ಕಾರವಾರ: ಉತ್ತರ ಕನ್ನಡ ಮೂಲದ ಸಾಫ್ಟ್‌ವೇರ್ ಇಂಜಿನಿಯರೊಬ್ಬರ ಕನ್ನಡ ರ‍್ಯಾಪ್ ಗೀತೆಯೊಂದು ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಯಾರದ್ದೇ ಸ್ಟೇಟಸ್ ನೋಡಿದರೂ ‘ಶೈನ್ ಲೈಕ್ ಅ ರೇನ್ಬೋ’ ಹಾಡು ಕೇಳುತಿದೆ. ಕಾರವಾರ ತಾಲೂಕಿನ ಗುನಗಿವಾಡದ ಶ್ರೀಗಣೇಶ್ ಗುನಗಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರ‍್ಯಾಪ್ ಹಾಡುಗಳನ್ನು ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಈಗಾಗಲೇ ನಾಲ್ಕು ಹಾಡುಗಳನ್ನು ಬರೆದು ತಮ್ಮ ‘ಶ್ರೀ’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿವೆ. ಐದನೇ ರ‍್ಯಾಪ್ ಸಾಂಗ್ ‘ಶೈನ್ ಲೈಕ್ ಅ ರೈನ್ಬೋ’ವಂತೂ ಜಿಲ್ಲೆಯಲ್ಲಿ ಇದೀಗ ಭಾರೀ ಶೈನ್ ಆಗುತ್ತಲಿದೆ.
ಕಾರವಾರದಲ್ಲಿ ಪ್ರೌಢ ಶಿಕ್ಷಣ, ಮುರುಡೇಶ್ವರದಲ್ಲಿ ಡಿಪ್ಲೊಮಾ ಹಾಗೂ ತುಮಕೂರಿನ ಸಿದ್ಧಗಂಗಾದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀ, ವಿದ್ಯಾಭ್ಯಾಸದ ಜೊತೆಗೆ ಬಾಲ್ಯದಿಂದಲೂ ನೃತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇತ್ತೀಚಿನ ಕೆಲ ವರ್ಷಗಳವರೆಗೂ ಅನೇಕ ಮನೋರಂಜನಾ ಕಾರ್ಯಕ್ರಮಗಳಲ್ಲಿ ತನ್ಮ ತಂಡದೊಂದಿಗೆ ಡ್ಯಾನ್ಸ್ ಶೋಗಳನ್ನೂ ಅವರು ನೀಡಿದ್ದಾರೆ. ಇದರ ಜೊತೆಗೆ ರ‍್ಯಾಪ್ ಸಾಂಗ್ ನಲ್ಲಿ ಆಸಕ್ತಿ ಬೆಳೆದು ಇದೀಗ ಐದು ಹಾಡುಗಳನ್ನು ಕೇಳುಗರಿಗೆ ನೀಡಿದ್ದಾರೆ.
‘ಶೈನ್ ಲೈಕ್ ಅ ರೈನ್ಬೋ’ ಹಾಡಿನಲ್ಲಿ ನಟಿಸಿರುವ ಶ್ರೀಗಣೇಶ್, ಖುದ್ದು ತಾವೇ ಸಾಹಿತ್ಯ ಬರೆದು ಹಾಡಿ, ನಿರ್ಮಾಣ ಮಾಡಿದ್ದಾರೆ. ಕಾರವಾರದ ಕೋಡಿಬಾಗದ ಅಭಿಜಿತ್ ನಾಯ್ಕ್ ತಮ್ಮ ‘ಮೈನ್ಸ್ ಟೆಲ್ಲರ್’ ಬ್ಯಾನರ್ ಅಡಿ ಈ ಹಾಡಿಗೆ ಬೀಟ್ ಪ್ರೊಡ್ಯೂಸ್ ಮಾಡಿದ್ದು, ಲಿಯೋನ್ ಪೆರೈರಾ ಛಾಯಾಗ್ರಹಣದಲ್ಲಿ ಹಾಗೂ ಅಕ್ಷಯ್, ಆದಿತ್ಯಾ, ಪ್ರಜತ್, ಕಾರ್ತಿಕ್ ಸಹಕರಿಸಿದ್ದಾರೆ.
‘ಈವರೆಗೆ ನಾಲ್ಕು ಹಾಡುಗಳನ್ನು ಬಿಡುಗಡೆ ಮಾಡಿ, ಐದನೇ ಹಾಡನ್ನು ಈಗ ಬಿಡುಗಡೆಗೊಳಿಸಿದ್ದೇವೆ. ನನಗೆ ರ‍್ಯಾಪ್ ಗೀತೆಗಳೆಂದರೆ ಎಲ್ಲಿಲ್ಲದ ಆಸಕ್ತಿ. ಬೆಂಗಳೂರಿನಲ್ಲಿದ್ದಾಗ ನನ್ನ ರೂಮ್ ಮೇಟ್ ಕೂಡ ಬೀಟ್ ಪ್ರೊಡ್ಯೂಸರ್ ಆಗಿದ್ದರಿಂದ ಈ ಆಸಕ್ತಿ ಇನ್ನಷ್ಟು ಹೆಚ್ಚಾಗಿತ್ತು. ಹೀಗಾಗಿ ಮೂರು ವರ್ಷದ ಹಿಂದೆ ಈ ಕ್ಷೇತ್ರಕ್ಕೆ ಕಾಲಿಟ್ಟೆ. ಯೂಟ್ಯೂಬ್ ನೋಡಿ ಹೇಗೆ ಹಾಡು ಬರೆಯಬೇಕು, ಹಾಡಬೇಕು ಹಾಗೂ ಅದನ್ನು ಕೇಳುಗರ ಮುಂದಿಡಬೇಕೆಂಬ ಬಗ್ಗೆ ಅಧ್ಯಯನ ನಡೆಸಿ ನನ್ನ ಹಾಡುಗಳನ್ನು ರಚಿಸಿದ್ದೇನೆ ಎನ್ನುತ್ತಾರೆ ಶ್ರೀ.
‘‘ನನಗೆ ಕೆಟ್ಟ ಕೆಟ್ಟ ಪದಗಳ, ಬೈಗುಳಗಳ ರ‍್ಯಾಪ್ ಮಾಡಲು ಆಸಕ್ತಿ ಇಲ್ಲ. ನನ್ನ ಹಾಡಿನಲ್ಲಿ ಸಾಮಾಜಿಕ ಕಳಕಳಿ ಇರಬೇಕು. ಮಾಹಿತಿಪೂರ್ಣ ಹಾಗೂ ಜನರಿಗೆ ಉಪಯೋಗವಾಗುವಂಥದ್ದಾಗಿರಬೇಕೆಂಬ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇನೆ. ಬೈಗುಳದ ರ‍್ಯಾಪ್ ಗಳು ಕೇಳುಗರಿಗೆ ಕ್ಷಣಿಕ ಸುಖ ನೀಡಬಹುದು, ಆದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲ’’ ಎನ್ನುತ್ತಾರೆ ಅವರು.
ಎಂಜಿನಿಯರಿಂಗ್ ಮುಗಿದ ಬಳಿಕ ಆರಾಮವಾಗಿ ಕೆಲಸ ಸಿಗುತ್ತದೆ ಎಂಬ ಯೋಚನೆ ಎಲ್ಲರ ತಲೆಯಲ್ಲಿ ಸಹಜವಾಗಿರುತ್ತೆ. ಆದರೆ ಎಂಜಿನಿಯರಿಂಗ್ ಮುಗಿದ ಬಳಿಕವೇ ಇರುವುದು ಹೋರಾಟ. ಕೆಲಸ ಕೇಳಿ ಬೆಂಗಳೂರಿನಲ್ಲಿ ಕಂಪನಿಯಿಂದ ಕಂಪನಿಗೆ ಅಲೆದಾಡಬೇಕು. ಇದನ್ನೇ ವಸ್ತುವನ್ನಾಗಿಟ್ಟುಕೊಂಡು ಕೂಡ ಈ ಹಿಂದೆ ಒಂದು ರ‍್ಯಾಪ್ ಬಿಡುಗಡೆ ಮಾಡಿದ್ದೆ ಎಂದೂ ಅವರು ತಿಳಿಸಿದ್ದಾರೆ.
‘ಶೈನ್ ಲೈಕ್ ಎ ರೈನ್ಬೋ’ ಹಾಡು ಇಲ್ಲಿದೆ:
ಬೆಂಗಳೂರಿನಂಥ ಮಹಾನಗರಗಳಲ್ಲಿ ಸಿದ್ಧವಾಗುತ್ತಿದ್ದ ರ‍್ಯಾಪ್ ಹಾಡುಗಳು ಇತ್ತೀಚಿಗೆ ಉತ್ತರ ಕನ್ನಡ, ಕಾರವಾರದಂಥ ಸಣ್ಣ ಪಟ್ಟಣಗಳಿಗೂ ವ್ಯಾಪಿಸಿರುವುದು ಖುಷಿಯ ವಿಚಾರ. ಆದರೆ ರ್ಯಾಪರ್ ಗಳು ಶ್ರೀಗಣೇಶ್ ಅವರಂತೆ ಯೋಚಿಸಿ ಹಾಡು ರಚಿಸಿದರೆ ಅದು ಕೇಳುಗರಿಗೆ ಮುದ ನೀಡಬಲ್ಲದು ಎಂಬುದು ಕೂಡ ಇಲ್ಲಿ ಸತ್ಯ.
ವರದಿ: ದೇವರಾಜ್ ನಾಯ್ಕ್
ಇದನ್ನೂ ಓದಿ:
ಡಿಸೆಂಬರ್ ಪೂರ್ತಿ ಮನರಂಜನೆಯ ಸುಗ್ಗಿ; ಪ್ರತಿ ವಾರವೂ ಬಿಗ್ ರಿಲೀಸ್: ಇಲ್ಲಿದೆ ಪೂರ್ತಿ ಲಿಸ್ಟ್
ಕಮಲ್ ಹಾಸನ್ ಈಗ ಎಲ್ಲಿದ್ದಾರೆ?; ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾದ ವೈರಲ್ ಫೋಟೋದ ಅಸಲಿಯತ್ತೇನು?