‘ಕುಲದಲ್ಲಿ ಕೀಳ್ಯಾವುದೋ’ ಟೈಟಲ್ ಸಿಕ್ಕಿದ್ದು ಅಣ್ಣಾವ್ರ ಆಶೀರ್ವಾದ: ಮಡೆನೂರು ಮನು
ಮಡೆನೂರು ಮನು ನಟಿಸಿರುವ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮೇ 23ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಮೂಲಕ ಹೀರೋ ಆಗಿ ಅವರು ಹೊಸ ಪಯಣ ಶುರು ಮಾಡುತ್ತಿದ್ದಾರೆ. ಸಾಕಷ್ಟು ತಯಾರಿ ಮಾಡಿಕೊಂಡು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮನು ಅವರಿಗೆ ಜೋಡಿಯಾಗಿ ಮೌನ ಗುಡ್ಡೇಮನೆ ಅಭಿನಯಿಸಿದ್ದಾರೆ.

‘ಕಾಮಿಡಿ ಕಿಲಾಡಿಗಳು’ (Comedy Khiladigalu) ಖ್ಯಾತಿಯ ನಟ ಮಡೆನೂರು ಮನು ಅವರು ಟಿವಿ ಶೋಗಳಲ್ಲಿ ಎಲ್ಲರನ್ನೂ ನಗಿಸುತ್ತಿದ್ದರು. ಈಗ ಅವರು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಮೇ 23ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಮೇಲೆ ಮಡೆನೂರು ಮನು (Madenur Manu) ಅವರು ತುಂಬ ಭರವಸೆ ಇಟ್ಟುಕೊಂಡಿದ್ದಾರೆ. ಬಿಡುಗಡೆ ಹೊಸ್ತಿಲಿನಲ್ಲಿ ಚಿತ್ರತಂಡದವರು ವಿವಿಧ ಕಡೆಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಹೆಚ್ಚು ಜನರಿಗೆ ತಲುಪಿಸಬೇಕು ಎಂಬ ಕಾರಣಕ್ಕೆ ಮಡೆನೂರು ಮನು ಪ್ರಯತ್ನಿಸುತ್ತಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ’ (Kuladalli Keelyavudo) ಶೀರ್ಷಿಕೆಯೇ ತಮಗೆ ಪ್ಲಸ್ ಆಗಿದೆ ಎಂದು ಅವರು ಹೇಳಿದ್ದಾರೆ.
‘ಕುಲದಲ್ಲಿ ಕೀಳ್ಯಾವುದೋ’ ಎಂಬ ಟೈಟಲ್ ಕೇಳಿದ ತಕ್ಷಣ ಇದು ಜಾತಿ ಸಂಘರ್ಷದ ಬಗ್ಗೆ ಇರುವ ಸಿನಿಮಾ ಎಂಬ ಅನಿಸಿಕೆ ಮೂಡುತ್ತದೆ. ಆದರೆ ಸಿನಿಮಾದಲ್ಲಿ ಬೇರೆಯೇ ಕಥೆ ಇದೆ, ಊಹೆ ಮಾಡಲಾಗದ ಟ್ವಿಸ್ಟ್ಗಳು ಇವೆ ಎಂದು ಮನು ಮಡೆನೂರು ಅವರು ಹೇಳಿದ್ದಾರೆ. ಈ ಟೈಟಲ್ ಸಿಕ್ಕಿದ್ದಕ್ಕೆ ಅವರಿಗೆ ಖುಷಿ ಇದೆ. ಈಗಾಗಲೇ ಜನರಿಗೆ ಈ ಶೀರ್ಷಿಕೆ ತಲುಪಿದೆ ಎಂದು ಅವರು ಹೇಳಿದ್ದಾರೆ.
‘ಶುಕ್ರವಾರ ಜನರು ನಮ್ಮ ಸಿನಿಮಾ ನೋಡಿ ಹೊರಗೆ ಬಂದಾಗ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಲು ನಾನು ಕಾಯುತ್ತಿದ್ದೇನೆ. ಒಳ್ಳೆಯ ಸಿನಿಮಾ ಮಾಡಿದ್ದೇವೆ. ಸಿನಿಮಾ ನೋಡಿದವರು ನಾಲ್ಕು ಜನಕ್ಕೆ ಹೇಳುತ್ತಾರೆ ಎಂಬ ನಂಬಿಕೆ ಇದೆ. ಮಾಸ್ ಮನರಂಜನೆ ಇದೆ. ಈ ಟೈಟಲ್ ಬಗ್ಗೆ ಹೇಳಬೇಕೆಂದರೆ, ಕುಲದಲ್ಲಿ ಕೀಳ್ಯಾವುದೋ ಹಾಡು ಇಡೀ ರಾಜ್ಯದಲ್ಲಿ ಫೇಮಸ್. ಆ ಟೈಟಲ್ ನಮಗೆ ಸಿಕ್ಕಿದ್ದು ಅಣ್ಣಾವ್ರ ಮತ್ತು ದಾಸರ ಆಶೀರ್ವಾದ’ ಎಂದು ಮಡೆನೂರು ಮನು ಅವರು ಹೇಳಿದ್ದಾರೆ.
‘ಈ ಸಿನಿಮಾದಲ್ಲಿ ಮನರಂಜನೆಯ ಪ್ಯಾಕೇಜ್ ಇದೆ. ಈ ಸಿನಿಮಾ ನನಗೆ ತುಂಬ ಮುಖ್ಯ. 18 ವರ್ಷದ ಜರ್ನಿಯಲ್ಲಿ ಇದು ನನಗೆ ಹೊಸ ಆರಂಭ. ಈ ಸಿನಿಮಾಗೆ ಸಾಕಷ್ಟು ತಯಾರಿ ಮಾಡಿಕೊಂಡು ನಟಿಸಿದ್ದೇನೆ. ಜಿಮ್ ಮಾಡಿ, ಫೈಟ್, ಡ್ಯಾನ್ಸ್ ಕಲಿತು ಎರಡೂವರೆ ವರ್ಷದಿಂದ ಟೈಮ್ ಕೊಟ್ಟಿದ್ದೇನೆ. ಬೇರೆ ಯಾವುದೇ ಶೋ, ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಈ ಚಿತ್ರದಲ್ಲಿ ತೊಡಗಿಕೊಂಡಿದ್ದೇನೆ’ ಎಂದಿರುವ ಮಡೆನೂರು ಮನು ಅವರು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದ ಯಶಸ್ಸಿಗಾಗಿ ಕಾದಿದ್ದಾರೆ.
ಇದನ್ನೂ ಓದಿ: ಅಂದು ಭಾಷೆಗಾಗಿ, ಇಂದು ದೇಶಕ್ಕಾಗಿ: ‘ಕುಲದಲ್ಲಿ ಕೀಳ್ಯಾವುದೋ’ ತಂಡದಿಂದ ಜನ ಮೆಚ್ಚುವ ಕಾರ್ಯ
ಕೆ. ರಾಮ್ ನಾರಾಯಣ್ ಅವರು ‘ಕುಲದಲ್ಲಿ ಕೀಳ್ಯಾವುದೋ’ ಹುಚ್ಚಪ್ಪ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಂತೋಷ್ ಕುಮಾರ್ ಮತ್ತು ವಿದ್ಯಾ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಮನೋಮೂರ್ತಿ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಯೋಗರಾಜ್ ಭಟ್ ಮತ್ತು ಇಸ್ಲಾವುದ್ದೀನ್ ಅವರು ಕಥೆ ಬರೆದಿದ್ದಾರೆ. ಮೌನ ಗುಡ್ಡೇಮನೆ, ಶರತ್ ಲೋಹಿತಾಶ್ವ, ಸೋನಲ್ ಮಾಂತೆರೋ, ನಯನಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








