ಅಮೆರಿಕದಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿರುವ ಶಿವರಾಜ್ ಕುಮಾರ್ (Shiva Rajkumar) ಈಗ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ಸೂಚನೆಯಂತೆ ವಿಶ್ರಾಂತಿ ಪಡೆಯುತ್ತಿದ್ದರೂ ಸಹ ಪ್ರತಿದಿನ ಅಭಿಮಾನಿಗಳನ್ನು, ಮಾಧ್ಯಮದವರನ್ನು, ಭೇಟಿ ಮಾಡಲು ಮನೆಗೆ ಬರುತ್ತಿರುವ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು, ಗೆಳೆಯರುಗಳನ್ನು ಭೇಟಿ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಟಿವಿ ರಿಯಾಲಿಟಿ ಶೋಗೂ ಸಹ ಶಿವಣ್ಣ ಹೋಗಿ ಬಂದಿದ್ದರು. ವಿಶ್ರಾಂತಿಯ ಬಳಿಕ ಶಿವಣ್ಣ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂಬುದು ಸಹ ಪ್ರಶ್ನೆಯಾಗಿದೆ.
ಕೆಲ ವರದಿಗಳ ಪ್ರಕಾರ ಶಿವರಾಜ್ ಕುಮಾರ್ ಅವರು ಮೊದಲು ರಾಮ್ ಚರಣ್ ತೇಜ ಜೊತೆಗೆ ನಟಿಸಲಿರುವ ತೆಲುಗು ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರಂತೆ. ಬುಚ್ಚಿಬಾಬು ಸನಾ ನಿರ್ದೇಶನ ಮಾಡಿ ರಾಮ್ ಚರಣ್ ಮತ್ತು ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಟಿಸುತ್ತಿರುವ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಸಿನಿಮಾದ ಚಿತ್ರೀಕರಣ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ಪ್ರಾರಂಭವಾಗಿದೆ. ಈಗಾಗಲೇ ಸಿನಿಮಾದ ಹಲವು ಭಾಗ ಚಿತ್ರೀಕರಣ ಮುಗಿದಿದ್ದು, ಶಿವಣ್ಣನಿಗಾಗಿಯೇ ಚಿತ್ರತಂಡ ಕಾಯುತ್ತಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ
ಶಿವಣ್ಣ ಅಮೆರಿಕಕ್ಕೆ ಹೋಗುವ ಮುಂಚೆಯೇ ರಾಮ್ ಚರಣ್ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಿತ್ತು. ಸಿನಿಮಾದ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿದ್ದು, ಇದೀಗ ಶಿವಣ್ಣನಿಗಾಗಿ ಚಿತ್ರತಂಡ ಕಾಯುತ್ತಿದೆ. ಅಲ್ಲದೆ, ಶಿವಣ್ಣ ಹೆಚ್ಚು ದಿನ ಚಿತ್ರೀಕರಣದಲ್ಲಿ ತೊಡಗುವ ಅಗತ್ಯವೂ ಇಲ್ಲದ ಕಾರಣ, ಈ ಸಿನಿಮಾವನ್ನು ಮೊದಲಿಗೆ ಮುಗಿಸುವ ಉಮೇದಿನಲ್ಲಿದ್ದಾರೆ ಶಿವಣ್ಣ ಎನ್ನಲಾಗುತ್ತಿದೆ.
ಶಿವರಾಜ್ ಕುಮಾರ್ ಅವರ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಶಿವಣ್ಣ ಚಿಕಿತ್ಸೆಗೆ ಹೋಗುವ ಮುಂಚೆಯೇ ಅರ್ಜುನ್ ಜನ್ಯ ನಿರ್ದೇಶಿಸಿ, ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆಯಾಗಿ ನಟಿಸಿರುವ ಸಿನಿಮಾದ ಚಿತ್ರೀಕರಣವನ್ನು ಶಿವಣ್ಣ ಮುಗಿಸಿಕೊಟ್ಟಿದ್ದರು. ಅದರ ಕೆಲ ಪ್ಯಾಚಪ್ ಕೆಲಸ ಬಾಕಿ ಇದೆ ಎನ್ನಲಾಗುತ್ತಿದೆ. ಅದರ ಬಳಿಕ ಹೇಮಂತ್ ರಾವ್ ನಿರ್ದೇಶನದ ‘ಭೈರವನ ಕೊನೆ ಪಾಠ’ ಸಿನಿಮಾದಲ್ಲಿ ಶಿವಣ್ಣ ಪಾಲ್ಗೊಳ್ಳಲಿದ್ದಾರೆ.
ಈ ಸಿನಿಮಾಗಳ ಬಳಿಕ ಶಿವಣ್ಣನ ಎದುರು ಹಲವು ಆಫರ್ಗಳಿವೆ. ‘ಆನಂದ್’, ‘ಘೋಸ್ಟ್ 2’, ‘ಉತ್ತರಕಾಂಡ’ ಇನ್ನೂ ಕೆಲವು ಸಿನಿಮಾಗಳು ಶಿವಣ್ಣನ ಕೈಯಲ್ಲಿದ್ದು ‘ಭೈರವನ ಕೊನೆ ಪಾಠ’ ಸಿನಿಮಾದ ಬಳಿಕ ಹೊಸದೊಂದು ಸಿನಿಮಾ ಪ್ರಾರಂಭ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ