ಶಿವಣ್ಣನ ಸಿನಿಜರ್ನಿಗೆ 38 ವರ್ಷ: 135 ಸಿನಿಮಾಗಳ ಬಳಿಕವೂ ಕಮ್ಮಿಯಾಗದ ಎನರ್ಜಿ

ಶಿವರಾಜ್​ಕುಮಾರ್​ ಅವರ ಮೊದಲ ಸಿನಿಮಾ ‘ಆನಂದ್​’ ಸೆಟ್ಟೇರಿದ್ದು 1986ರ ಫೆ.19ರಂದು. ಅಂದಿನಿಂದ ಇಂದಿನ ತನಕ ಚಿತ್ರರಂಗದಲ್ಲಿ ಶಿವಣ್ಣ ಅವರು ಯಶಸ್ವಿಯಾಗಿ 38 ವರ್ಷಗಳನ್ನು ಪೂರೈಸಿದ್ದಾರೆ. ಅನೇಕರಿಗೆ ಅವರು ಸ್ಫೂರ್ತಿ ಆಗಿದ್ದಾರೆ. ಅವರು 38 ವರ್ಷ ಪೂರೈಸಿದ್ದಕ್ಕೆ ಫ್ಯಾನ್ಸ್​ ಸಂಭ್ರಮಿಸುತ್ತಿದ್ದಾರೆ. ಕಾಮನ್​ ಡಿಪಿ ಹಂಚಿಕೊಳ್ಳುವ ಮೂಲಕ ಅಭಿನಂದನೆ ತಿಳಿಸಲಾಗುತ್ತಿದೆ.

ಶಿವಣ್ಣನ ಸಿನಿಜರ್ನಿಗೆ 38 ವರ್ಷ: 135 ಸಿನಿಮಾಗಳ ಬಳಿಕವೂ ಕಮ್ಮಿಯಾಗದ ಎನರ್ಜಿ
ಶಿವರಾಜ್​ಕುಮಾರ್​

Updated on: Feb 19, 2024 | 1:07 PM

ಅಭಿಮಾನಿಗಳು ಪ್ರೀತಿಯಿಂದ ‘ಕರುನಾಡ ಚಕ್ರವರ್ತಿ’ ಎಂದು ಕರೆಯುವ ಶಿವರಾಜ್​ಕುಮಾರ್ (Shivarajkumar)​ ಅವರಿಗೆ ಫೆಬ್ರವರಿ 19 ಎಂದರೆ ತುಂಬ ವಿಶೇಷ ದಿನ. ಯಾಕೆಂದರೆ, ಮೊದಲ ಬಾರಿ ಹೀರೋ ಆಗಿ ಶಿವರಾಜ್​ಕುಮಾರ್​ ಅವರು ಕ್ಯಾಮೆರಾ ಎದುರು ನಿಂತ ದಿನಾಂಕ ಅದು. ಹೌದು, 1986ರ ಫೆಬ್ರವರಿ 19ರಂದು ಶಿವಣ್ಣನ ಮೊದಲ ಸಿನಿಮಾ ‘ಆನಂದ್​’ (Anand Kannada Movie) ಮುಹೂರ್ತ ನೆರವೇರಿತ್ತು. ಅಂದಿನಿಂದ ಇಂದಿಗೆ ಬಣ್ಣದ ಲೋಕದ ಜರ್ನಿಯಲ್ಲಿ ಅವರು 38 ವರ್ಷಗಳನ್ನು ಪೂರೈಸಿದ್ದಾರೆ. ಇದು ಸಣ್ಣ ಪಯಣವಲ್ಲ. ಇಂದಿಗೂ ಶಿವಣ್ಣ (Shivanna) ಅದೇ ಚಾರ್ಮ್​ ಉಳಿಸಿಕೊಂಡಿದ್ದಾರೆ. ಈ ಸಾಧನೆಗಾಗಿ ಅವರಿಗೆ ಅಭಿಮಾನಿಗಳು ಹಾಗೂ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಕಾಮನ್​ ಡಿಪಿ ವೈರಲ್​ ಆಗಿದೆ.

ಮೇರುನಟ ಡಾ. ರಾಜ್​ಕುಮಾರ್​ ಅವರ ಪುತ್ರನಾಗಿದ್ದರೂ ಕೂಡ ತಮ್ಮದೇ ರೀತಿಯಲ್ಲಿ ಶಿವಣ್ಣ ಗುರುತಿಸಿಕೊಂಡರು. ಮೊದಲ ಮೂರು ಸಿನಿಮಾಗಳ ಮೂಲಕ ಗೆಲುವು ಪಡೆದು ‘ಹ್ಯಾಟ್ರಿಕ್​ ಹೀರೋ’ ಎನಿಸಿಕೊಂಡರು. ಅಂದಿನಿಂದ ಇಂದಿನತನಕ ಶಿವರಾಜ್​ಕುಮಾರ್​ ಅವರು ಹಿಂದಿರುಗಿ ನೋಡಿಲ್ಲ. ನೂರಾರು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ತಮ್ಮ ಪ್ರತಿಭೆ ಏನು ಎಂಬುದನ್ನು ಶಿವಣ್ಣ ಸಾಬೀತುಪಡಿಸಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಅವರೇ ಸಾಟಿ ಎನ್ನಬಹುದು.

ಶಿವರಾಜ್​ಕುಮಾರ್​ ಅವರು 38 ವರ್ಷಗಳ ಈ ಸಿನಿಮಾ ಜರ್ನಿಯಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ‘ಓಂ’, ‘ಜೋಗಿ’, ‘ಜನುಮದ ಜೋಡಿ’, ‘ತವರಿಗೆ ಬಾ ತಂಗಿ’, ‘ಟಗರು’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ‘ನಿಂಗೆ ನಂಬರ್​ಗಳೇ ಲೆಕ್ಕ ಇಲ್ಲಣ್ಣ..’ ಎಂದು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಶಿವಣ್ಣನ ದಿ ಬೆಸ್ಟ್​ ಸಿನಿಮಾಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ತಮ್ಮ ಇಷ್ಟದ ದೃಶ್ಯ, ಹಾಡು, ಡೈಲಾಗ್​ಗಳನ್ನು ಫ್ಯಾನ್ಸ್​ ಮೆಲುಕು ಹಾಕುತ್ತಿದ್ದಾರೆ.

ಈಗ ಶಿವರಾಜ್​ಕುಮಾರ್​ ಅವರಿಗೆ 61 ವರ್ಷ ವಯಸ್ಸು. ಈಗಲೂ ಕೂಡ ಅವರು ಹದಿಹರೆಯದ ಯುವಕನಂತೆ ಎನರ್ಜಿ ಉಳಿಸಿಕೊಂಡಿದ್ದಾರೆ. ಯಾವ ಹೊಸ ಹೀರೋಗೂ ಕಮ್ಮಿ ಇಲ್ಲದಂತೆ ಆ್ಯಕ್ಷನ್​ ದೃಶ್ಯಗಳಲ್ಲಿ ಅವರು ನಟಿಸುತ್ತಾರೆ. ಶಿವಣ್ಣನ ಎನರ್ಜಿ ಬಗ್ಗೆ ಮಾತನಾಡದವರೇ ಇಲ್ಲ. ಎಷ್ಟೋ ಹೀರೋಗಳಿಗೆ ಅವರೇ ಸ್ಫೂರ್ತಿ. ಸಿನಿಮಾ ಕೆಲಸಗಳನ್ನು ಪಟಪಟನೆ ಮುಗಿಸುವ ಮೂಲಕ ಅವರು ಆ್ಯಕ್ಟೀವ್​ ಆಗಿದ್ದಾರೆ. ಅನೇಕ ಸಮಾಜಮುಖಿ ಕೆಲಸಗಳ ಮೂಲಕವೂ ಜನರ ಹೃದಯ ಗೆದ್ದಿದ್ದಾರೆ. ಹಲವು ಪ್ರಾಜೆಕ್ಟ್​ಗಳಲ್ಲಿ ಶಿವರಾಜ್​ಕುಮಾರ್​ ಬ್ಯುಸಿ ಆಗಿದ್ದಾರೆ. ಅವರ ಜೊತೆ ಸಿನಿಮಾ ಮಾಡಬೇಕು ಎಂದು ಅನೇಕ ನಿರ್ಮಾಪಕರು, ನಿರ್ದೇಶಕರು ಸಾಲುಗಟ್ಟಿ ನಿಂತಿದ್ದಾರೆ. 135ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅವರು ಮುನ್ನುಗ್ಗುತ್ತಿದ್ದಾರೆ. ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇದನ್ನೂ ಓದಿ: ಶಿವರಾಜ್ ಕುಮಾರ್-ರಾಮ್ ಚರಣ್ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ

ಕನ್ನಡ ಮಾತ್ರವಲ್ಲದೇ, ಪರಭಾಷೆಯಲ್ಲೂ ಶಿವರಾಜ್​ಕುಮಾರ್​ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. 2023ರಲ್ಲಿ ತೆರೆಕಂಡ ರಜನಿಕಾಂತ್​ ನಟನೆಯ ತಮಿಳಿನ ‘ಜೈಲರ್​’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಮಾಡಿದ ನರಸಿಂಹ ಎಂಬ ಪಾತ್ರ ಸಖತ್​ ಕ್ರೇಜ್​ ಸೃಷ್ಟಿಸಿತು. 2024ರ ಜನವರಿ 12ರಂದು ಬಿಡುಗಡೆಯಾದ ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದಲ್ಲಿ ಧನುಷ್​ ಜೊತೆ ಶಿವರಾಜ್​ಕುಮಾರ್​ ಅವರು ತೆರೆ ಹಂಚಿಕೊಂಡರು. ಪರಭಾಷೆಯಿಂದ ಅವರಿಗೆ ಹಲವು ಆಫರ್​ಗಳು ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us