ಥಿಯೇಟರ್ ಸುಡುವ ಎಚ್ಚರಿಕೆ ಮಧ್ಯೆಯೂ ‘ಥಗ್ ಲೈಫ್’ ಪ್ರದರ್ಶನಕ್ಕೆ ಮುಂದಾದ ಕರ್ನಾಟಕದ ಚಿತ್ರಮಂದಿರಗಳು
Thug Life Movie: ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರದ ಬಿಡುಗಡೆಯು ಕರ್ನಾಟಕದಲ್ಲಿ ಭಾರಿ ವಿವಾದವನ್ನು ಸೃಷ್ಟಿಸಿದೆ. ಕನ್ನಡದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಕನ್ನಡ ಪರ ಸಂಘಟನೆಗಳು ಚಿತ್ರಮಂದಿರಗಳಿಗೆ ಬೆದರಿಕೆ ಹಾಕಿವೆ. ಆದರೂ, ಕೆಲವು ಚಿತ್ರಮಂದಿರಗಳು ಚಿತ್ರವನ್ನು ಪ್ರದರ್ಶಿಸಲು ನಿರ್ಧರಿಸಿವೆ.

‘ಥಗ್ ಲೈಫ್’ ಸಿನಿಮಾ (Thug Life) ಮುಂದಿನ ವಾರ (ಜೂನ್ 5) ರಿಲೀಸ್ ಆಗಲಿದೆ. ಕನ್ನಡದ ಬಗ್ಗೆ ಕಮಲ್ ಹಾಸನ್ ನೀಡಿದ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಕಮಲ್ ಹಾಸನ್ ಅವರು ಕ್ಷಮೆ ಕೇಳುವ ಮಾತೇ ಇಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ಮಾಡಿದರೆ ಥಿಯೇಟರ್ ಸುಡುವ ಎಚ್ಚರಿಕೆಯನ್ನು ಕನ್ನಡ ಪರ ಸಂಘಟನೆಗಳು ನೀಡಿವೆ. ಈ ಉದ್ವಿಘ್ನ ವಾತಾವರಣದ ನಡುವೆಯೂ ಈ ಚಿತ್ರವನ್ನು ಪ್ರದರ್ಶನ ಮಾಡಲು ಕರ್ನಾಟಕದ ಕೆಲವು ಥಿಯೇಟರ್ಗಳು ಮುಂದಾಗಿವೆ.
‘ಥಗ್ ಲೈಫ್’ ಚಿತ್ರದ ಪ್ರಚಾರದ ವೇಳೆ ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಮಾತನಾಡಿದ್ದರು ಕಮಲ್ ಹಾಸನ್. ಇದನ್ನು ಗುರಿಯಾಗಿಸಿಕೊಂಡು ಕನ್ನಡಿಗರು ಅವರ ಮೇಲೆ ತಿರುಗಿ ಬಿದ್ದಿದ್ದಾರೆ. ಕನ್ನಡಕ್ಕೆ ಅವಮಾನ ಆಗಿದೆ ಎನ್ನುವ ಆರೋಪವನ್ನು ಅನೇಕರು ಮಾಡಿದ್ದಾರೆ. ಆದರೆ, ಪಟ್ಟು ಬಿಡದ ಕಮಲ್ ಹಾಸನ್, ‘ನಾನು ತಪ್ಪು ಮಾಡಿಲ್ಲ, ಬೆದರಿಕೆ ಹೆದರಲ್ಲ, ಕ್ಷಮೆ ಕೇಳಲ್ಲ’ ಎಂದಿದ್ದಾರೆ.
ಮೇ 30ರಂದು ಸುದ್ದಿಗೋಷ್ಠಿ ನಡೆಸಿದ ಕರವೇ ಅಧ್ಯಕ್ಷ ನಾರಾಯಣಗೌಡ, ಯಾವುದಾದರೂ ಚಿತ್ರಮಂದಿರಗಳು ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಿದಲ್ಲಿ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಕೆಲವರು ಈ ಸಾಹಸಕ್ಕೆ ಮುಂದಾಗುತ್ತಿದ್ದಾರೆ.
ಬೆಂಗಳೂರಿನ ಖ್ಯಾತ ಸಿಂಗಲ್ ಸ್ಕ್ರೀನ್ಗಳಲ್ಲಿ ಒಂದಾದ ‘ವಿಕ್ಟರಿ ಸಿನಿಮಾಸ್’ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿತ್ತು. ಶೀಘ್ರವೇ ‘ಥಗ್ ಲೈಫ್’ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗುವುದು ಎಂದು ಹೇಳಿತ್ತು. ಇದು ಕನ್ನಡಿಗರನ್ನು ಕೆರಳಿಸಿತ್ತು. ಆದರೆ, ಈಗ ಥಿಯೇಟರ್ ಮಾಲೀಕರು ವರಸೆ ಬದಲಿಸಿದ್ದು, ಸಿನಿಮಾ ರಿಲೀಸ್ ಆದರಷ್ಟೇ ಥಿಯೇಟರ್ನಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ ಎಂದು ಹೇಳಿದೆ.
ಐಪಿಎಲ್ ಕಾರಣಕ್ಕೆ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಹೀಗಾಗಿ, ದೊಡ್ಡ ಸಿನಿಮಾಗಳು ರಿಲೀಸ್ ಆಗುವುದನ್ನೇ ಥಿಯೇಟರ್ಗಳು ಎದುರು ನೋಡುತ್ತಿದ್ದರು. ಆದರೆ, ಈ ವಿವಾದಿಂದ ಥಿಯೇಟರ್ ಮಾಲೀಕರು ಚಿಂತೆಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ ಲೈನ್ಗೂ ಬರ್ತಿಲ್ಲ, ಲೈನ್ಗೂ ಸಿಕ್ತಿಲ್ಲ; ‘ಥಗ್ ಲೈಫ್’ ಭವಿಷ್ಯ ಏನು?
‘ಥಗ್ ಲೈಫ್’ ಚಿತ್ರ ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಕನ್ನಡ ವರ್ಷನ್ ಇಲ್ಲ. ಈ ಚಿತ್ರವನ್ನು ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ. ಕಮಲ್ ಹಾಸನ್, ಸಿಂಬು, ತ್ರಿಷಾ, ಅಶೋಕ್ ಸೆಲ್ವನ್, ಐಶ್ವರ್ಯಾ ಲಕ್ಷ್ಮಿ, ಅಭಿರಾಮಿ ಬೋಸ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಕಮಲ್ ಹಾಸನ್ ಅವರೇ ನಿರ್ಮಾಪಕರು ಆಗಿರುವದರಿಂದ ಕರ್ನಾಟಕದಿಂದ ಆಗುವ ನಷ್ಟವನ್ನು ಭರಿಸಲು ಅವರು ಸಿದ್ಧರಿದ್ದಂತೆ ಕಂಡು ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:01 am, Sat, 31 May 25








