್ಚಿಕೊಳ್ಳಲು ಹಿಂದೆ-ಮುಂದೆ ನೋಡುವುದಿಲ್ಲ. ಒಳ್ಳೆಯ ನಟರಾದರೆ ತಮಗಿಂತಲೂ ಕಿರಿಯರಾದರೂ ಸೈ ಕೊಂಡಾಡುತ್ತಾರೆ. ಇದೀಗ ‘45’ ಸಿನಿಮಾದ ಪ್ರಚಾರದಲ್ಲಿ ಮಾತನಾಡಿರುವ ಶಿವರಾಜ್ ಕುಮಾರ್ ಮಲಯಾಳಂ ಚಿತ್ರರಂಗದ ಸ್ಟಾರ್ ನಟರೊಬ್ಬರ ಅಭಿಮಾನಿ ನಾನು ಎಂದಿದ್ದಾರೆ. ತಮ್ಮ ಹಾಗೂ ಅವರ ಭೇಟಿಯ ಬಗ್ಗೆಯೂ ಮಾತನಾಡಿದ್ದಾರೆ.

ಮಲಯಾಳಂನ ಈ ಸ್ಟಾರ್ ನಟ ಬಹಳ ಇಷ್ಟವಂತೆ ಶಿವಣ್ಣನಿಗೆ, ಅದಕ್ಕೆ ಕಾರಣ ಇದೆ
Shiva Rajkumar

Updated on: Apr 17, 2025 | 8:05 PM

ಶಿವರಾಜ್ ಕುಮಾರ್ (Shiva Rajkumar) ಅಹಂ ಇಲ್ಲದ ನಟ. ಅವರಿಗಿಂತಲೂ ಕಿರಿಯವರಾಗಲಿ, ಹಿರಿಯವರಾಗಲಿ ಒಳ್ಳೆಯ ಕೆಲಸ ಮಾಡಿದರೆ, ಒಳ್ಳೆಯ ಸಿನಿಮಾ ಮಾಡಿದರೆ, ಚೆನ್ನಾಗಿ ನಟಿಸಿದರೆಂದರೆ ಹಮ್ಮು-ಬಿಮ್ಮು, ಅಹಂ ಬಿಟ್ಟು ಅವರನ್ನು ಹೊಗಳುತ್ತಾರೆ. ಮೆಚ್ಚಿಕೊಳ್ಳುತ್ತಾರೆ, ಅದನ್ನು ಎಲ್ಲರೆದರು ಬಹಿರಂಗವಾಗಿ ಹೇಳುತ್ತಾರೆ. ಕನ್ನಡದಲ್ಲಿಯೇ ಸುದೀಪ್, ಯಶ್, ದರ್ಶನ್ ಇನ್ನೂ ಹಲವು ಸಹ ನಟರ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಶಿವಣ್ಣ, ತಾವು ಕಮಲ್ ಹಾಸನ್ ಅಭಿಮಾನಿ, ರಾಮ್ ಚರಣ್, ಎನ್​ ಟಿಆರ್ ನಟನೆ, ಅಲ್ಲು ಅರ್ಜುನ್ ಡ್ಯಾನ್ಸ್ ನನಗಿಲ್ಲ, ಧನುಶ್ ನೋಡಿದರೆ ನನ್ನನ್ನು ನಾನು ನೋಡಿದಂತಾಗುತ್ತದೆ ಎಂದೆಲ್ಲ ಹೇಳಿದ್ದಾರೆ. ಇದೀಗ ಶಿವಣ್ಣ ಮಲಯಾಳಂ ಚಿತ್ರರಂಗದ ಪ್ಯಾನ್ ಇಂಡಿಯಾ ನಟರೊಬ್ಬರ ಬಗ್ಗೆ ಕೊಂಡಾಡಿದ್ದಾರೆ.

ದುಲ್ಕರ್ ಸಲ್ಮಾನ್, ಮೂಲತಃ ಮಲಯಾಳಂ ಚಿತ್ರರಂಗದ ನಟ ಆದರೆ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟ. ತೆಲುಗು, ತಮಿಳು ಬಾಲಿವುಡ್​ನಲ್ಲಿಯೂ ಸಹ ಹೀರೋ ಆಗಿ ಮಿಂಚಿದ್ದಾರೆ. ಮಾಸ್-ಮಸಾಲ ಸಿನಿಮಾಗಳ ಹಾದಿ ಹಿಡಿಯದೆ ಅದ್ಭುತವಾದ ಕತೆ, ನಿರೂಪಣೆ ಇರುವ ಸಿನಿಮಾಗಳನ್ನು ಹೆಕ್ಕಿ-ಹೆಕ್ಕಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶಿವಣ್ಣ ‘45’ ಸಿನಿಮಾದ ಪ್ರಚಾರಕ್ಕೆ ಮುಂಬೈಗೆ ಹೋಗಿದ್ದರು. ಈ ವೇಳೆ ಪತ್ರಕರ್ತರ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಾ ದುಲ್ಕರ್ ಸಲ್ಮಾನ್ ಬಗ್ಗೆ ಮಾತನಾಡಿದರು ಶಿವಣ್ಣ.

‘ನನಗೆ ದುಲ್ಕರ್ ಸಲ್ಮಾನ್ ಬಹಳ ಇಷ್ಟ. ಅದೂ ಈಗಿನಿಂದ ಅಲ್ಲ, ಅವರು ನಟನೆ ಆರಂಭಿಸಿದಾಗಿನಿಂದಲೂ ಅವರನ್ನು ಗಮನಿಸುತ್ತಿದ್ದೇನೆ ನನಗೆ ದುಲ್ಕರ್ ಬಹಳ ಇಷ್ಟ. ಅವರಲ್ಲಿ ಪ್ರತ್ಯೇಕವಾಗಿ ಏನು ಇಷ್ಟ ಎಂದರೆ ಹೇಳಲು ಆಗದು. ಆದರೆ ಅವರ ಬಳಿ ಏನೋ ಒಂದು ಚುಂಬಕ ಶಕ್ತಿ ಇದೆ. ಅವರು ಎಲ್ಲರಿಗೂ ಇಷ್ಟವಾಗಿಬಿಡುತ್ತದೆ. ಈ ವರೆಗೆ ನಾನು ಅವರನ್ನು ಕೇವಲ ಒಂದು ಬಾರಿ ಭೇಟಿ ಮಾಡಿದ್ದೇನೆ ಆದರೆ ಆ ಭೇಟಿಯಲ್ಲೇ ನಾನು ಅವರ ಅಭಿಮಾನಿ ಆಗಿಬಿಟ್ಟೆ’ ಎಂದಿದ್ದಾರೆ ಶಿವಣ್ಣ.

ಇದನ್ನೂ ಓದಿ:ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್

‘ನಾನು ಒಮ್ಮೆ ರಜೆ ಕಳೆಯಲು ಚೆನ್ನೈಗೆ ಹೋಗಿದ್ದೆ ಅಲ್ಲಿ ಮೊದಲ ಬಾರಿಗೆ ದುಲ್ಕರ್ ಸಲ್ಮಾನ್ ಅವರನ್ನು ಭೇಟಿಯಾದೆ. ಅಂದು ದುಲ್ಕರ್ ಅನ್ನು ನೋಡಿ ನಾನು ಬಹಳ ಖುಷಿ ಪಟ್ಟೆ, ಅಂದು ಅವರು ನನ್ನೊಂದಿಗೆ ಮಾತನಾಡಿದ ರೀತಿ, ಅವರ ವ್ಯಕ್ತಿತ್ವಕ್ಕೆ ನಾನು ಮಾರು ಹೋದೆ. ನಾನು ದುಲ್ಕರ್ ಸಲ್ಮಾನ್ ಅಭಿಮಾನಿ’ ಎಂದಿದ್ದಾರೆ ನಟ ಶಿವರಾಜ್ ಕುಮಾರ್.

ಶಿವರಾಜ್ ಕುಮಾರ್ ನಟನೆಯ ‘45’ ಸಿನಿಮಾದ ಪ್ರಚಾರಕ್ಕಾಗಿ ಇತ್ತೀಚೆಗೆ ಚಿತ್ರತಂಡ ಮುಂಬೈಗೆ ತೆರಳಿತ್ತು. ಶಿವಣ್ಣನ ಜೊತೆಗೆ ಉಪೇಂದ್ರ, ರಾಜ್ ಬಿ ಶೆಟ್ಟಿ ನಿರ್ದೇಶಕ ಅರ್ಜುನ್ ಜನ್ಯ ಅವರುಗಳು ಸಹ ಇದ್ದರು. ಇದು ಅರ್ಜುನ್ ಜನ್ಯ ನಿರ್ದೇಶನ ಮಾಡಿರುವ ಮೊದಲ ಸಿನಿಮಾ. ಸಿನಿಮಾ ಆಗಸ್ಟ್ 14 ಕ್ಕೆ ಬಿಡುಗಡೆ ಆಗಲಿದೆ. ಆದರೆ ಸಿನಿಮಾದ ಪ್ರಚಾರವನ್ನು ಈಗಲೇ ಪ್ರಾರಂಭ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ