ಸಂತ್ರಸ್ತೆ ಜತೆ ಮಡೆನೂರು ಮನು ನಡೆಸಿದ 31 ತಿಂಗಳ ವಾಟ್ಸಪ್ ಚಾಟ್ ಲಭ್ಯ
ಅತ್ಯಾಚಾರ ಪ್ರಕರಣದಲ್ಲಿ ನಟ ಮಡೆನೂರು ಮನು ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆ ವೇಳೆ ಹಲವು ಶಾಕಿಂಗ್ ಸಂಗತಿಗಳು ಹೊರಗೆ ಬರುತ್ತಿವೆ. ಮಡೆನೂರು ಮನು ಹಾಗೂ ಸಂತ್ರಸ್ತೆ ನಡುವಿನ ವಾಟ್ಸಪ್ ಸಂದೇಶವನ್ನು ಪೊಲೀಸರು ಈಗ ಪಡೆದುಕೊಂಡಿದ್ದಾರೆ. ಇದರಿಂದಾಗಿ ಅನೇಕ ವಿಷಯಗಳು ಬೆಳಕಿಗೆ ಬಂದಿವೆ.

‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಿಂದ ಖ್ಯಾತಿ ಗಳಿಸಿದ್ದ ನಟ ಮಡೆನೂರು ಮನು (Madenur Manu) ಅವರು ಅತ್ಯಾಚಾರ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅವರನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ತನಿಖೆ ಚುರುಕುಕೊಂಡಿದೆ. ಸ್ನೇಹಿತೆಯೂ ಆಗಿರುವ ಸಹ-ನಟಿ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಮನು ಮೇಲಿದೆ. ಈ ಕೇಸ್ಗೆ (Madenur Manu Case) ಸಂಬಂಧಪಟ್ಟಂತೆ ಮಡೆನೂರು ಮನು ಹಾಗೂ ಸಂತ್ರಸ್ತೆ ನಡುವೆ ವಿನಿಮಯ ಆಗಿರುವ ವಾಟ್ಸಪ್ ಸಂದೇಶವನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಬರೋಬ್ಬರಿ 31 ತಿಂಗಳುಗಳ ವಾಟ್ಸಪ್ ಚಾಪ್ (Whatsapp Chat) ಪಡೆಯಲಾಗಿದೆ. ಇದರಿಂದಾಗಿ ಪೊಲೀಸರಿಗೆ ಹಲವು ಮಾಹಿತಿ ಲಭ್ಯವಾಗಿದೆ.
ಸಂತ್ರಸ್ತೆ ಹಾಗೂ ಮನು ಮಧ್ಯೆ ಸಾವಿರಾರು ಸಂದೇಶಗಳು ವಿನಿಮಯ ಆಗಿವೆ. 2022ರ ನವೆಂಬರ್ನಿಂದ 2025ರ ಮೇ ತಿಂಗಳವರೆಗಿನ ವಾಟ್ಸಪ್ ಚಾಟ್ ಪಡೆಯಲಾಗಿದೆ. ಮದುವೆ ಹೆಸರಿನಲ್ಲಿ ಅತ್ಯಾಚಾರವೆಸಗಿ ದೈಹಿಕ ಹಲ್ಲೆ ಮಾಡಿದ್ದಾನೆ. ಜೀವ ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ. ಹಾಗಾಗಿ ಪೊಲೀಸರು ಮನು ಅವರನ್ನು ಕಸ್ಟಡಿಗೆ ಪಡೆದು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ.
ಮನುಗೆ ಸೇರಿದ 2 ಮೊಬೈಲ್ ಫೋನ್ ಹಾಗೂ ಸಂತ್ರಸ್ತೆಯ 2 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಪೊಲೀಸರು ಒಟ್ಟು 4 ಮೊಬೈಲ್ಗಳನ್ನು ಎಫ್ಎಸ್ಎಲ್ಗೆ ಕಳಿಸಿದ್ದಾರೆ. ಸಂತ್ರಸ್ತೆ ಮತ್ತು ಮನು ನಡುವಿನ ಆಡಿಯೋ, ವಿಡಿಯೋ ಸಂಭಾಷಣೆಯಲ್ಲಿ ಹಲವು ನಟ-ನಟಿಯರ ಹೆಸರು ಕೇಳಿಬಂದಿದೆ. ಆದ್ದರಿಂದ ತನಿಖೆಯ ಭಾಗವಾಗಿ ಸಿನಿತಾರೆಯರ ಹೇಳಿಕೆ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೆಲವು ಕಿರುತೆರೆ ನಟ, ನಟಿ ಸೇರಿದಂತೆ ಸಿನಿಮಾ ತಾರೆಯರ ಹೇಳಿಕೆ ದಾಖಲು ಮಾಡಲಾಗುವುದು. ಈ ಹಿಂದೆ ಸಂತ್ರಸ್ತೆ ದೂರು ನೀಡಲು ಮುಂದಾಗಿದ್ದಾಗ ಕೆಲವರು ತಡೆದಿದ್ದರು ಎನ್ನಲಾಗಿದೆ. ವಿಚಾರ ಗೊತ್ತಿದ್ದರೂ ದೂರು ನೀಡದಂತೆ ತಡೆದಿದ್ದ ಸಿನಿತಾರೆಯರನ್ನು ಪೊಲೀಸರು ಈಗ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಪ್ರಕರಣದಲ್ಲಿ ಹಲವು ಸೆಲೆಬ್ರಿಟಿಗಳ ಹೆಸರು ಹೊರಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಮಡೆನೂರು ಮನೆಗೆ ಸಂಬಂಧಿಸಿದ ಹಲವು ವಿಡಿಯೋ ಮತ್ತು ಆಡಿಯೋ ತುಣುಕುಗಳು ಈಗಾಗಲೇ ವೈರಲ್ ಆಗಿವೆ. ಸಂತ್ರಸ್ತೆ ಜೊತೆ ತಾವು ದೈಹಿಕ ಸಂಪರ್ಕ ಹೊಂದಿರುವುದು ಹಾಗೂ ತಾಳಿ ಕಟ್ಟಿರುವ ಬಗ್ಗೆ ಅವರು ಮಾತನಾಡಿದ್ದಾರೆ. ಅಲ್ಲದೇ, ಕನ್ನಡ ಚಿತ್ರರಂಗದ ಸ್ಟಾರ್ ನಟರ ಬಗ್ಗೆ ಮನು ಕೀಳಾಗಿ ಮಾತನಾಡಿರುವ ಆಡಿಯೋ ಕೂಡ ವೈರಲ್ ಆಗಿದ್ದು, ಸಿನಿಪ್ರಿಯರ ಆಕ್ರೋಶಕ್ಕೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







