
ಸ್ಯಾಂಡಲ್‌ವುಡ್ ಬ್ಯುಸಿ ನಟ, ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ (Shivarajkumar) ಅಭಿನಯದ ಬಹುನಿರೀಕ್ಷಿತ ‘ಡ್ಯಾಡ್’ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಈ ವಿಷಯವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಭಾವುಕ ಪೋಸ್ಟ್ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ.
‘ಪ್ರತಿ ಆ್ಯಕ್ಷನ್ ಕಟ್ ಹಿಂದೆಯೂ ಒಂದು ಕನಸಿತ್ತು. ಇಂದಿಗೆ ಚಿತ್ರದ ಶೂಟಿಂಗ್ ಮುಗಿದಿದೆ, ಆದರೆ ಈ ಜರ್ನಿ ನನ್ನ ಹೃದಯದಲ್ಲಿ ಸದಾ ಇರಲಿದೆ. ಲೆಜೆಂಡರಿ ನಟ ಶಿವಣ್ಣ ಅವರಿಗೆ ಆ್ಯಕ್ಷನ್ ಕಟ್ ಹೇಳಿದ್ದು ನನ್ನ ಸೌಭಾಗ್ಯ’ ಎಂದು ನಿರ್ದೇಶಕ ಅನಿಲ್ ಕನ್ನೆಗಂಟಿ ಕೃತಜ್ಞತೆ ಸಲ್ಲಿಸಿದ್ದಾರೆ. ಕ್ಯಾಮೆರಾಗಳು ಆಫ್ ಆಗಿದ್ದರೂ ‘ಡ್ಯಾಡ್’ ಸಿನಿಮಾದ ಅಸಲಿ ಹಾರ್ಟ್‌ಬೀಟ್ ಈಗಷ್ಟೇ ಶುರುವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಹಲವು ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಶಿವಣ್ಣ ಈ ಸಿನಿಮಾದಲ್ಲಿ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಅತಿ ದೊಡ್ಡ ಹೈಲೈಟ್. ಮೈಸೂರಿನ ನಂದಿ ವಿಗ್ರಹದ ಎದುರು ಈ ಚಿತ್ರಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿತ್ತು. ವಿಶೇಷವೆಂದರೆ, 32 ವರ್ಷಗಳ ಹಿಂದೆ ಶಿವಣ್ಣ ಅಭಿನಯದ ಸೂಪರ್ ಹಿಟ್ ‘ಜಗ ಮೆಚ್ಚಿದ ಹುಡುಗ’ ಚಿತ್ರ ಸಹ ಇದೇ ಜಾಗದಲ್ಲಿ ಮುಹೂರ್ತ ಕಂಡಿತ್ತು. ಈಗ ಅದೇ ಇತಿಹಾಸ ಮರುಕಳಿಸುವ ಮುನ್ಸೂಚನೆ ಸಿಕ್ಕಿದೆ.
ಇದನ್ನೂ ಓದಿ: ಮುದ್ದಾದ ಹೆಣ್ಣು ಮಗುವಿಗೆ ನಾಮಕರಣ ಮಾಡಿದ ಶಿವರಾಜ್‌ಕುಮಾರ್
ಕನ್ನಡ ಸೇರಿದಂತೆ ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಬಿಗ್ ಬಜೆಟ್ ಸಿನಿಮಾ ಮೂಡಿಬರುತ್ತಿದೆ. ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರಾ, ಬಾಬು ಹಾಗೂ ಮಲಯಾಳಂನ ಖ್ಯಾತ ನಟ ಸೂರಜ್ ವೆಂಜರಮೂಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹರೀಶ್ ಪೆದ್ದಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿ.ಎಸ್. ಸುಧೀಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಹಾಗೂ ಬಿ. ರಾಜಶೇಖರ್ ಅವರ ಛಾಯಾಗ್ರಹಣವಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:43 pm, Wed, 1 July 26