ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ವಿವಾಹ ಬಂಧಕ್ಕೆ ಒಳಪಟ್ಟಿದ್ದಾರೆ. ಹಿಂದೂ ಸಂಪ್ರದಾಯದಂತೆ ಇವರಿಬ್ಬರ ವಿವಾಹ ನೆರವೇರಿದೆ. ಆಗಸ್ಟ್ 11 ರಂದು ಬೆಳಿಗ್ಗೆ 10:50 ರಿಂದ 11:30 ರ ವರೆಗೆ ಮುಹೂರ್ತವನ್ನು ನಿಗದಿಪಡಿಸಲಾಗಿತ್ತು, ಅಂತೆಯೇ ಇದೆ ಶುಭ ಮುಹೂರ್ತದಲ್ಲಿ ಕುಟುಂಬದವರು, ಬಂಧುಗಳು, ಗುರು-ಹಿರಿಯರ ಸಮ್ಮುಖದಲ್ಲಿ, ಮಂಗಳವಾದ್ಯದ ಮೇಳ, ಮಂತ್ರ ಘೋಷಣೆಗಳ ನಡುವೆ ತರುಣ್ ಅವರು ಸೋನಲ್ ಅವರಿಗೆ ಮಾಂಗಲ್ಯಧಾರಣೆ ಮಾಡಿದರು.
ಮುಹೂರ್ತಕ್ಕೆ ಮದುವೆ ಮಂಟಪವನ್ನು ವಿಶೇಷವಾಗಿ ಅಲಂಕರಿಸಿ ಸಿದ್ಧಪಡಿಸಲಾಗಿತ್ತು. ದಕ್ಷಿಣ ಭಾರತದ ದೇವಾಲಯಗಳಿಂದ ಸ್ಪೂರ್ತಿ ಪಡೆದಂಥಹಾ ವಿನ್ಯಾಸದಲ್ಲಿ ಮಂಟಪವನ್ನು, ಪ್ರವೇಶದ್ವಾರವನ್ನು ಅಲಂಕರಿಸಲಾಗಿತ್ತು. ಪ್ರವೇಶ ದ್ವಾರದಲ್ಲಿ ಮಹಾದ್ವಾರದ ಮಾದರಿ ವಿನ್ಯಾಸ ಮಾಡಲಾಗಿತ್ತು. ವಿಷ್ಣುವಿನ ದಶಾವತಾರಗಳ ಮಧ್ಯೆ, ಕಮಲ ಮಂಟಪದ ರೀತಿ ಮುಖ್ಯ ಮಂಟಪವನ್ನು ಸಿದ್ಧ ಪಡಿಸಲಾಗಿತ್ತು. ಮಂಟಪ, ಪ್ರವೇಶ ದ್ವಾರದ ಅಲಂಕಾರ ಗಮನ ಸೆಳೆಯುವಂತಿತ್ತು.
ತರುಣ್ ಹಾಗೂ ಸೋನಲ್ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಕಳೆದ ಕೆಲ ತಿಂಗಳಿನಿಂದ ಈಚೆಗೆ ಈ ಇಬ್ಬರ ನಡುವಿನ ಪ್ರೇಮ ಸಂಬಂಧ ಹೊರಬಿದ್ದಿತ್ತು. ಇಬ್ಬರೂ ಸಹ ತಮ್ಮ ಕುಟುಂಬದವರನ್ನು ಒಪ್ಪಿಸಿ ಇದೀಗ ಎಲ್ಲ ಗೆಳೆಯರು, ಆತ್ಮೀಯರನ್ನು ಕರೆದು ಅದ್ಧೂರಿಯಾಗಿ ವಿವಾಹವಾಗುತ್ತಿದ್ದಾರೆ. ಬೆಂಗಳೂರಿನ ಕೆಂಗೆರೆ ಬಳಿ ಇರೋ ಪೂರ್ಣಿಮಾ ಪ್ಯಾಲೇಸ್ನಲ್ಲಿ ಇವರ ಅದ್ಧೂರಿ ಮದುವೆ ನೆರವೇರಿದೆ.
ಆಗಸ್ಟ್ 10 ರಂದು ರಾತ್ರಿ ತರುಣ್ ಹಾಗೂ ಸೋನಲ್ರ ಆರತಕ್ಷತೆ ಅದ್ಧೂರಿಯಾಗಿ ನೆರವೇರಿದೆ. ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಯೋಗರಾಜ್ ಭಟ್, ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ, ಹಂಸಲೇಖ, ಪ್ರೇಮ್, ಶರಣ್ ಹಲವಾರು ಮಂದಿ ಸಿನಿಮಾ ಹಾಗೂ ಟಿವಿ ತಾರೆಯರು ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಯಶ್, ಸುದೀಪ್ ಇನ್ನೂ ಹಲವರಿಗೆ ತರುಣ್ ಆಹ್ವಾನ ನೀಡಿದ್ದರು.
ಇದನ್ನೂ ಓದಿ:ಹೇಗಿರಲಿದೆ ತರುಣ್ ಸುಧೀರ್-ಸೋನಲ್ ವಿವಾಹ? ಮಾಹಿತಿ ಕೊಟ್ಟ ಸ್ಯಾಂಡಲ್ವುಡ್ ಜೋಡಿ
ತರುಣ್ ಸುಧೀರ್ ಮೂಲತಃ ಉತ್ತರ ಕರ್ನಾಟಕದ ಕುಟುಂಬದವರಾದರೂ ದಶಕಗಳಿಂದಲೂ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಇನ್ನು ನಟಿ ಸೋನಲ್ ಮಂಗಳೂರಿನವರು. ಇವರಿಬ್ಬರೂ ಕಳೆದ ಕೆಲ ವರ್ಷಗಳಿಂದಲೂ ಪ್ರೀತಿಯಲ್ಲಿದ್ದಾರೆ. ತರುಣ್ ನಿರ್ದೇಶನ ಮಾಡಿದ್ದ ‘ರಾಬರ್ಟ್’ ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ತುಳು ಸಿನಿಮಾ ಮೂಲಕ ನಟನೆ ಆರಂಭಿಸಿದ ಸೋನಲ್, ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಟ್ಟರು ನಿರ್ದೇಶನ ಮಾಡಿರುವ ‘ಪಂಚತಂತ್ರ’, ‘ಗರಡಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ‘ಬುದ್ಧಿವಂತ 2’ ಹಾಗೂ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ