ಶಿವರಾಜ್ ಕುಮಾರ್ (Shiva Rajkumar) ನಟನೆಯ ಬಹು ತಾರಾಗಣದ ಸಿನಿಮಾ ‘45’ ಚಿತ್ರೀಕರಣ ಅದ್ಧೂರಿಯಾಗಿ ನಡೆಯುತ್ತಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ಶಿವರಾಜ್ ಕುಮಾರ್ ಮಾತ್ರವೇ ಅಲ್ಲದೆ ನಟ ಉಪೇಂದ್ರ, ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಸಹ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಅದ್ಧೂರಿಯಾಗಿ ಅರ್ಜುನ್ ಜನ್ಯ (Arjun Janya) ಚಿತ್ರೀಕರಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಹಾಡೊಂದನ್ನು ಅದ್ಧೂರಿಯಾಗಿ ಅರ್ಜುನ್ ಜನ್ಯ ಸೆರೆಹಿಡಿದಿದ್ದಾರೆ.
ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾ ತಮ್ಮ ಹೆಸರಿನ ಮೂಲಕವೇ ಸಾಕಷ್ಟು ಗಮನ ಸೆಳೆದಿದ್ದು, ಬಹುತಾರಾಗಣದ ಸಿನಿಮಾ ಆಗಿರುವ ಕಾರಣ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಸಿನಿಮಾದ ಚಿತ್ರೀಕರಣ ಬೆಂಗಳೂರು ಸೇರಿದಂತೆ ಇನ್ನೂ ಕೆಲವು ಜಾಗಗಳಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.
ಇತ್ತೀಚಿಗಷ್ಟೆ ಬನ್ನೇರುಘಟ್ಟದ ಶ್ರೀಚಂಪಕಧಾಮ ಸ್ವಾಮಿ ದೇವಸ್ಥಾನದ ಸಿನಿಮಾದ ದೃಶ್ಯವೊಂದರ ಚಿತ್ರೀಕರಣ ನಡೆದಿದೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಜನರು ಈ ದೃಶ್ಯದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ವಿಶೇಷ. ಮೋಕೋಬೋಲ್ಟ್, ರೋಪ್ ಕ್ಯಾಮೆರಾ ಸೇರಿದಂತೆ ಇನ್ನೂ ಹಲವು ದುಬಾರಿ ಸಲಕರಣೆಗಳ ಬಳಸಿ ಈ ದೃಶ್ಯವನ್ನು ಚಿತ್ರಿಸಲಾಗಿದೆ. ಈ ಒಂದು ಸನ್ನಿವೇಶದ ಚಿತ್ರೀಕರಣಕ್ಕಾಗಿ 418 ಕ್ಕೂ ಹೆಚ್ಚು ಕಲರ್ ಬಾಂಬ್ ಗಳನ್ನು ಬಳಸಿರುವುದು ಕನ್ನಡದಲ್ಲಿ ಇದೇ ಮೊದಲು ಎಂದಿದೆ ಚಿತ್ರತಂಡ. ಈ ಅದ್ದೂರಿ ಸನ್ನಿವೇಶಕ್ಕೆ ಭಾರತ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ಅವರು ಕೊರಿಯೋಗ್ರಫಿ ಮಾಡಿರುವುದು ವಿಶೇಷ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಈ ಅದ್ದೂರಿ ಸನ್ನಿವೇಶದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ:ಕ್ಯಾಪ್ಟನ್ ವಿಜಯ್ಕಾಂತ್ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ ಶಿವರಾಜ್ ಕುಮಾರ್ ದಂಪತಿ
“ಗಾಳಿಪಟ 2” ಸೇರಿದಂತೆ ಅನೇಕ ಅದ್ದೂರಿ ಹಾಗೂ ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ರಮೇಶ್ ರೆಡ್ಡಿ ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಸಿನಿಮಾ ಅದ್ಧೂರಿಯಾಗಿ ಮೂಡಿಬರಲು ಬೇಕಾದ ಅಗತ್ಯ ಸೌಕರ್ಯಗಳನ್ನು ನಿರ್ಮಾಪಕರು ಒದಗಿಸಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇನ್ನು ತಮ್ಮ ಸಂಗೀತದಿಂದ ಜನರ ಮನ ಗೆದ್ದಿರುವ ಅರ್ಜುನ್ ಜನ್ಯ ವಹಿಸಿಕೊಂಡಿರುವ ಹೊಸ ಜವಾಬ್ದಾರಿಯನ್ನು ಉತ್ಸಾಹದಿಂದ, ಜಾಗರೂಕತೆಯಿಂದ ನಿಭಾಯಿಸುತ್ತಿದ್ದಾರೆ ಎನ್ನಲಾಗಿದೆ. ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರಂತಹ ಅದ್ಭುತ ಕಲಾವಿದರನ್ನು ಒಂದೇ ಚಿತ್ರದಲ್ಲಿ ನೋಡಲು ಚಿತ್ರಪ್ರೇಮಿಗಳು ಕಾತರರಾಗಿ ಕಾಯುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ