ಶಿವಣ್ಣನ ಬಳಿ ಅವಕಾಶಕ್ಕಾಗಿ ಬೇಡಿಕೆ ಇಟ್ಟ ಟಾಲಿವುಡ್ ಹಿರಿಯ ನಟ; ಹೀರೋ ಪ್ರತಿಕ್ರಿಯೆ ಏನು?
ಟಾಲಿವುಡ್ ನಟ ಮೋಹನ್ ಬಾಬು ಅವರು ಶಿವರಾಜ್ ಕುಮಾರ್ ಜೊತೆ ನಟಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ರಾಜ್ ಕುಮಾರ್ ಜೊತೆ ನಟಿಸುವ ಅವರ ಆಸೆ ಈಡೇರದ ಕಾರಣ, ಶಿವರಾಜ್ ಕುಮಾರ್ ಜೊತೆ ನಟಿಸುವ ಆಸೆ ಹೊಂದಿದ್ದಾರೆ. ಶಿವರಾಜ್ ಕುಮಾರ್ ಅವರು ಮೋಹನ್ ಬಾಬು ಅವರಿಗೆ ವಿಲನ್ ಪಾತ್ರವಲ್ಲದೆ ವಿಶೇಷ ಪಾತ್ರ ನೀಡುವುದಾಗಿ ತಿಳಿಸಿದ್ದಾರೆ.

ಶಿವರಾಜ್ಕುಮಾರ್ (Shivarajkumar) ಜೊತೆ ನಟಿಸಬೇಕು ಎಂಬುದು ಅನೇಕರ ಕನಸು. ಆದರೆ, ಈ ಕನಸನ್ನು ಈಡೇರಿಸಿಕೊಳ್ಳಲು ಎಲ್ಲರಿಂದಲೂ ಸಾಧ್ಯವಾಗೋದಿಲ್ಲ. ಅವರ ಜೊತೆ ಪರಭಾಷಾ ಕಲಾವಿದರಿಗೂ ನಟಿಸಬೇಕು ಎಂದಿರುತ್ತದೆ. ಈಗ ಟಾಲಿವುಡ್ನ ಹಿರಿಯ ನಟ ಮೋಹನ್ ಬಾಬು ಅವರು ಶಿವರಾಜ್ಕುಮಾರ್ ಜೊತೆ ನಟಿಸುವ ಹಂಬಲ ಹೊರಹಾಕಿದ್ದಾರೆ. ವಿಶೇಷ ಎಂದರೆ ರಾಜ್ಕುಮಾರ್ ಜೊತೆ ನಟಿಸಬೇಕು ಎಂಬುದು ಅವರ ಇಚ್ಛೆ ಆಗಿತ್ತು. ಆ ಆಸೆ ಈಡೇರಲಿಲ್ಲ. ಅವರ ಮಗನ ಜೊತೆಯಾದರೂ ನಟಿಸಬೇಕು ಎಂಬುದು ಅವರ ಕನಸು.
‘ಕಣ್ಣಪ್ಪ’ ಸಿನಿಮಾ ಜೂನ್ 27ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ಕಾರ್ಯಕ್ರಮಕ್ಕೆ ಶಿವರಾಜ್ಕುಮಾರ್ ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ‘ರಾಜ್ಕುಮಾರ್ ದೊಡ್ಡ ಹೀರೋ. ಅವರ ಬಗ್ಗೆ ಮಾತನಾಡುವಷ್ಟು ಅರ್ಹತೆ ನನಗಿಲ್ಲ. ಅಂಬರೀಷ್, ವಿಷ್ಣುವರ್ಧನ್ ನನ್ನ ಜೊತೆ ಕ್ಲೋಸ್ ಆಗಿದ್ದರು. ಅವರು ಹೋದ ಬಳಿಕ ರಾಕ್ಲೈನ್ ವೆಂಕಟೇಶ್ ಆಪ್ತರಾದರು’ ಎಂದು ಹಳೆಯ ಘಟನೆಯನ್ನು ಅವರು ನೆನಪಿಸಿಕೊಂಡರು.
‘ನನಗೆ ಕನ್ನಡದಲ್ಲಿ ಒಂದು ಸಿನಿಮಾ ಮಾಡಬೇಕು. ಅವಕಾಶ ಕೇಳಲು ರಾಜ್ಕುಮಾರ್ ಮನೆಗೆ ತೆರಳಿದ್ದೆ. ಅಮ್ಮ (ಪಾರ್ವತಮ್ಮ) ಊಟ ಹಾಕಿದರು. ನಾನು ಊಟ ಮಾಡಿ ಹಾಗೆಯೇ ಬಂದೆ. ಅವಕಾಶ ಕೇಳುವ ಧೈರ್ಯ ಬರಲೇ ಇಲ್ಲ. ಹೀಗಾಗಿ, ಶಿವರಾಜ್ಕುಮಾರ್ ಅವರೇ ನಿಮ್ಮ ಸಿನಿಮಾದಲ್ಲಿ ನಾನು ವಿಲನ್ ಆಗಿ ಮಾಡಬೇಕು. ನನಗೆ ಅವಕಾಶ ನೀಡಿ’ ಎಂದು ಶಿವರಾಜ್ಕುಮಾರ್ ಬಳಿ ಕೇಳಿದರು.
ಶಿವರಾಜ್ಕುಮರ್ ಅವರು ಇದಕ್ಕೆ ಒಪ್ಪಲೇ ಇಲ್ಲ. ಅವರು ಈ ವಿಚಾರದಲ್ಲಿ ಹೇಳಿದ್ದೇ ಬೇರೆ. ‘ಮೋಹನ್ ಬಾಬು ಅವರು ಸಿನಿಮಾದಲ್ಲಿ ನಟಿಸೋ ಅವಕಾಶ ಕೇಳಿದ್ದಾರೆ. ನನ್ನ ಸಿನಿಮಾದಲ್ಲಿ ವಿಲನ್ ಆಗಿ ಮಾಡೋದು ಬೇಡ. ಅವರಿಗೆ ಯಾವುದಾದರೂ ವಿಶೇಷ ಪಾತ್ರ ನೀಡುತ್ತೇನೆ. ಅವರು ನನ್ನ ಸಹೋದರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿ’ ಎಂದಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ ವಿವಾದದ ಬಳಿಕ ಮೊದಲ ಬಾರಿಗೆ ವೇದಿಕೆ ಮೇಲೆ ಮಾತನಾಡಿದ ಶಿವಣ್ಣ
ಕಮಲ್ ಹಾಸನ್ ಅವರು ಇತ್ತೀಚೆಗೆ ವೇದಿಕೆ ಮೇಲೆ ಮಾತನಾಡುವಾಗ ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂದಿದ್ದರು. ಈ ವೇಳೆ ಅಲ್ಲಿ ಶಿವರಾಜ್ಕುಮಾರ್ ಕೂಡ ಇದ್ದರು. ಈ ಕಾರಣಕ್ಕೆ ಸಾಕಷ್ಟು ವಿವಾದ ಆಯಿತು. ಅವರು ಈ ವಿಚಾರದಲ್ಲಿ ಮೌನವಹಿಸಬಾರದಿತ್ತು ಎಂಬುದು ಅನೇಕರ ಅಭಿಪ್ರಾಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.