‘ಅಪ್ಪಾಜಿ ಜೊತೆ ಮಾತನಾಡಿದಂತೆ ಭಾಸವಾಯ್ತು’; ಕಮಲ್ ಹಾಸನ್ ಜೊತೆಗಿನ ಸಂಭಾಷಣೆ ನೆನಪಿಸಿಕೊಂಡ ಶಿವಣ್ಣ
ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರದ ಆಡಿಯೋ ಲಾಂಚ್‌ನಲ್ಲಿ ಶಿವರಾಜ್ ಕುಮಾರ್ ಅವರು ಭಾಗವಹಿಸಿದ್ದರು. ಶಿವಣ್ಣ ಅವರು ಕಮಲ್ ಹಾಸನ್ ಜೊತೆಗಿನ ತಮ್ಮ ಆತ್ಮೀಯ ಬಾಂಧವ್ಯವನ್ನು ಹಂಚಿಕೊಂಡರು. ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಕಮಲ್ ಹಾಸನ್ ಅವರಿಂದ ಬಂದ ಕರೆ ಅವರಿಗೆ ಎಷ್ಟು ಸಂತೋಷ ನೀಡಿತು ಎಂಬ ಮಾಹಿತಿಯನ್ನು ಶಿವಣ್ಣ ಹಂಚಿಕೊಂಡರು.

ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಚೆನ್ನೈನಲ್ಲಿ ನಡೆಯಿತು. ಇದಕ್ಕೆ ಸ್ಟಾರ್ ಹೀರೋಗಳು ಅತಿಥಿಯಾಗಿ ಬಂದಿದ್ದರು. ಕಮಲ್ ಹಾಸನ್ ಅವರ ಒಳ್ಳೆಯ ಗೆಳೆಯ ಹಾಗೂ ಕನ್ನಡ ಚಿತ್ರರಂಗದ ಸ್ಟಾರ್ ಹೀರೋ ಶಿವರಾಜ್ಕುಮಾರ್ ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿ ಹಾಕಿದ್ದರು. ಈ ವೇಳೆ ಅವರು ಕಮಲ್ ಹಾಸನ್ ಜೊತೆಗಿನ ಬಾಂಡ್ನ ನೆನಪಿಸಿಕೊಂಡರು. ಕಮಲ್ ಹಾಸನ್ ಜೊತೆ ಮಾತನಾಡುವಾಗ ತಂದೆಯ ಜೊತೆ ಮಾತನಾಡಿದಂತೆ ಶಿವಣ್ಣನಿಗೆ ಅನಿಸಿತ್ತು.
ರಾಜ್ಕುಮಾರ್ ಕನ್ನಡದ ಸ್ಟಾರ್ ಹೀರೋ. ದಕ್ಷಿಣದ ಬಹುತೇಕರಿಗೆ ರಾಜ್ಕುಮಾರ್ ಪರಿಚಯ ಇತ್ತು. ಕಮಲ್ ಹಾಸನ್ ಬೆಂಗಳೂರಿಗೆ ಬಂದಾಗ ರಾಜ್ಕುಮಾರ್ ಅವರನ್ನು ಭೇಟಿ ಮಾಡಿಯೇ ಹೋಗುತ್ತಿದ್ದರು. ಒಮ್ಮೆ ಕಮಲ್ ಹಾಸನ್ ಅವರು ಅಣ್ಣಾವ್ರ ಮನೆಗೆ ಬಂದಿದ್ದರು. ಆಗ ನಡೆದ ಘಟನೆಯನ್ನು ಶಿವಣ್ಣ ನೆನಪಿಸಿಕೊಂಡಿದ್ದಾರೆ.
‘ಒಮ್ಮೆ ಕಮಲ್ ಅವರು ನಮ್ಮ ಮನೆಗೆ ಬಂದಿದ್ದರು. ಅವರು ಹಾಗೂ ನನ್ನ ತಂದೆ ಮಾತನಾಡುತ್ತಿದ್ದರು. ಕಮಲ್ ಹಾಸನ್ ಅವರನ್ನೇ ನಾನು ನೋಡುತ್ತಿದ್ದೆ. ನಾನು ರಾಜ್ಕುಮಾರ್ ಮಗ ಅನ್ನೋದು ಅವರಿಗೆ ತಿಳಿಯಿತು. ಅವರು ಬಂದು ನನಗೆ ಹ್ಯಾಂಡ್ಶೇಕ್ ಮಾಡಿದರು. ನಾನು ಹಗ್ ಕೊಡಬಹುದೇ ಎಂದು ಕೇಳಿದೆ. ಅವರು ಓಕೆ ಎಂದರು. ಅಪ್ಪುಗೆ ಕೊಟ್ಟ ಬಳಿಕ ನಾನು ಮೂರು ದಿನ ಸ್ನಾನವನ್ನೇ ಮಾಡಲಿಲ್ಲ. ನಾನು ಅಷ್ಟು ದೊಡ್ಡ ಅಭಿಮಾನಿ. ಕಮಲ್ ಹಾಸನ್ ಸಿನಿಮಾಗಳನ್ನು ನಾನು ಮೊದಲ ದಿನ ಮೊದಲ ಶೋನೇ ನೋಡೋದು’ ಎಂದು ಶಿವಣ್ಣ ಹೇಳಿದ್ದರು.
ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ಸರ್ಜರಿಗಾಗಿ ಮಿಯಾಮಿಗೆ ತೆರಳಿದ್ದರು. ಈ ವೇಳೆ ಕಮಲ್ ಅವರು ಶಿವರಾಜ್ಕುಮಾರ್ಗೆ ಕರೆ ಮಾಡಿದ್ದರು. ಆ ಘಟನೆಯನ್ನು ಶಿವಣ್ಣ ನೆನಪಿಸಿಕೊಂಡಿದ್ದಾರೆ. ‘ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾನು ಶಸ್ತ್ರಚಿಕಿತ್ಸೆಗಾಗಿ ಮಿಯಾಮಿಯಲ್ಲಿದ್ದೆ. ಕಮಲ್ ಸರ್ ನನಗೆ ಕರೆ ಮಾಡಿ ಮಾತನಾಡಿದರು. ಆ ಸಮಯದಲ್ಲಿ ಅವರು ಚಿಕಾಗೋದಲ್ಲಿದ್ದರು. ಅವರ ಕರೆ ನನಗೆ ಖುಷಿ ನೀಡಿತು’ ಎಂದಿದ್ದಾರೆ ಶಿವರಾಜ್ಕುಮಾರ್.
ಇದನ್ನೂ ಓದಿ: ಶಿವರಾಜ್ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..
ಶಿವರಾಜ್ಕುಮಾರ್ ಜೊತೆ ಮಾತನಾಡಿದ ಬಳಿಕ ಕಮಲ್ ಹಾಸನ್ ಅವರು ಅತ್ತರಂತೆ. ‘ಕಮಲ್ ಹೇಳಿದ ಆ ಮಾತನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ನನ್ನ ತಂದೆಯೊಂದಿಗೆ ಮಾತನಾಡುತ್ತಿರುವಂತೆ ಭಾಸವಾಯಿತು’ ಎಂದು ಶಿವಣ್ಣ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




