ಕನ್ನಡವೇ ನನ್ನ ಮೊದಲ ಆದ್ಯತೆ, ಕ್ಷಮೆ ಕೇಳುವುದು ಅವರಿಗೆ ಬಿಟ್ಟಿದ್ದು: ಶಿವಣ್ಣ

Shiva Rajkumar: ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ನೀಡಿರುವ ಹೇಳಿಕೆ ವಿವಾದವಾಗಿದೆ. ಶಿವರಾಜ್ ಕುಮಾರ್ ಅವರು ಹಾಜರಿದ್ದ ಕಾರ್ಯಕ್ರಮದಲ್ಲಿಯೇ ಕಮಲ್ ಹಾಸನ್ ಕನ್ನಡದ ಉಗಮದ ಬಗ್ಗೆ ಆಡಿದ್ದ ಮಾತು ವಿವಾದವಾಗಿದೆ. ಈ ಕಾರಣಕ್ಕೆ ಕೆಲವರು ಶಿವಣ್ಣನನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದ್ದರು. ಇದೀಗ ಈ ಬಗ್ಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡವೇ ನನ್ನ ಮೊದಲ ಆದ್ಯತೆ, ಕ್ಷಮೆ ಕೇಳುವುದು ಅವರಿಗೆ ಬಿಟ್ಟಿದ್ದು: ಶಿವಣ್ಣ
Kamal Haasan Shivanna

Updated on: May 31, 2025 | 8:45 PM

ಕಮಲ್ ಹಾಸನ್, ಕನ್ನಡದ ಬಗ್ಗೆ ಆಡಿರುವ ಮಾತುಗಳು ವಿವಾದ ಎಬ್ಬಿಸಿವೆ. ಈ ವಿವಾದದಲ್ಲಿ ಕೆಲವರು ಶಿವರಾಜ್ ಕುಮಾರ್ ಹೆಸರನ್ನು ಎಳೆದು ತಂದಿದ್ದಾರೆ. ಶಿವರಾಜ್ ಕುಮಾರ್ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಮಲ್ ಹಾಸನ್, ‘ತಮಿಳಿನಿಂದಲೇ ಕನ್ನಡ ಜನಿಸಿದೆ’ ಎಂದಿದ್ದರು. ಇದೀಗ ಕಮಲ್ ಹೇಳಿಕೆ ವಿವಾದ ಸೃಷ್ಟಿಸಿದ ಬಳಿಕ ಕಮಲ್ ಜೊತೆಗೆ ಶಿವಣ್ಣನನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ. ಇದೀಗ ಶಿವಣ್ಣ ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.

‘ಕನ್ನಡವೇ ನನ್ನ ಮೊದಲ ಆದ್ಯತೆ, ಇದು ಮೊದಲ ಬಾರಿಯಲ್ಲ, ಪ್ರತಿಬಾರಿಯೂ ಕನ್ನಡದ ವಿಷಯ ಬಂದಾಗೆಲ್ಲ ನಾನು ನಿಂತಿದ್ದೇನೆ. ಕನ್ನಡಕ್ಕಾಗಿ ನಾನು ಏನು ಮಾಡಿದ್ದೇನೆ ಎಂಬುದು ಕರ್ನಾಟಕದ ಜನರಿಗೆ ಗೊತ್ತಿದೆ, ಅದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ. ನಾನು ಅಂದಿನ ಕಾರ್ಯಕ್ರಮಕ್ಕೆ ಹೋಗಿದ್ದೆ ಅಷ್ಟೆ’ ಎಂದಿದ್ದಾರೆ ಶಿವಣ್ಣ. ನಿಮ್ಮ ಹೆಸರನ್ನು ಕೆಲವರು ವಿವಾದಕ್ಕೆ ಎಳೆಯುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಇರಲಿ ತೊಂದರೆ ಇಲ್ಲ, ನಾನು ಅದರ ಬಗ್ಗೆ ಎಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ, ನನ್ನ ಆತ್ಮಸಾಕ್ಷಿಗೆ ನಾನು ಸರಿಯಾಗಿದ್ದೇನೆ. ನಾನು ಕಲೆಗಾಗಿ ಬದುಕುತ್ತಿರುವವನು, ಕಲೆಯಿಂದಲೇ ನಾವು, ಎಲ್ಲ ಭಾಷೆಗಳ ಬಗ್ಗೆಯೂ ಗೌರವ ಇದೆ, ಆದರೆ ಕನ್ನಡ ಭಾಷೆಯ ವಿಷಯ ಬಂದಾಗೆಲ್ಲ ಚಿತ್ರರಂಗದ ಪರವಾಗಿ ಬರುವವರಲ್ಲಿ ಮೊದಲಿಗೆ ನಾನಾಗಿರುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ:ಕಮಲ್ ಹಾಸನ್ ವಿವಾದದ ಬಳಿಕ ಮೊದಲ ಬಾರಿಗೆ ವೇದಿಕೆ ಮೇಲೆ ಮಾತನಾಡಿದ ಶಿವಣ್ಣ

‘ಕಮಲ್ ಹಾಸನ್ ಅವರ ಅಭಿಮಾನಿ ನಾನು, ಆದರೆ ವೇದಿಕೆ ಮೇಲೆ ಏನು ಮಾತನಾಡಬೇಕು, ಬಿಡಬೇಕು ಎಂಬುದು ಅವರ ಆಯ್ಕೆ. ಆದರೆ ಅವರಿಂದ ಈಗ ಏನು ಬಯಸುತ್ತಿದ್ದಾರೋ ಅದು ಮಾಧ್ಯಮಗಳ ಬಯಕೆ. ಅಂದು ಕಮಲ್ ಮಾತಿಗೆ ನಾನು ಚಪ್ಪಾಳೆ ಹೊಡೆಯುತ್ತಿರುವಂತೆ ದೃಶ್ಯಗಳನ್ನು ಜೋಡಿಸಿ ಕೆಲವರು ತೋರಿಸುತ್ತಿದ್ದಾರೆ. ದಯವಿಟ್ಟು ಅದನ್ನು ಮಾಡಬೇಡಿ, ನಾನು ಕಲಾವಿದ, ಈ ಎಡಿಟಿಂಗ್​ಗಳು ಹೇಗೆ ಆಗುತ್ತವೆ ಎಂಬುದು ನನಗೆ ಗೊತ್ತಿದೆ’ ಎಂದು ಖಾರವಾಗಿಯೇ ಹೇಳಿದ್ದಾರೆ ಶಿವಣ್ಣ.

‘ಕಮಲ್ ಹಾಸನ್ ಅವರು ಅಂದು ಆ ಮಾತು ಆಡಿದಾಗ ಅಲ್ಲಿ ಎಲ್ಲರೂ ಇದ್ದರು, ಮಾಧ್ಯಮಗಳ ಮುಂದೆಯೇ ಅವರು ಆ ಮಾತನ್ನಾಡಿದ್ದರು. ಆದರೆ ಅಂದೇ ಆ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದರೆ ವಿಷಯ ಇಷ್ಟು ದೊಡ್ಡದಾಗಿ ಆಗುತ್ತಲೇ ಇರಲಿಲ್ಲ. ನನ್ನ ಆತ್ಮಸಾಕ್ಷಿಗೆ ಗೊತ್ತು ನಾನು ಏನು ಎಂದು, ನನ್ನ ತಂದೆಗೆ ಗೊತ್ತು’ ಎಂದಿದ್ದಾರೆ ಶಿವರಾಜ್ ಕುಮಾರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ