ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ಸಕ್ಸಸ್ ಕಾಣದೇ ಇರಬಹುದು. ಆದರೆ ಬೇರೆ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆ ಆದಾಗ ಜನಮೆಚ್ಚುಗೆ ಪಡೆಯುತ್ತವೆ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಕನ್ನಡದ ‘ಶೋಷಿತೆ’ ಸಿನಿಮಾ. ಕಳೆದ ವರ್ಷ ತೆರೆಕಂಡ ಈ ಸಿನಿಮಾಗೆ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿತ್ತು. ನೋಡಿದ ಪ್ರೇಕ್ಷಕರು ಕೂಡ ಹೊಗಳಿದ್ದರು. ಆದರೆ ಉತ್ತಮ ಕಲೆಕ್ಷನ್ ಮಾಡಲು ಸಾಧ್ಯವಾಗಿರಲಿಲ್ಲ. ವಿಶೇಷ ಏನೆಂದರೆ, ಈ ಸಿನಿಮಾ ಈಗ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗಿಗೂ ಡಬ್ ಆಗಿ ಮಿಲಿಯನ್ಗಟ್ಟಲೆ ವೀಕ್ಷಣೆ ಕಾಣುತ್ತಿದೆ.
ಟೆಕ್ಕಿ ಶಶಿಧರ್ ಅವರು ‘ಶೋಷಿತೆ’ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಹಾಗೂ ಸಂಕಲನ ಮಾಡಿದ್ದಾರೆ. ‘ಎ ನೇಚರ್ ವ್ಯೂ ಔಟ್‌ಡೋರ್ ಕಾರ್ನಿವಲ್ ಪ್ರೊಡಕ್ಷನ್’ ಮೂಲಕ ಶಿರಿಷಾ ಆಳ್ಳ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾವನ್ನು ಒಟಿಟಿಗೆ ನೀಡಬೇಕು ಎಂದು ನಿರ್ದೇಶಕರು 8 ತಿಂಗಳಿಗೂ ಹೆಚ್ಚು ಕಾಲ ಪ್ರಯತ್ನಿಸಿದ್ದರು. ಅಮೆಜಾನ್ ಪ್ರೈಂ ವಿಡಿಯೋ, ನೆಟ್‌ಫ್ಲಿಕ್ಸ್ ಮುಂತಾದ ಒಟಿಟಿ ಸಂಸ್ಥೆಗಳನ್ನು ಸಂಪರ್ಕಿಸಿದ್ದರು. ಆದರೆ ಸೂಕ್ತ ಸ್ಪಂದನೆ ಸಿಗಲಿಲ್ಲ. ಆಗ ಚಿತ್ರತಂಡಕ್ಕೆ ಕಾಣಿಸಿದ್ದೇ ಯೂಟ್ಯೂಬ್ ದಾರಿ.
ಕನ್ನಡ ಸಿನಿಮಾ ಎಂಬ ಕಾರಣಕ್ಕೆ ಟಾಪ್ ಒಟಿಟಿ ಸಂಸ್ಥೆಗಳು ‘ಶೋಷಿತೆ’ ಚಿತ್ರವನ್ನು ಖರೀದಿ ಮಾಡಲಿಲ್ಲವಂತೆ. ಕಥಾವಸ್ತು ಉತ್ತಮವಾಗಿ ಇರುವುದರಿಂದ ಖಂಡಿತವಾಗಿ ಪ್ರೇಕ್ಷಕರು ನೋಡುತ್ತಾರೆ ಎಂಬ ಭರವಸೆ ಚಿತ್ರತಂಡಕ್ಕೆ ಇತ್ತು. ಹಾಗಾಗಿ ‘ಶ್ರೀಮತಿ’ ಎಂಬ ಶೀರ್ಷಿಕೆಯಲ್ಲಿ ತೆಲುಗು ಭಾಷೆಗೆ ಈ ಸಿನಿಮಾವನ್ನು ಡಬ್ ಮಾಡಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಯಿತು. ಕೆಲವೇ ದಿನಗಳಲ್ಲಿ ಈ ಸಿನಿಮಾ 2.4 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಕಂಡಿರುವುದು ವಿಶೇಷ.
ಇದನ್ನೂ ಓದಿ: ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಯೂಟ್ಯೂಬ್‌ನಲ್ಲಿ ‘ಶ್ರೀಮತಿ’ ಸಿನಿಮಾವನ್ನು ನೋಡಿ ಮೆಚ್ಚಿಕೊಂಡ ಅನೇಕರು ಟಿಕೆಟ್ ದರವನ್ನು ಚಿತ್ರತಂಡಕ್ಕೆ ಪಾವತಿ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಕನ್ನಡದ ‘ಶೋಷಿತೆ’ ಕೂಡ ರಿಲೀಸ್ ಆಗಿದ್ದು, ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಯಾವುದೇ ಸ್ಟಾರ್ ಕಲಾವಿದರು ಇಲ್ಲದೇ ಇದ್ದರೂ ಕೂಡ ಜನರು ಈ ಸಿನಿಮಾಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದು ಚಿತ್ರತಂಡಕ್ಕೆ ಖುಷಿ ನೀಡಿದೆ.
ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗೆ ಡಬ್ ಮಾಡುವ ಆಲೋಚನೆ ಕೂಡ ಚಿತ್ರತಂಡಕ್ಕೆ ಇದೆ. ಮಧ್ಯಮ ವರ್ಗದ ಗೃಹಿಣಿಯೊಬ್ಬಳ ಹೋರಾಟದ ಕಥೆ ಈ ಸಿನಿಮಾದಲ್ಲಿ ಇದೆ. ನಟಿ, ನಿರೂಪಕಿ ಡಾ. ಜಾನ್ವಿ ರಾಯಲ ಅವರು ‘ಶೋಷಿತೆ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ರೂಪ ರಾಯಪ್ಪ, ವೆಂಕ್ಷ, ದರ್ಶನ್, ಪ್ರಶಾಂತ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಅವಧಿ ಒಂದು ಗಂಟೆ ನಲವತ್ತೆರಡು ನಿಮಿಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.