
ಗಂಗಾರತಿ ಮಾದರಿಯಲ್ಲಿಯೇ ಕಾವೇರಿ ಆರತಿ (cauvery arthi) ಮಾಡಲು ರಾಜ್ಯ ಸರ್ಕಾರ (State Government) ಮುಂದಾಗಿದೆ. ಕರ್ನಾಟಕ ಜಲ ಸಂಪನ್ಮೂಲ ಇಲಾಖೆ ಮುಂದಾಳತ್ವದಲ್ಲಿ ಕಾವೇರಿ ಆರತಿ ನಡೆಯಲಿದ್ದು, ಕಾವೇರಿ ಹಿರಿಮೆಯನ್ನು ದೇಶ-ವಿದೇಶಗಳಲ್ಲಿ ಸಾರಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲೆಂದು ಕಾವೇರಿ ಆರತಿ ಕಾರ್ಯಕ್ರಮ ನಡೆಸಲು ಸರ್ಕಾರ ಮುಂದಾಗಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದು, ಕಾವೇರಿ ಆರತಿ ಕಾರ್ಯಕ್ರಮಕ್ಕೆ ಥೀಮ್ ಸಾಂಗ್ ಒಂದನ್ನು ಮಾಡಿಕೊಡುವಂತೆ ಕನ್ನಡ ಚಿತ್ರರಂಗದ ಪ್ರಮುಖರಿಗೆ ಈಗಾಗಲೇ ಮನವಿ ಮಾಡಿದ್ದರು.
ಡಿಕೆ ಶಿವಕುಮಾರ್ ಮನವಿ ಪ್ರಯುಕ್ತ ಇಂದು (ಮೇ 24) ಕನ್ನಡ ಚಿತ್ರರಂಗದ ಪ್ರಮುಖ ಸಂಗೀತ ನಿರ್ದೇಶಕರುಗಳಾದ ಹಂಸಲೇಖ, ಅರ್ಜುನ್ ಜನ್ಯ ಮತ್ತು ಕಾಂಗ್ರೆಸ್ ಮುಖಂಡರು ಚಲನಚಿತ್ರ ಅಕಾಡೆಮಿ ಅಧ್ಯಕ್ಷರೂ ಆಗಿರುವ ಸಾಧುಕೋಕಿಲ ಅವರುಗಳ ಸಭೆ ನಡೆಸಲಾಯ್ತು. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು, ಕಾವೇರಿ ಆರತಿ ಕಾರ್ಯಕ್ರಮದ ಆಯೋಜಕ ಜವಾಬ್ದಾರಿ ಹೊತ್ತಿರುವವರು, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌದ, ಎಂಎಲ್‌ಸಿ ದಿನೇಶ್ ಗೂಳಿಗೌಡ ಭಾಗಿ ಆಗಿದ್ದರು. ಸಭೆಯಲ್ಲಿ ಹಾಡಿನ ರೂಪು ರೇಷೆ, ಸಂಗೀತ ಮಾದರಿ, ಡೆಡ್ಲೈನ್, ಚಿತ್ರೀಕರಣ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.
ಕಾವೇರಿ ಆರತಿಯನ್ನು ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಾತ್ಮಕವಾಗಿ ಶ್ರೀಮಂತಗೊಳಿಸುವ ಉದ್ದೇಶ ಹೊಂದಿರುವ ಕಾರಣ,
ಜಾನಪದ ಸೊಬಗು, ಧಾರ್ಮಿಕತೆಯ ಮೆರಗು ಹಾಗೂ ಭಕ್ತಿ ಭಾವದಿಂದ ಕೂಡಿರುವ ಥೀಮ್ ಹಾಡೊಂದನ್ನು ರಚಿಸುವ ಅಗತ್ಯವಿದೆ ಎಂದು ನಿನ್ನೆ ಬೆಂಗಳೂರು ಜಲಮಂಡಳಿ ಮತ್ತು ಕಾವೇರಿ ಆರತಿ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು, ಸಾಹಿತ್ಯ ರಚನೆಕಾರರು ಮುಂದೆ ಬಂದು ಹಾಡು ಮಾಡಿಕೊಡಬೇಕು ಎಂದು ಡಿಕೆಶಿ ಕೋರಿದ್ದರು.
ಇದನ್ನೂ ಓದಿ:ಸ್ಯಾಂಕಿ ಕೆರೆಯಲ್ಲಿ ‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಜ್ಞಾವಿಧಿ
‘ಬದಲಾದ ಕಾಲಘಟ್ಟಕ್ಕೆ ಹೊಂದಿಕೊಳ್ಳುವಂತೆ, ವರ್ಣರಂಜಿತವಾಗಿ ಗೀತೆ ಮೂಡಿಬರಬೇಕು, ಈ ಗೀತೆಯು ಕಾವೇರಿ ಮಾತೆಯ ಸಂಪೂರ್ಣ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತಿರಬೇಕು.ಕಾವೇರಿ ಮಾತೆಯ ಪರಂಪರೆಯನ್ನು ಉಳಿಸುವುದರ ಜೊತೆಗೆ, ಜಲ ಶ್ರೀಮಂತಿಕೆ ಸಹಿತ ಕಾವೇರಿ ವೈಭವವನ್ನು ದೇಶ ವಿದೇಶಗಳಿಗೆ ಹಾಡು ಮತ್ತು ಸಂಗೀತದ ಮೂಲಕ ಸಾರುವ ಹಾಗೂ ಆರತಿಯ ಮಹಿಮೆಯನ್ನು ಮೇಳೈಸುವ ಅದ್ಭುತವಾದ ಸಾಹಿತ್ಯ ಮತ್ತು ಗೀತ ಸಂಯೋಜನೆ ಆಗಬೇಕಿದೆ’ ಎಂದು ಡಿಕೆ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದರು.
ರಚನೆಯಾದ ಈ ಗೀತೆಯನ್ನು ಧ್ವನಿ ಸುರಳಿ ರೂಪದಲ್ಲಿ ತಂದು, ಕಾವೇರಿ ಆರತಿ ವೇಳೆ ಬರುವ ಭಕ್ತಾದಿಗಳಿಗೆ ಕಣ್ಣು ತುಂಬಿಕೊಳ್ಳುವಂತೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಕಾವೇರಿಯ ಮೆರುಗನ್ನು ಹೆಚ್ಚಿಸಲು ಕಾವೇರಿ ಮಾತೆ ಹಾಗೂ ಕಾವೇರಿ ಆರತಿಗೆ ಸಂಬಂಧಿಸಿದಂತೆ ಗೀತ ರಚನೆ ಮಾಡುವಂತೆ ಮನವಿ ಆಯ್ಕೆಯಾದ ಗೀತೆಯನ್ನು ಕಾವೇರಿ ಆರತಿ ಸಂದರ್ಭದಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ