ಕಸ ನಿರ್ವಹಣೆಯಲ್ಲಿ ಲೋಪ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಿಂದ ರಾಜ್ಯ ಸರ್ಕಾರಕ್ಕೆ ತರಾಟೆ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕರ್ನಾಟಕ ಸರ್ಕಾರದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿನ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದೆ. ರಾಜ್ಯದಲ್ಲಿ ದಿನನಿತ್ಯ ಉತ್ಪಾದನೆಯಾಗುವ ಕಸದಲ್ಲಿ ಗಣನೀಯ ಪ್ರಮಾಣ ಸಂಸ್ಕರಣೆಯಾಗದೆ ಉಳಿದಿರುವುದು ಮತ್ತು ಇದರಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿರುವುದನ್ನು ಎನ್‌ಜಿಟಿ ಗಮನಿಸಿದೆ. ತ್ಯಾಜ್ಯ ನಿರ್ವಹಣೆ ಸುಧಾರಿಸಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಮತ್ತು ಹೊಸ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಎನ್‌ಜಿಟಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಬೆಂಗಳೂರಿನಲ್ಲಿನ ಗಂಭೀರ ಪರಿಸ್ಥಿತಿಯ ಬಗ್ಗೆಯೂ ಎನ್‌ಜಿಟಿ ತೀವ್ರ ಆತಂಕ ವ್ಯಕ್ತಪಡಿಸಿದೆ.

ನವದೆಹಲಿ/ಬೆಂಗಳೂರು, ಏಪ್ರಿಲ್ 17: ತ್ಯಾಜ್ಯ ನಿರ್ವಹಣೆಯಲ್ಲಿ (Waste management) ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ದೆಹಲಿಯಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT) ಪ್ರಧಾನ ಪೀಠವು ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ತ್ಯಾಜ್ಯ ನಿರ್ವಹಣೆಯ ಕುರಿತು ಹೊಸದಾಗಿ ತೆಗೆದುಕೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ (Karnataka Government) ನಿರ್ದೇಶನ ನೀಡಿದೆ.
ಖಾಸಗಿ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಎಸ್ಟಿಪಿಗಳ ಕಾರ್ಯಕ್ಷಮತೆಯ ಕುರಿತು ಮತ್ತು 380 ಎಮ್ಎಲ್ಡಿ ಒಳಚರಂಡಿ ಸಂಸ್ಕರಣೆ, ವಿಲೇವಾರಿಯ ಬಗ್ಗೆ ಸ್ಪಷ್ಟನೆ ನೀಡಬೇಕು. ಕಸ ಸಂಗ್ರಹ ಸ್ಥಳಗಳಿಗೆ ಹೊಸ ಕಸವನ್ನು ಸೇರಿಸದಂತೆ ನೋಡಿಕೊಳ್ಳಬೇಕು. 2027ರ ವೇಳೆಗೆ ಹಳೆಯ ಕಸವನ್ನು ಸಂಸ್ಕರಿಸುವ ಗುರಿ ಸಾಧಿಸಿ. ಕರ್ನಾಟಕದ 316 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿದಿನ 12,701 ಟನ್‌ಗಳಷ್ಟು ಕಸ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಕೇವಲ 10,031 ಟನ್‌ಗಳನ್ನು ಮಾತ್ರ ಸಂಸ್ಕರಿಸಲಾಗುತ್ತಿದೆ. ಇದರಿಂದ 2,670 ಟನ್‌ಗಳ ಕಸ ಸಂಸ್ಕರಣೆಯ ಕೊರತೆ ಉಂಟಾಗಿದೆ ಸೂಚನೆ ನೀಡಿದೆ.
ಇದನ್ನೂ ಓದಿ: 50 ಕೋಟಿ ರೂ. ಮೌಲ್ಯದ ಶ್ವಾನ ಖರೀದಿಸಿದ್ದೇನೆ ಎಂದು ಬಿಲ್ಡಪ್ ಕೊಟ್ಟಿದ್ದ ಬೆಂಗಳೂರಿನ ವ್ಯಕ್ತಿಗೆ ಇಡಿ ಶಾಕ್
ಬೆಂಗಳೂರಿನ ಗಂಭೀರ ಸ್ಥಿತಿ ಬಗ್ಗೆ ಎನ್‌ಜಿಟಿ ಕಳವಳ
ಬೃಹತ್ ಬೆಂಗಳೂರು ಮಹಾನಗರ ಪಾಲೀಕೆ ವ್ಯಾಪ್ತಿಯಲ್ಲಿ ಸಿ ಮತ್ತು ಡಿ ಕಸ ಸಂಸ್ಕರಣೆಯಲ್ಲಿ 3,000 ಟನ್‌ಗಳ ಕೊರತೆ ಇದೆ. ಸಂಸ್ಕರಿಸದ ಕಸ ಕ್ವಾರಿಗಳಲ್ಲಿ ಅಥವಾ ಭೂಗುಂಡಿಗಳಲ್ಲಿ ತುಂಬಿಸಲಾಗುತ್ತಿದೆ. ಪ್ರಸ್ತುತ 845 ಟನ್ ಹಸಿ ಕಸವನ್ನು ಟೆಂಡರ್‌ಗಳ ಮೂಲಕ ಸಂಸ್ಕರಣೆ ಮಾಡಲಾಗುತ್ತಿದೆ. ಬಿಬಿಎಂಪಿ 9 ಕಡೆಗಳಲ್ಲಿ 58.89 ಲಕ್ಷ ಮೆಟ್ರಿಕ್ ಟನ್ ಹಳೇ ಕಸ ಶೇಖರಿಸಿದೆ. ಒಟ್ಟು 67.72 ಲಕ್ಷ ಮೆಟ್ರಿಕ್ ಟನ್ ಕಸ ಸಂಸ್ಕರಣೆಯಾಗದೆ ಉಳಿದಿದೆ. ರಾಜ್ಯದ 192 ಸ್ಥಳಗಳಲ್ಲಿ 67.72 ಲಕ್ಷ ಮೆಟ್ರಿಕ್ ಟನ್ ಕಸ ಸಂಸ್ಕರಣೆಯಾಗದೆ ಉಳಿದಿದೆ. ಈ ವಿಷಕಾರಿ ಕಸದಿಂದ ಅಂತರ್ಜಲ ಮಾಲಿನ್ಯವಾಗ್ತಿದೆ ಎಂದು ಎನ್‌ಜಿಟಿ ಆಕ್ರೋಶ ವ್ಯಕ್ತಪಡಿಸಿದೆ.
ಕಸಕ್ಕೂ ಕಟ್ಟಬೇಕು ಟ್ಯಾಕ್ಸ್
ಮನೆ, ಅಂಗಡಿ ಮುಂಗಟ್ಟಿನ ಕಸಕ್ಕೂ ತೆರಿಗೆ ಪಾವತಿ ಮಾಡಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆ ಸೂಚಿಸಿದೆ. ಈ ವಿಚಾರವಾಗಿ ಬಿಬಿಎಂಪಿ ಬಜೆಟ್ನಲ್ಲೂ ಘೋಷಣೆ ಮಾಡಲಾಗಿದೆ. ಈ ಮೂಲಕ 600 ಕೋಟಿ ರೂಪಾಯಿ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ಗುರಿ ಹಾಕಿಕೊಂಡಿದೆ.
ಎಷ್ಟಿರಲಿದೆ ಬಿಬಿಎಂಪಿ ಕಸ ತೆರಿಗೆ?
ಅಂಗಡಿ–ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ತೆರಿಗೆ ವಸೂಲಿಗೆ ಪಾಲಿಕೆ ಸಜ್ಜಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಹೆಚ್ಚಾಗುತ್ತಿದ್ದು, ಈ ಕಾರಣದಿಂದ ತೆರಿಗೆ ವಿಧಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ. ಕಟ್ಟಡದ ವಿಸ್ತೀರ್ಣದ ಆಧಾರತದ ಮೇಲೆ ಕಸದ ಶುಲ್ಕ ನಿಗದಿಪಡಿಸಲಾಗುತ್ತದೆ. ಆಸ್ತಿ ತೆರಿಗೆ ಜೊತೆಯೇ ಕಸ ತೆರಿಗೆಯನ್ನೂ ಪಾಲಿಕೆ ಸಂಗ್ರಹ ಮಾಡಲಿದೆ.