ಅಂದು ಭಾಷೆಗಾಗಿ, ಇಂದು ದೇಶಕ್ಕಾಗಿ: ‘ಕುಲದಲ್ಲಿ ಕೀಳ್ಯಾವುದೋ’ ತಂಡದಿಂದ ಜನ ಮೆಚ್ಚುವ ಕಾರ್ಯ
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರ್ ಮನು ನಟನೆಯ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ನಿವೃತ್ತ ಯೋಧರಿಂದ ಟ್ರೇಲರ್ ರಿಲೀಸ್ ಮಾಡಿಸಿದ್ದು ವಿಶೇಷ. ‘ನಮ್ಮ ಸಿನಿಮಾದಿಂದ ಬರುವ ಲಾಭದ 30ರಷ್ಟು ಭಾಗವನ್ನು ಯೋಧರಿಗೆ ಅರ್ಪಿಸುತ್ತೇವೆ’ ಎಂದು ನಿರ್ಮಾಪಕ ಸಂತೋಷ್ ಕುಮಾರ್ ಅವರು ಹೇಳಿದ್ದಾರೆ.

ಹಲವು ಕಾರಣಗಳಿಂದ ‘ಕುಲದಲ್ಲಿ ಕೀಳ್ಯಾವುದೋ’ (Kuladalli Keelyavudo) ಸಿನಿಮಾ ತಂಡ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಸೋನು ನಿಗಮ್ ಅವರು ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿದ್ದನ್ನು ಖಂಡಿಸಿ ಈ ಚಿತ್ರತಂಡದವರು ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡರು. ಸೋನು ನಿಗಮ್ ಹಾಡಿದ್ದು ಒಂದು ಹಾಡನ್ನು ಸಿನಿಮಾದಿಂದ ತೆಗೆದು ಹಾಕಲಾಗಿತ್ತು. ಅದು ಭಾಷಾಭಿಮಾನಕ್ಕಾಗಿ ಮಾಡಿದ ಕಾರ್ಯ. ಈಗ ದೇಶಾಭಿಮಾನಕ್ಕಾಗಿ ನಿವೃತ್ತ ಯೋಧರಿಂದ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದ ಟ್ರೇಲರ್ (Kuladalli Keelyavudo Trailer) ಬಿಡುಗಡೆ ಮಾಡಿಸಲಾಗಿದೆ. ಚಿತ್ರತಂಡದ ಈ ಕಾರ್ಯವನ್ನು ಜನರು ಮೆಚ್ಚಿದ್ದಾರೆ.
ಮೇ 23ರಂದು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಬಿಡುಗಡೆ ಆಗಲಿದೆ. ‘ಯೋಗರಾಜ್ ಸಿನಿಮಾಸ್’ ಈ ಚಿತ್ರವನ್ನು ಅರ್ಪಿಸುತ್ತಿದೆ. ‘ಪರ್ಲ್ ಸಿನಿ ಕ್ರಿಯೇಷನ್ಸ್’ ಮೂಲಕ ಸಂತೋಷ್ ಕುಮಾರ್ ಎ.ಕೆ. ಹಾಗೂ ವಿದ್ಯಾ ಅವರು ನಿರ್ಮಾಣ ಮಾಡಿದ್ದಾರೆ. ಕೆ. ರಾಮ್ ನಾರಾಯಣ್ ಅವರು ನಿರ್ದೇಶನ ಮಾಡಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರ್ ಮನು ಅವರು ಹೀರೋ ಆಗಿ ನಟಿಸಿದ್ದಾರೆ. ಮೌನ ಗುಡ್ಡೆಮನೆ ನಾಯಕಿಯಾಗಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಇದೆ. ಈ ಸಂದರ್ಭದಲ್ಲಿ ಎಲ್ಲರೂ ಯೋಧರಿಗೆ ಸೆಲ್ಯೂಟ್ ಎನ್ನುತ್ತಿದ್ದಾರೆ. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದ ಟ್ರೇಲರ್ ಅನ್ನು ನಿವೃತ್ತ ಯೋಧರಿಂದ ರಿಲೀಸ್ ಮಾಡಿಸಲಾಗಿದೆ. ನಿವೃತ್ತ ಯೋಧರಾದ ಮಂಜುನಾಥ್, ದೇವರಾಜ್, ಜಯರಾಮ್, ಅಶೋಕ್ ಕುಮಾರ್, ಮಧುಸೂದನ್, ಸತ್ಯಂ, ಶೇಖರ್ ಅವರು ಟ್ರೇಲರ್ ಬಿಡುಗಡೆ ಮಾಡಿದರು.
ನಿರ್ದೇಶಕ ರಾಮ್ ನಾರಾಯಣ್ ಅವರು ಮಾತನಾಡಿ, ‘ದೇಶಕ್ಕೆ ಸೇವೆ ಸಲ್ಲಿಸಿದ ನಿವೃತ್ತ ಯೋಧರಿಂದ ನಮ್ಮ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು ಬಹಳ ಖುಷಿ ಮತ್ತು ಹೆಮ್ಮೆಯ ಸಂಗತಿ’ ಎಂದರು. ಮೌನ ಗುಡ್ಡಮನೆ, ತಬಲಾ ನಾಣಿ, ಹರೀಶ್ ರಾಜ್, ಕರಿಸುಬ್ಬು, ಡ್ರ್ಯಾಗನ್ ಮಂಜು, ಸೀನ ಭಾಯ್, ಎಂ.ಎಸ್. ಉಮೇಶ್ ಮುಂತಾದವರು ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಾಯಕ ಮಡೆನೂರ್ ಮನು ಮಾತನಾಡಿ, ‘ನಮ್ಮ ಸಿನಿಮಾಗೆ ಯೋಗರಾಜ್ ಭಟ್ ಮತ್ತು ಇಸ್ಲಾಮುದ್ದೀನ್ ಅವರು ಒಳ್ಳೆಯ ಕಥೆ ಮಾಡಿದ್ದಾರೆ. ಆ ಕಥೆ ಖಂಡಿತಾ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ನನ್ನ ಮೇಲೆ ನಂಬಿಕೆ ಇಟ್ಟು ಬಂಡವಾಳ ಹೂಡಿದ ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದರು. ಸೋನಲ್ ಮೊಂತೆರೋ ಅವರು ಕೂಡ ಈ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದಾರೆ.
ಇದನ್ನೂ ಓದಿ: ‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
‘ಚಿತ್ರರಂಗದಲ್ಲಿ ಹೊಸ ನಿರ್ಮಾಪಕರನ್ನು ದುರುಪಯೋಗ ಮಾಡಿಕೊಳ್ಳುವವರೇ ಹೆಚ್ಚು ಎಂದು ಅನೇಕರು ನನಗೆ ಹೇಳಿದ್ದರು. ಆದರೆ ನನ್ನ ಚಿತ್ರತಂಡವು ನಿರ್ಮಾಪಕರ ಪರವಾಗಿ ನಿಂತಿದೆ. ಯಾರಿಂದಲೂ ನನಗೆ ಯಾವ ಸಂದರ್ಭದಲ್ಲೂ ಬೇಜಾರಾಗಿಲ್ಲ. ಇಂಥ ತಂಡವನ್ನು ನನಗೆ ಪರಿಚಯಿಸಿದ ಯೋಗರಾಜ್ ಭಟ್ ಅವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ನಿರ್ಮಾಪಕ ಸಂತೋಷ್ ಕುಮಾರ್ ಹೇಳಿದರು. ಮೇ 23ರಂದು ಈ ಸಿನಿಮಾ ತೆರೆಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.